ಬೆಳಗಾವಿ-೦೬: ಹಣಕಾಸು ಸಂಸ್ಥೆಗಳಲ್ಲಿ ವಿಶ್ವಾಸ ಬಹಳ ಮುಖ್ಯ. ವಿಶ್ವಾಸ ಕೆಡಿಸಿಕೊಂಡರೆ ಯಾವುದೇ ಸಂಸ್ಥೆ ಬೆಳೆಯಲು ಸಾಧ್ಯವಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಹಿಂಡಲಗಾ ಗ್ರಾಮದಲ್ಲಿ ‘ದಿ ಪಾಯೋನಿಯರ್ ಅರ್ಬನ್ ಕೋ-ಆಪ್ ಬ್ಯಾಂಕ್ ನಿಯಮಿತದ’ ನೂತನ ಶಾಖೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಗೋಕಾಕದಲ್ಲಿ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಜನರ ಕೋಟ್ಯಂತರ ರೂ.ಗಳನ್ನು ಅವ್ಯವಹಾರ ಮಾಡಿರುವ ತಾಜಾ ಉದಾಹರಣೆ ನಮ್ಮ ಮುಂದಿದೆ. ಹಾಗಾಗಿ ಜನರ ವಿಶ್ವಾಸದೊಂದಿಗೆ ಬ್ಯಾಂಕ್ ಮುಂದುವರಿಯಲಿ. ಕಷ್ಟದಲ್ಲಿರುವವರಿಗೆ ಆರ್ಥಿಕ ನೆರವು ನೀಡಲಿ. ನಿರ್ದೇಶಕ ಮಂಡಳಿ ಸೇವಾ ಮನೋಭಾವದಿಂದ ಕೆಲಸ ಮಾಡಲಿ. ಬ್ಯಾಂಕ್ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ನಮ್ಮ ಲಕ್ಷ್ಮೀ ತಾಯಿ ಸೌಹಾರ್ದ ಸೊಸೈಟಿಯಿಂದ 2 ವರ್ಷದಲ್ಲಿ 9 ಶಾಖೆಗಳನ್ನು ತೆರೆಯಲಾಗಿದೆ. ಬ್ಯಾಂಕ್ ಉತ್ತಮವಾಗಿ ನಡೆಯುತ್ತಿದ್ದು, ನಿರೀಕ್ಷೆಗೂ ಮೀರಿ ಠೇವಣಿ ಸಂಗ್ರಹವಾಗಿದೆ ಎಂದು ಅವರು ಹೇಳಿದರು.
ಈ ವೇಳೆ ಯುವರಾಜ ಕದಂ, ಪ್ರದೀಪ್ ಅಷ್ಟೇಕರ್, ರಮೇಶ ಕುಡಚಿ, ಎನ್. ಎಸ್ ಚೌಗಲೆ, ಶಿವಾಜಿ ಅತವಾಡ್ಕರ್, ಆರ್.ಎಮ್.ಚೌಗಲೆ, ಎಸ್.ಎಲ್.ಚೌಗಲೆ, ರಂಜಿತ್ ಚೌಹಾನ್, ಅನಿತಾ ಮುಲ್ಯಾ, ಪ್ರಕಾಶ ಬೆಳಗುಂದಕರ್ ಹಾಜರಿದ್ದರು.