22/12/2024
IMG_20241220_152153

ನಾನು ನನ್ನ ಮಾತಿನಿಂದ ಹಿಂದೆ ಸರಿದಿಲ್ಲ, ಆದರೆ ಅವರು ಸುಳ್ಳು ಹೇಳುತ್ತಿದ್ದಾರೆ
ಬೆಳಗಾವಿ-೨೦ : ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಅಂಬೇಡ್ಕರ್ ಅವರ ಕುರಿತು ಆಡಿದ ಮಾತಿನ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ನಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಸಿ.ಟಿ.ರವಿ ಅವರು ನಮ್ಮ ನಾಯಕ ರಾಹುಲ್ ಗಾಂಧಿ ಅವರನ್ನು ಪದೇ ಪದೇ ಅವಹೇಳನಕಾರಿಯಾಗಿ ನಿಂದಿಸುತ್ತಿದ್ದ ಕಾರಣ ನಾನು ಮಾತನಾಡಿದ್ದು ನಿಜ, ನನ್ನ ಮಾತಿನಿಂದ ನಾನು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಆದರೆ ಅವರು ನನ್ನ ಬಗ್ಗೆ ಹೇಳಿದ ಮಾತಿನ ಕುರಿತು ಸುಳ್ಳು ಹೇಳುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಗುರುವಾರ ವಿಧಾನ ಪರಿಷತ್ ನಲ್ಲಿ ನಡೆದ ಘಟನೆಯನ್ನು ವಿವರಿಸುತ್ತಾ ಭಾವುಕರಾದರು. ನಮ್ಮ ನಾಯಕರ ಕುರಿತು ಮಾತನಾಡಿದಾಗ ನಾನು ಸುಮ್ಮನೆ ಕುಳಿತುಕೊಳ್ಳಲು ಹೇಗೆ ಸಾಧ್ಯ.‌ರಾಹುಲ್ ಗಾಂಧಿ ಅವರು ಡ್ರಗ್ ಎಡಿಕ್ಟ್ ಎಂದು ಪದೆ ಪದೇ ಹೇಳಿದಾಗ ನೀವು ಅಪಘಾತ ಮಾಡಿ, ಮೂವರನ್ನು ಕೊಲೆ ಮಾಡಿದ್ದೀರಲ್ಲ ಎಂದು ಹೇಳಿದ್ದು ನಿಜ. ನನ್ನ ಮಾತಿನಿಂದ ನಾನು ಹಿಂದೆ ಸರಿದಿಲ್ಲ. ಆದರೆ ಅವರು ತಾವು ಆ ರೀತಿ ಮಾತನಾಡಿಯೇ ಇಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ‌ ಅವರು ಮಾತನಾಡಿರುವ ಬಗ್ಗೆ ಎಲ್ಲರ ಬಳಿಯೂ ವಿಡಿಯೋ ದಾಖಲೆಯಿದೆ ಎಂದರು.

10 ಬಾರಿ ಅತ್ಯಂತ ಕೆಟ್ಟ ಪದ ಬಳಸಿ ನನ್ನ ತೇಜೋವಧೆ ಮಾಡಿದರು. ನಾನು ಯಾವುದಕ್ಕೂ ಹೆದರುವುದಿಲ್ಲ. ನನ್ನನ್ನು ನೋಡಿ‌ ಎಷ್ಟೋ ಮಹಿಳೆಯರು ರಾಜಕಾರಣಕ್ಕೆ ಬರಲು ಸ್ಫೂರ್ತಿ ಪಡೆದಿದ್ದಾರೆ. ಆದರೆ ಇಂಥ ಪದಗಳನ್ನು ಸಹಿಸಲು ಹೇಗೆ ಸಾಧ್ಯ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಶ್ನಿಸಿದರು.

ರಾಜಕಾರಣದಲ್ಲಿ ದ್ವೇಷ ಭಾಷಣಗಳು ಸಾಮಾನ್ಯ. ಆದರೆ, ಇದುವರೆಗೂ ಇಂಥ ನೀಚ ರಾಜಕಾರಣ ನೋಡಿಲ್ಲ. ವಿಧಾನ ಪರಿಷತ್ ಅಂದರೆ ಬುದ್ದಿವಂತರ ಛಾವಡಿ ಅಂತಾರೆ‌. ಆದರೆ ಅಲ್ಲಿ ಆಗಿದ್ದೇನು?. ಈ ಘಟನೆಯಿಂದ ನಾನು ತುಂಬಾ ಶಾಕ್ ನಲ್ಲಿದ್ದೇನೆ.‌ ಸುದ್ದಿ ತಿಳಿದ ತಕ್ಷಣ ನನ್ನ ಕುಟುಂಬದ ಸದಸ್ಯರು, ಕ್ಷೇತ್ರದ ಜನರು ಫೋನ್ ಮಾಡಿ ಧೈರ್ಯ ತುಂಬಿದರು ಎನ್ನುತ್ತ ಗದ್ಗರಿತರಾದರು.

Leave a Reply

Your email address will not be published. Required fields are marked *

error: Content is protected !!