13/06/2026
IMG-20260606-WA0011

ಬೆಳಗಾವಿ-06:ಬೆಳಗಾವಿ ಮಹಾನಗರ ಪಾಲಿಕೆಯು ಕರ್ನಾಟಕ ಪರ ಗೊತ್ತುವಳಿ ಅಂಗೀಕರಿಸದೆ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಕಿತ್ತೂರು ಕರ್ನಾಟಕ ಸೇನೆಯ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಸೇನೆ ರಾಜ್ಯಾಧ್ಯಕ್ಷ ಮಹದೇವ ತಳವಾರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರು “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಎಂದು ಘೋಷಣೆ ಕೂಗಿದರು. ನಂತರ ಪ್ರಾದೇಶಿಕ ಆಯುಕ್ತ ಜಾನಕಿ ಅವರಿಗೆ ಸಲ್ಲಿಸಿದ ಮನವಿಯಲ್ಲಿ, 2005ರ ಅಕ್ಟೋಬರ್ 27ರಂದು ಪಾಲಿಕೆ ಅಂಗೀಕರಿಸಿದ್ದ ಮಹಾರಾಷ್ಟ್ರ ಪರ ಗೊತ್ತುವಳಿ ರದ್ದುಗೊಳಿಸಿ, ಕರ್ನಾಟಕ ಪರ ಗೊತ್ತುವಳಿ ಅಂಗೀಕರಿಸುವಂತೆ ಒತ್ತಾಯಿಸಿದರು.

2004ರಿಂದ ಸುಪ್ರೀಂಕೋರ್ಟ್‌ನಲ್ಲಿ ಗಡಿ ವಿವಾದ ಪ್ರಕರಣ ಬಾಕಿ ಇದೆ. ಮಹಾರಾಷ್ಟ್ರ ಸರ್ಕಾರ ಬೆಳಗಾವಿ ಪಾಲಿಕೆಯ 2005ರ ಗೊತ್ತುವಳಿಯನ್ನು ಪೂರಕ ದಾಖಲೆಯಾಗಿ ಬಳಸುತ್ತಿದೆ. ಅದಕ್ಕೆ ಪ್ರತಿಯಾಗಿ ಕರ್ನಾಟಕ ಪರ ಗೊತ್ತುವಳಿ ಅಂಗೀಕಾರವಾಗಬೇಕು ಎಂದು ಮಾರ್ಚ್ 26ರಿಂದ 20ಕ್ಕೂ ಹೆಚ್ಚು ಕನ್ನಡ ಸಂಘಟನೆಗಳು ಹೋರಾಟ ನಡೆಸುತ್ತಿವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಪಾಲಿಕೆಯಲ್ಲಿ ಬಿಜೆಪಿಗೆ 35 ಸದಸ್ಯರ ಬಹುಮತವಿದೆ. ಎರಡು ತಿಂಗಳಾದರೂ ಗೊತ್ತುವಳಿ ಅಂಗೀಕಾರವಾಗಿಲ್ಲ. ಇದು ಕನ್ನಡ ನಾಡು-ನುಡಿಗೆ ಮಾಡಿದ ದ್ರೋಹ ಎಂದು ಮಹದೇವ ತಳವಾರ ಅಸಮಾಧಾನ ವ್ಯಕ್ತಪಡಿಸಿದರು. ಪಾಲಿಕೆಯ ದುರಾಡಳಿತದ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಬೇಕು. ಗೊತ್ತುವಳಿಗೆ ವಿರೋಧಿಸುವ ಜನಪ್ರತಿನಿಧಿಗಳನ್ನು ಅನರ್ಹಗೊಳಿಸಬೇಕು ಎಂದು ಆಗ್ರಹಿಸಿದರು. ಇಲ್ಲವಾದರೆ ಪಾಲಿಕೆ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮಹೇಶ ಶಿಗ್ಗಹಳ್ಳಿ, ಕೊಟ್ರೇಶ ಪಟ್ಟಣಶೆಟ್ಟಿ, ರವಿ ಹಾಜೇಲ, ರತ್ನಾ ಗೋನಿ, ದೇವೇಂದ್ರ ತಳವಾರ, ರಮೇಶ ರಾಮನಗೌಡ, ಶಿವಾನಂದ ಕೋಲಕಾರ ಸೇರಿದಂತೆ ಸೇನೆಯ ಪದಾಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!