09/12/2025
Screenshot_2025_0627_114421

ಬೆಂಗಳೂರು-27:ರಾಜ್ಯ ಸರಕಾರದ ಎಲ್ಲ ಇಲಾಖೆಗಳ ಆಡಳಿತದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಪೂರ್ಣ ಪ್ರಮಾಣದಲ್ಲಿ ಬಳಸುವಂತೆ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಸುತ್ತೋಲೆ ಹೊರಡಿಸಿದ್ದಾರೆ.

ಕರ್ನಾಟಕ ರಾಜ್ಯ ಭಾಷಾ ಅಧಿನಿಯಮ 1963ರಲ್ಲಿ ಕನ್ನಡ ಭಾಷೆ ಕರ್ನಾಟಕದ ಆಡಳಿತ ಭಾಷೆಯಾಗಿ ಇರತಕ್ಕದ್ದು ಎಂದು ತಿಳಿಸಲಾಗಿದೆ. ಹೀಗಾಗಿ ಕನ್ನಡದಲ್ಲಿ ಬರುವ ಅರ್ಜಿ ಮತ್ತು ಪತ್ರಗಳಿಗೆ ಕಡ್ಡಾಯವಾಗಿ ಕನ್ನಡದಲ್ಲೇ ಉತ್ತರಿಸಬೇಕು. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ನಾಮಫಲಕಗಳನ್ನು ಕನ್ನಡದಲ್ಲಿಯೇ ಪ್ರದರ್ಶಿಸಬೇಕು.
ವಿಧಾನ ಮಂಡಲದ ಕಾರ್ಯಕಲಾಪಗಳು, ಪತ್ರ ವ್ಯವಹಾರ, ಗಮನಸೆಳೆಯುವ ಸೂಚನೆ ಇತ್ಯಾದಿಗಳು ಕಡ್ಡಾಯವಾಗಿ ಕನ್ನಡದಲ್ಲೇ ಸಲ್ಲಿಸಲು ತಿಳಿಸಲಾಗಿದೆ.
ನೇಮಕಾತಿ, ವರ್ಗಾವಣೆ ಮತ್ತು ರಜೆ ಮಂಜೂರಾತಿ ಸೇರಿದಂತೆ ಇತರೆ ಎಲ್ಲ ಸರಕಾರದ ಆದೇಶಗಳನ್ನು ಕನ್ನಡದಲ್ಲಿ ಹೊರಡಿಸಬೇಕು. ಕಚೇರಿಗಳಲ್ಲಿ ಇರುವ ಆಂಗ್ಲ ಭಾಷೆಯ ನಮೂನೆ, ದಾಖಲೆ ಪುಸ್ತಕ, ಆಂತರಿಕ ಪತ್ರ ವ್ಯವಹಾರ ಸೇರಿ ಇತ್ಯಾದಿಗಳನ್ನು ಕನ್ನಡದಲ್ಲೇ ಭರ್ತಿ ಮಾಡಬೇಕು. ಕಡತದ ಟಿಪ್ಪಣಿ, ಸಭಾ ಸೂಚನೆ, ಕಾರ್ಯಸೂಚಿ, ಸಂಕ್ಷಿಪ್ತ ಟಿಪ್ಪಣಿ ಹಾಗೂ ನಡವಳಿಗಳನ್ನು ಕನ್ನಡದಲ್ಲೇ ತಯಾರಿಸಿ ಸರ್ಕಾರದ ಭಾಷಾ ನೀತಿಯನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುವಂತೆ ಈಗಾಗಲೇ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಸರಕಾರಿ ಪತ್ರ ವ್ಯವಹಾರಗಳಲ್ಲಿ ಕಡತದ ಟಿಪ್ಪಣಿಗಳನ್ನು ಕನ್ನಡದಲ್ಲಿ ಮಾಡುವಂತೆ ಸೂಚಿಸಿದ್ದರೂ ಅನುಷ್ಠಾನ ಮಾಡಿಲ್ಲ. ಇದನ್ನು ಗಮನಿಸಿದ ಸಿಎಂ ಸಿದ್ದರಾಮಯ್ಯನವರು ಕಡತದ ಟಿಪ್ಪಣಿಗಳು ಮತ್ತು ಪತ್ರ ವ್ಯವಹಾರಗಳು ಕನ್ನಡದಲ್ಲಿ ಬಾರದಿದ್ದಲ್ಲಿ ಅಂತಹ ಕಡತಗಳನ್ನು ಹಿಂದಕ್ಕೆ ಕಳುಹಿಸಿ ಎಂದು ಹೇಳಿದ್ದಾರೆ. ಆಡಳಿತದಲ್ಲಿ ಭಾಷಾ ನೀತಿಯನ್ನು ಪೂರ್ಣ ಪ್ರಮಾಣದಲ್ಲಿ ಹಾಗೂ ಎಲ್ಲ ಹಂತಗಳಲ್ಲಿ ಜಾರಿಗೊಳಿಸುವುದು ಎಲ್ಲ ಅಧಿಕಾರಿಗಳ ನೌಕರರ ಕರ್ತವ್ಯ ಆಗಿದೆ.
ಹೀಗಾಗಿ ಸರಕಾರದ ಎಲ್ಲ ಇಲಾಖೆಗಳ ಅಧಿಕಾರಿ, ನೌಕರರು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ತಿಳಿಸಿದ್ದಾರೆ. ಕೇಂದ್ರ ಸರ್ಕಾರ, ಹೊರ ರಾಜ್ಯಗಳು ಮತ್ತು ನ್ಯಾಯಾಲಯಗಳ ಪತ್ರ ವ್ಯವಹಾರಗಳನ್ನು ಹೊರತು ಪಡಿಸಿ, ಉಳಿದೆಲ್ಲಾ ಪತ್ರ ವ್ಯವಹಾರಗಳು ಕಡ್ಡಾಯವಾಗಿ ಕನ್ನಡದಲ್ಲಿಯೇ ಇರಬೇಕು ಎಂದು ರಾಜ್ಯ ಸರಕಾರದ ಸುತ್ತೋಲೆಯಲ್ಲಿ ಸ್ಪಷ್ಟವಾಗಿ, ನಿಖರವಾಗಿ ತಿಳಿಸಿದೆ.

error: Content is protected !!