ಬೆಳಗಾವಿ-೦೬ : 1824ರಲ್ಲಿ ಬ್ರಿಟಿಷರ ವಿರುದ್ಧ ಕಿತ್ತೂರು ಚನ್ನಮ್ಮ ದಿಗ್ವಿಜಯ ಸಾಧಿಸಿದ್ದರು. ಅದಾದ ನೂರು ವರ್ಷದ ಬಳಿಕ 1924ರಲ್ಲಿ ಇದೇ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಈ ಎರಡೂ ಘಟನೆಗಳು ಬೆಳಗಾವಿ ಇತಿಹಾಸದಲ್ಲಿ ಸ್ಮರಣೀಯ ಎಂದು ಹಿರಿಯ ಸಾಹಿತಿ ಎಲ್.ಎಸ್.ಶಾಸ್ತ್ರಿ ಅಭಿಪ್ರಾಯ ಪಟ್ಟರು.
ಶುಕ್ರವಾರ 97ನೇ ನಾಡಹಬ್ಬ ಉತ್ಸವದ ಎರಡನೇ ದಿನ “ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆಯಲ್ಲಿ ಜರುಗಿದ ಬೆಳಗಾವಿ ಅಧಿವೇಶನ: ಶತಮಾನದ ಸವಿ ನೆನಪು” ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಅಧಿವೇಶನ ಅತ್ಯಂತ ವ್ಯವಸ್ಥಿತ ಮತ್ತು ಪ್ರಾಮಾಣಿಕವಾಗಿ ಸಂಘಟಿಸಲಾಗಿತ್ತು. ಗಾಂಧೀಜಿ ತಮ್ಮ ಯಂಗ್ ಇಂಡಿಯಾದಲ್ಲಿ ಉಲ್ಲೇಖಿಸಿದ್ದು, ಗಂಗಾಧರರಾವ್ ದೇಶಪಾಂಡೆ ಮತ್ತು ಅವರ ತಂಡವು ಅತ್ಯುತ್ತಮ ಮಟ್ಟಕ್ಕೆ ಏರಿದರು. ಅಧಿವೇಶನ ನಡೆದ ಸ್ಥಳದಲ್ಲಿ ನಿರ್ಮಿಸಿದ್ದ ವಿಜಯನಗರ ಅತ್ಯುನ್ನತ ಮತ್ತು ಸಂಘಟನಾ ವಿಜಯ. ಡಾ. ಹರ್ಡೇಕರ್ ಸ್ವಯಂ ಸೇವಕರ ದಳ ಬಹಳ ಚುರುಕು, ಗಮನಶೀಲವಾಗಿತ್ತು. ನೈರ್ಮಲೀಕರಣ ತುಂಬಾ ಚೆನ್ನಾಗಿತ್ತು. ನಿಮಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆ. ನೀವು ತೋರಿದ ಪ್ರೇಮವನ್ನು ಯಾವ ಅಧ್ಯಕ್ಷನೂ ನಿರೀಕ್ಷಿಸಿರಲಿಲ್ಲ ಎಂದು ಬೆಳಗಾವಿಗರ ಪ್ರೀತಿಯನ್ನು ತುಂಬು ಹೃದಯದಿಂದ ಶ್ಲಾಘಿಸಿದ್ದರು ಎಂದು ಎಲ್.ಎಸ್.ಶಾಸ್ತ್ರಿ ಸ್ಮರಿಸಿಕೊಂಡರು.
ಗಂಗಾಧರ ದೇಶಪಾಂಡೆಯವರ ಮೊಮ್ಮಗ ರವೀಂದ್ರ ದೇಶಪಾಂಡೆ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರ ಕುರಿತು ಶಾಲಾ-ಕಾಲೇಜುಗಳ ಪಠ್ಯದಲ್ಲಿ ಸೇರಿಸಬೇಕು. ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಆಗಬೇಕು ಎಂದು ಒತ್ತಾಯಿಸಿದರು.
ಸ್ವಾತಂತ್ರ್ಯ ಹೋರಾಟಗಾರರಾದ ಸ್ವಾತಂತ್ರ್ಯ ಹೋರಾಟಗಾರ ಕುಟುಂಬಸ್ಥರಾದ ಪ್ರೊ. ವಿನಿತಾ ಜೆಗ್ಗಿ,
ವಿಠ್ಠಲರಾವ್ ಯಾಳಗಿ, ರವೀಂದ್ರ ದೇಶಪಾಂಡೆ, ಮಹೇಶ ದೇಶಪಾಂಡೆ, ಶಿವಶಂಕರ ಮಳಗಲಿ, ಸುವರ್ಣಾ ದೇಸಾಯಿ, ಬಾಳಪ್ಪ ರಾಯಣ್ಣವರ ಅವರನ್ನು ಸಮಿತಿಯಿಂದ ಸತ್ಕರಿಸಲಾಯಿತು.
ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೇದಿಕೆ ಮೇಲೆ ಸಮಿತಿ ಅಧ್ಯಕ್ಷ ಡಾ.ಎಚ್.ಬಿ.ರಾಜಶೇಖರ, ಕಾರ್ಯದರ್ಶಿ ಡಾ.ಸಿ.ಕೆ.ಜೋರಾಪುರ, ಡಾ. ಹೇಮಾ ಸೋನೊಳ್ಳಿ, ಸುಧಾ ಪಾಟೀಲ ಸೇರಿ ಮತ್ತಿತರರು ಇದ್ದರು. ಸುಮಿತ್ರಾ ಮಲ್ಲಾಪುರ ಮತ್ತು ಶಾಂತಾ ಕಬ್ಬೂರ ಭೋಜನ ವ್ಯವಸ್ಥೆ ಮಾಡಿದ್ದರು.
ವೀಣಾ ಬಡಿಗೇರ ಮತ್ತು ಸಂಗಡಿಗರಿಂದ ಸುಗಮ ಸಂಗಿತ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರೊ.ಬಸವರಾಜ ಕುಪ್ಪಸಗೌಡರ ನಿರೂಪಿಸಿದರು. ಜ್ಯೋತಿ ಬದಾಮಿ ಸ್ವಾಗತಿಸಿದರು. ಸೋಮಲಿಂಗಪ್ಪ ಮಾವಿನಕಟ್ಟಿ ವಂದಿಸಿದರು.