29/01/2026
IMG-20260128-WA0002

ಬೆಳಗಾವಿ-28: ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಸುಧಾರಣೆಗೆ ಈಗಿನಿಂದಲೇ ಎಲ್ಲ ಶಿಕ್ಷಕರು ಹಾಗೂ ಇಲಾಖೆಯ ಎಲ್ಲ ಹಂತದ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆ ಕುರಿತು ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು, ಎಲ್ಲ ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಹಾಗೂ ಅನುಷ್ಟಾನ ಅಧಿಕಾರಿಗಳಿಗೆ ಬುಧವಾರ ಏರ್ಪಡಿಸಿದ್ದ ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶೇ.10 ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಪ್ರೌಢಶಾಲೆಗಳಲ್ಲಿ ಕಡ್ಡಾಯವಾಗಿ ಮುಂದಿನ ಎಲ್ಲ ಪರೀಕ್ಷೆಗಳಲ್ಲಿ ಫಲಿತಾಂಶ ಸುಧಾರಣೆ ಕೈಗೊಳ್ಳಬೇಕು. ವಿಷಯವಾರು ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ನಿರ್ದಿಷ್ಟ ಕಲಿಕಾಂಶಗಳ ಪ್ರಗತಿಗೆ ಶ್ರಮಿಸಬೇಕು. ಎಲ್ಲ ವಿಷಯ ಶಿಕ್ಷಕರು ಶಾಲಾ ಹಂತದಲ್ಲಿ ಮಕ್ಕಳ ಕಲಿಕಾ ಕೊರತೆ ಗುರುತಿಸಿ ಪ್ರಗತಿಗೆ ಪ್ರತಿದಿನ ಚಟುವಟಿಕೆ ರೂಪಿಸಿ, ಕಲಿಕಾ ಪ್ರಗತಿಯಾಗುವಂತೆ ಶ್ರಮವಹಿಸಬೇಕು ಎಂದು ಸೂಚಿಸಿದರು.

*ಇಒ-ಬಿಇಒ ಶಾಲೆಗಳಿಗೆ ಭೇಟಿ ನೀಡಿ:*
ಪ್ರಥಮ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಶೇ.20ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳಿಗೆ ಆಯಾ ತಾಲೂಕಿನ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ವಾರದಲ್ಲಿ ಕಡ್ಡಾಯವಾಗಿ ಭೇಟಿ ನೀಡಿ, ಪರಿಶೀಲಿಸಿ ಸುಧಾರಣೆಗೆ ಕ್ರಮವಹಿಸಬೇಕು ಎಂದು ನಿರ್ದೇಶನ ನೀಡಿದರು.

ಮುಂಬರುವ ಎಸ್ಸೆಸ್ಸೆಲ್ಸಿ ಮುಖ್ಯ ಪರೀಕ್ಷೆಯಲ್ಲಿ ಕಡಿಮೆ ಸಾಧನೆ ಮಾಡಿದ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಶಿಕ್ಷಕರು, ಮುಖ್ಯಶಿಕ್ಷಕರು, ಎಲ್ಲ ಅನುಷ್ಟಾನ ಅಧಿಕಾರಿಗಳು, ಶಾಲಾ ಸಂಸ್ಥೆಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಹೀಗಾಗಿ, ಎಲ್ಲರೂ ಕೂಡ ಫಲಿತಾಂಶ ಸುಧಾರಣೆಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

*ಮಕ್ಕಳಿಗೆ ನಿರಂತರವಾಗಿ ಅಧ್ಯಯನ ಮಾಡಿಸಿ:*
ಮುಖ್ಯ ಪರೀಕ್ಷೆ ಹತ್ತಿರವಾಗಿರುವುದರಿಂದ ಈಗಿನಿಂದಲೇ ಮಕ್ಕಳಿಗೆ ನಿರಂತರವಾಗಿ ಅಧ್ಯಯನ, ಬರವಣಿಗೆ ರೂಢಿ ಹಾಗೂ ವಿಶೇಷ ತರಗತಿಗಳ ಆಯೋಜನೆ ಮಾಡಿ ಫಲಿತಾಂಶ ಸುಧಾರಣೆಗೆ ಕ್ರಮವಹಿಸಬೇಕು. ಶಿಕ್ಷಕರು ಪ್ರತಿ ಮಕ್ಕಳ ಕಲಿಕಾ ಸಮಸ್ಯೆಗಳನ್ನು ಗುರುತಿಸಿ ಸುಧಾರಣೆಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಬಸವರಾಜ ಅಡವಿಮಠ, ಶಾಲಾ ಶಿಕ್ಷಣ ಇಲಾಖೆಯ ಬೆಳಗಾವಿ ಉಪನಿರ್ದೇಶಕಿ ಎಲ್.ಎಸ್. ಹಿರೇಮಠ, ಚಿಕ್ಕೋಡಿ ಉಪನಿರ್ದೇಶಕ ಸೀತಾರಾಮು ಆರ್.ಎಸ್., ಡಯಟ್ ಪ್ರಾಚಾರ್ಯ ಅಶೋಕ ಸಿಂದಗಿ ಸೇರಿ ಜಿಲ್ಲಾಮಟ್ಟದ ಅಧಿಕಾರಿಗಳು, ಎಲ್ಲ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಎಲ್ಲ ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಹಾಗೂ ಇನ್ನಿತರ ಸಿಬ್ಬಂದಿ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!