ಬೆಳಗಾವಿ-04: ಹತ್ತು ವರ್ಷಗಳ ಹಿಂದೆ ಜಗತ್ತಿನಲ್ಲಿ ದುರ್ಬಲ ಆರ್ಥಿಕತೆಯ ರಾಷ್ಟ್ರ ಎಂದೇ ಬಿಂಬಿತವಾಗಿದ್ದ ಭಾರತ, ಈಗ ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ, ಸಮರ್ಥ ಆಡಳಿತದ ಪರಿಣಾಮ ಐದನೇ ಶಕ್ತಿಯುತ ರಾಷ್ಟ್ರ ವಾಗಿ ಹೊರಹೊಮ್ಮಿದೆ. ಇದನ್ನು ಮೂರನೇ ಸ್ಥಾನಕ್ಕೆ ಕೊಂಡೊಯ್ಯುವ ಗುರಿ ಹೋಂದಲಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದ್ದಾರೆ.
ಬೆಳಗಾವಿ ಆಂಜನೇಯ ನಗರ (ಕೆ.ಎಂ.ಎಫ್.ಡೇರಿ) ಹತ್ತಿರ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನದ 10 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಬಸ್ ಪ್ರಯಾಣಿಕರ ತಂಗುದಾಣವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಮೋದಿ ಗ್ಯಾರಂಟಿ ಬಗ್ಗೆ ಮಾತ್ರ ಜನರಿಗೆ ವಿಶ್ವಾಸವಿದೆ. ಉಳಿದ ಗ್ಯಾರಂಟಿಗಳ ಬಗ್ಗೆ ವಿಶ್ವಾಸ ಇಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆಯ ಸವಲತ್ತು ತಲುಪಬೇಕು ಎಂಬ ದೃಷ್ಟಿಕೋನದ ಹಿನ್ನಲೆಯಲ್ಲಿ ಪಕ್ಷದ ಧ್ಯೇಯವನ್ನು ಪ್ರಧಾನಿಯವರು ಈಡೇರಿಸಿದ್ದಾರೆ. ದೇಶದ 12 ಕೋಟಿ ರೈತರಿಗೆ ಕಿಸಾನ್ ಸಮ್ಮಾನ ಯೋಜನೆಯಡಿ ಪ್ರತಿ ವರ್ಷ 6 ಸಾವಿರ ರೂಪಾಯಿಗಳನ್ನು ನೀಡಿದ್ದೇವೆ. 4 ಕೋಟಿ ಮನೆ ನಿರ್ಮಾಣ ಮಾಡಿದೆ. 10 ಕೋಟಿ ಮಹಿಳೆಯರಿಗೆ ಉಚಿತ ಉಜ್ವಲಾ ಗ್ಯಾಸ ಸಿಲಿಂಡರ್ ವಿತರಿಸಲಾಗಿದೆ, 12ಕೋಟಿ ಬಡವರ ಮನೆಗಳಿಗೆ ಶೌಚಾಲಯ ನಿರ್ಮಾಣ ಮಾಡಲಾಗಿದೆ, 55 ಕೋಟಿ ಜನರಿಗೆ ಆಯುಷ್ಮಾನ ಭಾರತ ಯೋಜನೆಯಡಿ ರೂ.5ಲಕ್ಷದವರೆಗೆ ಉಚಿತ ಚಿಕಿತ್ಸೆ, ದೇಶದ 81 ಕೋಟಿ ಜನರಿಗೆ ಉಚಿತ ಪಡಿತರ ನೀಡಲಾಗಿದೆ ಎಂದರಲ್ಲದೇ ಮುಂದಿನ 5 ವರ್ಷಗಳವರೆಗೂ ಉಚಿತ ಪಡಿತರ ನೀಡಲಿದ್ದೇವೆ ಎಂದರು.
ಈ ಭಾಗದ ಜನತೆ ಹೊಸ ಬಸ್ ನಿಲ್ದಾಣ ನಿರ್ಮಾಣ ಮಾಡುವಂತೆ ಬೇಡಿಕೆ ಇಟ್ಟಿದ್ದರು. ಆಂಜನೇಯ ನಗರದ ನಿವಾಸಿಗಳಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಈ ಬಸ್ ನಿಲ್ದಾಣ ನಿರ್ಮಿಸಲಾಗುತ್ತಿದೆ. ಈ ಭಾಗದ ಜನ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಅನೀಲ ಬೆನಕೆ, ನಗರ ಸೇವಕರಾದ ರಾಜಶೇಖರ ದೋಣಿ, ಮುರಘೇಂದ್ರಗೌಡ ಪಾಟೀಲ, ಭಾರತಿ ಮಹಿಳಾ ಅಭಿವೃದ್ಧಿ ಸಂಘ ರಾಜಶ್ರೀ ಅಕ್ಕಿ. ಉಪಾಧ್ಯಕ್ಷರು ವಿದ್ಯಾ ವಡವಡೆ, ಕಾರ್ಯದರ್ಶಿ ಫಡಿಪಾಟೀಲ್ ಸೇರಿದಂತೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.