ಬೆಳಗಾವಿ-12: ಮಹಾನಗರ ಪಾಲಿಕೆ ಕಂದಾಯ ಶಾಖೆಯ ದಾಖಲೆಗಳ ಕಾರ್ಯ ಚಟುವಟಿಕೆಗಳು ಇನ್ನು ಮುಂದೆ ಕಾಗದ ರಹಿತವಾಗಲಿವೆ ಎಂದು ಪಾಲಿಕೆ ಕಂದಾಯ ವಿಭಾಗದ ಉಪ ಆಯುಕ್ತ ಡಾ. ಸಿದ್ದು ಹುಲ್ಲೋಳಿ ಹೇಳಿದರು.
ಗುರುವಾರ ಪಾಲಿಕೆಯ ಕಂದಾಯ ಶಾಖೆಯ ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದ ಅವರು, ಮೇಯರ್, ಉಪಮೇಯರ್, ನಗರ ಸೇವಕರು ಹಾಗೂ ಆಯುಕ್ತರ ಸಹಕಾರದಿಂದ ಪಾಲಿಕೆಯ ಕಂದಾಯ ವಾರ್ಡ್ ಗಳು ಈಗಾಗಲೇ ಚುನಾವಣಾ ವಾರ್ಡ್ ಗಳಾಗಿ ಪರಿವರ್ತನೆಯಾಗಿವೆ. ಈ ಮೊದಲಿದ್ದ ಕಂದಾಯ ಶಾಖೆಯ ಸಿಬ್ಬಂದಿಯನ್ನು ಚುನಾವಣಾ ವಾರ್ಡುಗಳಿಗೆ ಮರುನಿಯುಕ್ತಿ ಮಾಡಿ ಕಾರ್ಯಗಳ ಹಂಚಿಕೆ ಮಾಡಲಾಗಿದೆ. ಇನ್ನು ಮುಂದೆ ಚುನಾವಣಾ ವಾರ್ಡ್ ಗಳ ತೆರಿಗೆ,ಪಿಐಡಿ,ಮ್ಯೂಟೇಶನ್ ಮುಂತಾದವು ಕಾಗದರಹಿತವಾಗಿ ಆನ್ ಲೈನ್ ಮೂಲಕ ನಡೆಯಲಿವೆ. ಈ ಹಿನ್ನೆಲೆಯಲ್ಲಿ ಎಲ್ಲ ವಲಯ ಆಯುಕ್ತರು, ಕಂದಾಯ ಅಧಿಕಾರಿಗಳು, ಕರ ವಸೂಲಿಗಾರರು ಮುಂತಾದ ಸಿಬ್ಬಂದಿಗೆ ಪ್ರಾತ್ಯಕ್ಷಿಕೆ ಸಹಿತ ತಾಂತ್ರಿಕ ತರಬೇತಿ ನೀಡಿ ಸಜ್ಜುಗೊಳಿಸಲಾಗುತ್ತಿದೆ ಎಂದು ಹೇಳಿದರು.
ಆಡಳಿತ ವಿಭಾಗದ ಉಪ ಆಯುಕ್ತ ಉದಯಕುಮಾರ ಟಿ. ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪಾಲಿಕೆಯ ಕಂದಾಯ ಶಾಖೆಯ ಎಲ್ಲಾ ಹಂತದ ಸಿಬ್ಬಂದಿ ತರಬೇತಿ ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.
