ಬೆಳಗಾವಿ-04:”ಭಾರತ ದೇಶದಲ್ಲಿ ಸಹಸ್ರಾರು ವರ್ಷಗಳಿಂದ ಅಕ್ಷರ ವಂಚಿತ ಸಮುದಾಯಕ್ಕೆ ಅದರಲ್ಲೂ ಮಹಿಳಾ ಸಮುದಾಯಕ್ಕೆ ಶಿಕ್ಷಣ ನೀಡಿ ಅರಿವು ಮೂಡಿಸಿದ ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಆಶಯಗಳು ಸಾಕಾರ ರೂಪ ಪಡೆಯಲು ಇಂದಿನ ಮಹಿಳಾ ಸಮಾಜ ಫುಲೆ ದಂಪತಿಗಳ ಜೀವನ ಹಾಗೂ ಹೋರಾಟದ ಗಾಥೆಯನ್ನು ಅರಿತುಕೊಳ್ಳಬೇಕಿದೆ” ಎಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಸಮಾಜ ಸೇವಾ ಕಾರ್ಯ ವಿಭಾಗದ ಪ್ರಾಧ್ಯಾಪಕ ಪ್ರೊ. ಅಶೋಕ ಡಿಸೋಜಾ ಕರೆ ನೀಡಿದರು.
ನಗರದ ಮಾನವ ಬಂಧುತ್ವ ವೇದಿಕೆಯ ಕೇಂದ್ರ ಕಚೇರಿಯ ಸಭಾಭವನದಲ್ಲಿ ಏರ್ಪಡಿಸಲಾದ ‘ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, “ಫುಲೆ ಅವರನ್ನು ಇಂದಿನ ಸಂದರ್ಭದಲ್ಲಿ ಅಕ್ಷರ -ಅರಿವು -ಅಸ್ಮಿತೆಯ ಹಿನ್ನೆಲೆಯಲ್ಲಿ ಅಧ್ಯಯನ ಮಾಡುವ ಮೂಲಕ ಅವರ ಸೈದ್ಧಾಂತಿಕ ಹೋರಾಟದ ಆಶಯಗಳನ್ನು ಜನಮಾನಸದಲ್ಲಿ ಬಿತ್ತಬೇಕಿದೆ. ಮೇಲ್ವರ್ಗದ ಮಹಿಳೆಯ ವಿವಾಹಪೂರ್ವ ಮಗುವನ್ನು ದತ್ತು ಪಡೆದು ಪೋಷಿಸಿ, ವೈದ್ಯರನ್ನಾಗಿಸಿ ಅಲಕ್ಷಕ್ಕೊಳಗಾದ ಸಮುದಾಯಗಳಿಗೆ ಆರೋಗ್ಯ ಸೇವೆ ಮಾಡುತ್ತಲೇ ಔಷಧವಿಲ್ಲದ ಅಂದಿನ ಕಾಲದಲ್ಲಿ ಪ್ಲೇಗ್ ರೋಗಕ್ಕೆ ತುತ್ತಾದ ಮಹಾತಾಯಿಯ ಋಣ ನಮ್ಮೆಲ್ಲರ ಮೇಲಿದೆ. ಆ ಋಣ ತೀರಿಸುವ ನಿಟ್ಟಿನಲ್ಲಿ ಮಾನವ ಬಂಧುತ್ವ ವೇದಿಕೆ ರಾಜ್ಯಾದ್ಯಂತ ಆಚರಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ” ಎಂದು ಹೇಳಿದರು.
ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಸದಾಶಿವ ಸಾಹುಕಾರಕಾಂಬಳೆ ಅವರು ‘ಅಕ್ಷರದವ್ವ ಸಾವಿತ್ರಿಬಾಯಿ ಜೀವನ ಸಾಧನೆ’ ಕುರಿತು ಉಪನ್ಯಾಸ ನೀಡಿ, “ಅಂದಾಜು ನೂರು ವರ್ಷದ ಹಿಂದಿನ ಕಾಲಘಟ್ಟದಲ್ಲಿ ಒಬ್ಬ ಹೆಣ್ಣು ಮಗಳು ಕ್ರಾಂತಿಯ ಕಿಡಿ ಹಚ್ಚುವಲ್ಲಿ ಅವರ ಪತಿ ಜೋತಿಭಾ ಫುಲೆ ಅವರ ಹೋರಾಟದ ಬದುಕು ಬೆಂಬಲವಾಗಿ ನಿಲ್ಲುತ್ತದೆ. ಅಕ್ಷರ ವಂಚಿತ ಸಾವಿತ್ರಿಬಾಯಿಗೆ ಪತಿಯೇ ಗುರುವಾಗಿ ಶಿಕ್ಷಣ ನೀಡಿ ಅವರನ್ನು ಶಿಕ್ಷಕಿಯನ್ನಾಗಿ ರೂಪಿಸಿ ಶೋಷಿತ ಸಮುದಾಯದ ಮಕ್ಕಳಿಗಾಗಿ ಶಾಲೆ ತೆರೆದು ಶಿಕ್ಷಣ ನೀಡಿದರು. ಅನೇಕ ನಿಂದನೆ, ಅಪಮಾನಗಳನ್ನು ಸಹಿಸಿಕೊಂಡು ಮಾತೆ ಸಾವಿತ್ರಿಬಾಯಿ ಅವರು ಶಿಕ್ಷಣ ನೀಡುವಲ್ಲಿ ಯಶಸ್ವಿಯಾದರು. ಬಾಲ್ಯ ವಿವಾಹ ಹಾಗೂ ಮೌಢ್ಯತೆಯ ವಿರುದ್ದ ಹೋರಾಟ ಮಾಡಿದರು. ವಿಧವಾ ವಿವಾಹಕ್ಕೆ ಉತ್ತೇಜನ ನೀಡಿದರು. ಅಕ್ಷರದ ಅರಿವಿಲ್ಲದೆ ಸ್ವಾಭಿಮಾನ ಮೂಡಲಾರದು. ಸ್ವಾಭಿಮಾನ ಮೂಡದೆ ಹೋರಾಟ ಮೂಡಲಾರದು, ಹೋರಾಟವಿಲ್ಲದೆ ಪರಿವರ್ತನೆ ತರಲಾಗದು ಎಂದು ಸಾರಿದ ಫುಲೆ ದಂಪತಿ ಹಾಗೂ ಅವರ ಕುಟುಂಬ ಶೂದ್ರ ವರ್ಗದ ಎಲ್ಲ ಸಮುದಾಯಗಳ ಏಳ್ಗೆಗಾಗಿ ತಮ್ಮ ಜೀವನ ಸವೆಸಿದರು. ಅಂಥ ಮಹನೀಯರಿರದಿದ್ದರೆ ಇಂದಿನ ಅಕ್ಷರ ಕ್ರಾಂತಿ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಇಂದಿನ ಜನಾಂಗ ತಮ್ಮನ್ನು ಶೋಷಣೆ ಮಾಡುವವರ ಕಪಿಮುಷ್ಠಿಯಿಂದ ಹೊರಬರಲು ಶಿಕ್ಷಣ ಪಡೆಯಬೇಕಿದೆ” ಎಂದು ಹೇಳಿದರು.
ವಿಶೇಷ ಅತಿಥಿಗಳಾಗಿ ಆಗಮಿಸಿದ ಬೆಳಗಾವಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಕೆ. ಕೃಷ್ಣಕುಮಾರ ಅವರು ಮಾತನಾಡಿ, “ಒಂದು ದೇಶದ ಮೂಲ ಸಾಂಸ್ಕೃತಿಕ ಹಿನ್ನಲೆ ಅರಿವಾಗದಿದ್ದರೆ ಆ ದೇಶದ ಇತಿಹಾಸ ಅರ್ಥವಾಗಲಾರದು. ಹೀಗಾಗಿ ನಿಜ ಚರಿತ್ರೆಯನ್ನು ತಿಳಿದುಕೊಳ್ಳಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ಹಿಂದುಳಿದ ಸಮುದಾಯಕ್ಕೆ ಸೇರಿದ ಒಬ್ಬ ಮಹಿಳೆ ಸರ್ವ ಶೂದ್ರ ಸಮುದಾಯ ಎಚ್ಚತ್ತುಕೊಳ್ಳಲು ಶಿಕ್ಷಣವೊಂದೇ ಮಹಾಮಾರ್ಗ ಎಂದರಿತು ಶಾಲೆ ತೆರೆದು ವಂಚಿತ ಸಮುದಾಯಗಳಿಗೆ ಅರಿವು ಮೂಡಿಸಿದರು. ಅಂಥ ಅಕ್ಷರದ ಅರಿವು ಇಂದಿನ ಪೀಳಿಗೆಯಲ್ಲಿ ಮತ್ತಷ್ಟು ಹೆಚ್ಚಾದರೆ ಅವರ ಹೋರಾಟಕ್ಕೆ ಯಶಸ್ಸು ಸಿಗುತ್ತದೆ” ಎಂದರು.
ಶ್ರೀಮತಿ ರೋಹಿಣಿ ಜಾಬಸೇಠ, ಯುವರಾಜ ತಳವಾರ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾನವ ಬಂಧುತ್ವ ವೇದಿಕೆಯ ಸಂಚಾಲಕರಾದ ಭರಮಣ್ಣ ತೋಳಿ ಅವರು ಮಾತನಾಡಿ, ” ಸಾಮಾಜಿಕ ಪರಿವರ್ತನೆಯ ದಾರಿಯಲ್ಲಿ ನಡೆದು ಸಮಾಜಕ್ಕೆ ಬೆಳಕಾದ ಬುದ್ಧ, ಬಸವ, ಅಂಬೇಡ್ಕರ, ಫುಲೆ ದಂಪತಿ, ಶಾಹೂ ಮಹಾರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ, ನಾರಾಯಣಗುರು, ಪೆರಿಯಾರ್ ಮುಂತಾದ ಮಹನೀಯರ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮಾನವ ಬಂಧುತ್ವ ವೇದಿಕೆಯ ಸಂಸ್ಥಾಪಕರಾದ ಸತೀಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಜನ ಜಾಗೃತರಾಗಿ ಪರಿವರ್ತನೆಯಾದರೆ ಇಂಥ ಕಾರ್ಯಕ್ರಮಗಳು ಸಾರ್ಥಕತೆ ಪಡೆಯುತ್ತವೆ ” ಎಂದರು. ಕಾರ್ಯಕ್ರಮದಲ್ಲಿ ಡಾಕ್ಟರೇಟ್ ಪಡೆದ ‘ ಮುತ್ಸದ್ದಿ ಹಾಗೂ ಚಿಂತಕರಾಗಿ ಸತೀಶ ಜಾರಕಿಹೊಳಿ-ಒಂದು ಅಧ್ಯಯನ’ ಕುರಿತು ಡಾ. ಶ್ರೀಕಾಂತ ಮುಚಂಡಿ, ಕನ್ನಡ ನಾಟಕಗಳಲ್ಲಿ ಮುಸ್ಲಿಂ ಸಂವೇದನೆ ಕುರಿತು ಡಾ. ಬಾಳಕೃಷ್ಣ ನಾಯಕ, ಸಾಮಾಜಿಕ ಪರಿವರ್ತನೆಯಲ್ಲಿ ಮಾನವ ಬಂಧುತ್ವ ವೇದಿಕೆಯ ಪಾತ್ರ ಕುರಿತು ಡಾ. ಅಪ್ಪಣ್ಣ ಜಿರನಾಳ ಹಾಗೂ ಮಾನವೀಯತೆಯ ಪ್ರತಿಪಾದಕರಾಗಿ ಸಾವಿತ್ರಿಬಾಯಿ ಫುಲೆ ಹಾಗೂ ರಮಾಭಾಯಿ ಅಂಬೇಡ್ಕರ-ಒಂದು ಅಧ್ಯಯನ ಕುರಿತು ಡಾ. ವಿದ್ಯಾಶ್ರೀ ಕೋಲಕಾರ ಅವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸರಳಾ ಸಾತ್ಪುತೆ, ಪ್ರಕಾಶ ಬೊಮ್ಮನವರ, ಪ್ರಶಾಂತ ಪೂಜೇರಿ, ಶಂಕರ ಕೊಡತೆ, ಸುಂದರ ಮ್ಯಾಗಡೆ, ಗಿರಿಪ್ಪ ಕೋಲಕಾರ, ಭರಮಾ ಕುರ್ಲಿ ಮುಂತಾದವರು ಪಾಲ್ಗೊಂಡಿದ್ದರು. ವಿದ್ಯಾರ್ಥಿ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಆಕಾಶ ಬೇವಿನಕಟ್ಟಿ ಸ್ವಾಗತಿಸಿದರು. ಶಂಕರ ಬಾಗೇವಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು. ಭೀಮಾ ವಂದಿಸಿದರು.