ಕಾಂಗ್ರೆಸ್ಸಿನ ಗೂಂಡಾಗಳಿಂದ ಸುವರ್ಣಸೌಧದಲ್ಲಿ
ಸಿ.ಟಿ.ರವಿ ಅವರ ಮೇಲೆ ಹಲ್ಲೆ: ವಿಜಯೇಂದ್ರ
ಬೆಳಗಾವಿ:೨೦: ನಗರದ ರಾಣಿ ಚೆನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭಟನೆ: ಕಾಂಗ್ರೆಸ್ಸಿನ ಗೂಂಡಾಗಳು ಸುವರ್ಣಸೌಧಕ್ಕೆ ಬಂದು ಸಿ.ಟಿ.ರವಿ ಅವರ ಮೇಲೆ ಹಲ್ಲೆ ಮಾಡಲು ರಾಜ್ಯದ ಕಾಂಗ್ರೆಸ್ ಸರಕಾರ ಅವಕಾಶ ಮಾಡಿಕೊಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದರು.
ಮಾಜಿ ಸಚಿವ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರ ಬಂಧನವನ್ನು ಖಂಡಿಸಿ ಇಂದು ಇಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಅವರು ಮಾತನಾಡಿದರು. ರೈತರ ಮೇಲೆ, ಪಂಚಮಸಾಲಿ ಸಮಾಜದ ಮೇಲೆ ಲಾಠಿ ಪ್ರಹಾರ ನಡೆಸುತ್ತೀರಿ. ಸ್ಪೀಕರ್ ರೂಲಿಂಗ್ ಬದಿಗಿಟ್ಟು ಸಿ.ಟಿ.ರವಿ ಅವರ ಮೇಲೆ ಹಲ್ಲೆ ಮಾಡಿಸಿದ್ದು, ಬಳಿಕ ಪೊಲೀಸರ ಮೂಲಕ ಬಂಧಿಸಲಾಗಿದೆ ಎಂದು ಖಂಡಿಸಿದರು.
ಇಡೀ ರಾತ್ರಿ ಸುಮಾರು 500 ಕಿಮೀ ಸುತ್ತಾಡಿಸಿದ್ದಾರೆ. ಬಲವಂತದಿಂದ ವಾಹನದಲ್ಲಿ ಗದಗ, ರಾಮದುರ್ಗ, ಧಾರವಾಡ ಮೊದಲಾದ ಕಡೆಗಳಿಗೆ ಕರೆದೊಯ್ದಿದ್ದಾರೆ. ಜನಪ್ರತಿನಿಧಿಗಳ ಮೇಲೆ ಈ ರೀತಿ ದೌರ್ಜನ್ಯ ಮಾಡುವ ಈ ಸರಕಾರದ ನೀತಿಯನ್ನು ಜನರೂ ಪ್ರಶ್ನಿಸುತ್ತಿದ್ದಾರೆ. ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುವ ಪಕ್ಷ ಕಾಂಗ್ರೆಸ್ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷವು ಕಾನೂನನ್ನು ಮತ್ತು ಸಂವಿಧಾನದ ಆಶಯವನ್ನು ಗಾಳಿಗೆ ತೂರಿ ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿತ್ತು ಎಂದು ಟೀಕಿಸಿದರು. ಸಿ.ಟಿ.ರವಿ ಅವರ ಮೇಲೆ ಪೊಲೀಸರು ಮಾರಣಾಂತಿಕ ಹಲ್ಲೆ ಮಾಡಿದ್ದು, ನೆತ್ತಿ ಮೇಲೆ ರಕ್ತ ಸುರಿಯುತ್ತಿದ್ದರೂ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿಲ್ಲ ಎಂದು ದೂರಿದರು.
ಅನ್ನ, ನೀರು ಕೊಟ್ಟಿಲ್ಲ…
ಒಂದು ಲೋಟ ನೀರನ್ನೂ ಕೊಟ್ಟಿಲ್ಲ. ಸಿ.ಟಿ.ರವಿ ಅವರಿಗೆ ಒಂದು ತುತ್ತು ಅನ್ನವನ್ನೂ ಕೊಟ್ಟಿಲ್ಲ ಎಂದು ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದರು.
ಕಾಂಗ್ರೆಸ್ಸಿನ ಒತ್ತಾಯದ ಮೇರೆಗೆ ಪೊಲೀಸ್ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರೇ, ಅಧಿಕಾರ ಶಾಶ್ವತ ಅಲ್ಲ. ಅಧಿಕಾರದ ದರ್ಪ, ಅಮಲಿನಲ್ಲಿ ಮೆರೆಯುವ ನೀವು, ಅಧಿಕಾರದ ಸೊಕ್ಕು, ಮದದಿಂದ ನಮ್ಮ ಮೇಲೆ ಹಲ್ಲೆ ಮಾಡುವ ಕೆಲಸ ಮಾಡುತ್ತಿದ್ದೀರಿ. ಅಧಿಕಾರ ಶಾಶ್ವತ ಅಲ್ಲ ಎಂದು ಎಚ್ಚರಿಸಿದರು.
ವಿಪಕ್ಷ ನಾಯಕ ಆರ್.ಅಶೋಕ್, ಉಪ ನಾಯಕ ಅರವಿಂದ ಬೆಲ್ಲದ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್‍ಕುಮಾರ್, ಶಾಸಕರಾದ ಅಭಯ್ ಪಾಟೀಲ,
ಮಹೇಶ್ ತೆಂಗಿನಕಾಯಿ,ಎನ್.ರವಿಕುಮಾರ್, ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಸುಭಾಷ್ ಪಾಟೀಲ, ಮಹಾನಗರ ಜಿಲ್ಲಾಧ್ಯಕ್ಷರಾದ ಗೀತಾ ಸುತಾರ, ಮಾಜಿ ಶಾಸಕರಾದ ಸಂಜಯ್ ಪಾಟೀಲ್, ಮಹಾಂತೇಶ ದೊಡ್ಡಗೌಡರ, ಅರುಣ್ ಶಹಪೂರ,ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಶಂಕರ್ ಮಾಡಲಗಿ ಸ್ಥಳೀಯ ಮುಖಂಡರು ಮತ್ತು ಪ್ರಮುಖ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.