11/12/2025
IMG-20250529-WA0001

ಮೃತರ ಕುಟುಂಬಗಳಿಗೆ ಸರ್ಕಾರದಿಂದ ಹೆಚ್ಚಿನ ಪರಿಹಾರದ ಭರವಸೆ

ಬೆಂಗಳೂರು-17:ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗಂಗೊಳ್ಳಿಯಲ್ಲಿ ಮೀನುಗಾರಿಕೆಗೆ ತೆರಳಿ ದೋಣಿ ಮುಗುಚಿ ನಾಪತ್ತೆಯಾಗಿದ್ದ ಮೂವರು ಮೀನುಗಾರರ ನಿಧನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಸಂತಾಪ ಸೂಚಿಸಿದ್ದಾರೆ.

ಕಳೆದ ಮಂಗಳವಾರ (ಜುಲೈ 15) ಮೀನುಗಾರರು ನಾಪತ್ತೆಯಾದ ಕ್ಷಣದಿಂದಲೂ ಜಿಲ್ಲಾಡಳಿತದೊಂದಿಗೆ ಸತತ ಸಂಪರ್ಕದಲ್ಲಿದ್ದು, ಕ್ಷಣ ಕ್ಷಣಕ್ಕೂ ಮಾಹಿತಿ ಪಡೆಯುತ್ತಿದ್ದೆ. ಇಂದು ಮೀನುಗಾರರು ಜೀವಂತವಾಗಿ ವಾಪಸ್ ಬರದ ವಿಷಯ ಕೇಳಿ ತೀವ್ರ ದುಃಖವಾಯಿತು. ಮೃತರಾದ ರೋಹಿತ್ ಖಾರ್ವಿ, ಸುರೇಶ್ ಖಾರ್ವಿ ಹಾಗೂ ಜಗನ್ನಾಥ್ ಖಾರ್ವಿ ಅವರ ಕುಟುಂಬ ವರ್ಗದವರನ್ನು ಶೀಘ್ರವೇ ಭೇಟಿಯಾಗಿ ಸಾಂತ್ವನ ಹೇಳುವೆ ಎಂದು ಸಚಿವರು ಹೇಳಿದ್ದಾರೆ.

* *ಸರ್ಕಾರದಿಂದ ಹೆಚ್ಚಿನ ಪರಿಹಾರ*

ಶೀಘ್ರದಲ್ಲಿ ಉಡುಪಿ ಜಿಲ್ಲೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ತುಂಬುವ ಕೆಲಸ ಮಾಡಲಿದ್ದೇನೆ. ಜೊತೆಗೆ ಸರ್ಕಾರದಿಂದ ನಿಯಮಾನುಸಾರ ಪರಿಹಾರ ಒದಗಿಸುವ ಪ್ರಾಮಾಣಿಕ ಕೆಲಸ ಮಾಡಲಿದ್ದೇ‌ನೆ. ದುಃಖದ ಈ ಸಮಯದಲ್ಲಿ ಮೃತರ ಕುಟುಂಬಗಳ ದುಃಖದಲ್ಲಿ ನಾನೂ ಭಾಗಿಯಾದ್ದೇನೆ. ಅಗಲಿದ ಆತ್ಮಗಳಿಗೆ ಭಗವಂತ ಶಾಂತಿ‌ ನೀಡಲಿ ಹಾಗೂ ಕುಟುಂಬಸ್ಥರಿಗೆ ನೋವು ಸಹಿಸುವ ಶಕ್ತಿ‌ ದಯಪಾಲಿಸಲಿ ಪ್ರಾರ್ಥಿಸುತ್ತೇನೆ ಹಾಗೂ ಕುಟುಂಬಸ್ಥರು ಯಾವುದೇ ಕಾರಣಕ್ಕೆ ಧೈರ್ಯವನ್ನು ಕಳೆದುಕೊಳ್ಳಬೇಡಿ ಎಂದು ವಿನಂತಿಸುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ. ‌

* *ಮೀನುಗಾರರು ಸಮುದ್ರಕ್ಕಿಳಿಯದಂತೆ ಮನವಿ*
ಕರಾವಳಿಯಲ್ಲಿ ಎಡೆಬಿಡದೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಮೀನುಗಾರರು ಸಮುದ್ರಕ್ಕಿಳಿಯದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಸಚಿವರು ಸೂಚಿಸಿದ್ದಾರೆ. ಅಲ್ಲದೆ, ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ದೃಷ್ಟಿಯಿಂದ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ.

error: Content is protected !!