23/12/2024
IMG-20240715-WA0002

ಬೆಳಗಾವಿ-15: ಅಲ್ಲಲ್ಲಿ ಕಲುಷಿತ ಕುಡಿಯುವ ನೀರಿನಿಂದಾಗಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತಿರುವುದರಿಂದ ಕುಡಿಯುವ ನೀರು ಪೂರೈಸುವ ಮುಂಚೆ ಜಲಮೂಲಗಳಿಂದ ಸ್ಯಾಂಪಲ್ ತೆಗೆದುಕೊಂಡು ಪರೀಕ್ಷಿಸಬೇಕು. ನೀರು ಕುಡಿಯಲು ಯೋಗ್ಯವಾಗಿದ್ದರೆ ಮಾತ್ರ ಪೂರೈಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಜರುಗಿದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ಜಲಮೂಲಗಳನ್ನು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಮತ್ತು ಪಿಡಿಓ ಗಳು ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ಹೇಳಿದರು.

ವಿವಿಧ ತಾಲ್ಲೂಕುಗಳಿಗೆ ಮಂಜೂರಾಗಿರುವ ಇಂದಿರಾ ಕ್ಯಾಂಟೀನ್ ಗಳ‌ ಸ್ಥಾಪನೆಗೆ ಲಭ್ಯವಿರುವ ಜಾಗೆಯ ಕುರಿತು ಅಧಿಕಾರಿಗಳಿಂದ‌ ಮಾಹಿತಿಯನ್ನು ಪಡೆದುಕೊಂಡರು.

ಘನತ್ಯಾಜ್ಯ ನಿರ್ವಹಣಾ ಘಟಕಗಳ ಸ್ಥಾಪನೆಗೆ ಅಗತ್ಯ ಜಮೀನು ಒದಗಿಸುವ ನಿಟ್ಟಿನಲ್ಲಿ ತಹಶೀಲ್ದಾರರು ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ನೆರೆಯ ಮಹಾರಾಷ್ಟ್ರ ಸೇರಿದಂತೆ‌ ಜಿಲ್ಲೆಯಾದ್ಯಂತ ಮಳೆಯಾಗುತ್ತಿರುವುದರಿಂದ ಸಂಭವನೀಯ ಪ್ರವಾಹ ನಿರ್ವಹಣೆಗೆ ನಿಯೋಜಿಸಲಾಗಿರುವ ನೋಡಲ್ ಅಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ನಿರ್ದೇಶನ ನೀಡಿದರು.

ಇದಲ್ಲದೇ ಕಾಳಜಿ ಕೇಂದ್ರಗಳ ಸ್ಥಾಪನೆ; ಕಂದಾಯ ಗ್ರಾಮಗಳ ರಚನೆ; ಸಿಂಧುತ್ವ ಪ್ರಮಾಣಪತ್ರ ವಿತರಣೆ ಸೇರಿದಂತೆ ಇತರೆ ವಿಷಯಗಳ ಕುರಿತು ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಿದ ಜಿಲ್ಲಾಧಿಕಾರಿಗಳು, ಸಂಬಂಧಿಸಿದ‌ ಇಲಾಖೆಯ ಅಧಿಕಾರಿಗಳಿಗೆ ಸಲಹೆ-ಸೂಚನೆಗಳನ್ನು ನೀಡಿದರು.

ಅಪರ ಜಿಲ್ಲಾಧಿಕಾರಿ‌ ವಿಜಯಕುಮಾರ್ ಹೊನಕೇರಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ‌ ಕಲಾದಗಿ, ಕೃಷಿ ಇಲಾಖೆಯ ಜಂಟಿ‌ ನಿರ್ದೇಶಕ ಶಿವನಗೌಡ ಪಾಟೀಲ, ಸಮಾಜ ಕಲ್ಯಾಣ ಇಲಾಖೆಯ ಜಂಟಿ‌ ನಿರ್ದೇಶಕ ನವೀನ್ ಶಿಂತ್ರೆ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ್ ಕಂಕಣವಾಡಿ, ಎಲ್ಲ ಉಪ ವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರರು ಸಭೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!