ಬೆಳಗಾವಿ-೨೨:ನಗರದಲ್ಲಿ ಜರುಗಿದ ವಿಶ್ವಕನ್ನಡ ಸಮ್ಮೇಳನ, ಪ್ರಥಮ ವಿಧಾನಸಭೆ ಅಧಿವೇಶನ, ಕನ್ನಡ ನಾಡು ನುಡಿ ಕುರಿತಾದ ಜನ ಜಾಗೃತಿಯಂತಹ ಹಲವಾರು ಕಾರ್ಯಕ್ರಮಗಳಲ್ಲಿ ನಾಗನೂರು ರುದ್ರಾಕ್ಷಿ ಮಠ ಮಾಡಿದ ದಾಸೋಹ ಸೇವೆ ಸದಾ ಸ್ಮರಣೀಯವಾದದ್ದು. 12ನೇ ಶತಮಾನದಲ್ಲಿ ಬಸವಾದಿ ಶಿವ ಶರಣರು ಕಂಡ ಜತ್ಯಾತೀತ ಹಾಗು ಲಿಂಗ ಸಮಾನತೆಯ ಕನಸು ನಾಗನೂರು ರುದ್ರಾಕ್ಷಿ ಮಠದಲ್ಲಿ ಅಕ್ಷರಶಃ ಅನುಷ್ಠಾನವಾಗುತ್ತಿದೆ. ನಾಡಿನ ಜನತೆಗೆ ಅನ್ನ, ಅರಿವು, ಅಕ್ಷರ ದಾಸೋಹ ನೀಡುತ್ತಾ ಕನ್ನಡ ಉಳಿಸಿ ಬೆಳೆಸುವುದರ ಜೊತೆಗೆ ಬೆಳಗಾವಿಯ ಅಭಿವೃದ್ಧಿಯಾಗುವಲ್ಲಿ ನಾಗನೂರು ರುದ್ರಾಕ್ಷಿ ಮಠದ ಪಾತ್ರ ಹಿರಿದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ ಅಭಿಪ್ರಾಯಪಟ್ಟರು.
ಅವರು ಶಿವಬಸವ ನಗರದ ಎಸ್.ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಸಭಾಭವನದಲ್ಲಿ ನಾಗನೂರು ರುದ್ರಾಕ್ಷಿ ಮಠದ ವತಿಯಿಂದ ಅಪ್ರತಿಮ ಮಹಿಳಾ ಸಾಧಕಿ ಪದ್ಮಾವತಿ ಷಣ್ಮುಖಪ್ಪ ಅಂಗಡಿ ಅವರ ಸ್ಮರಣಾರ್ಥ ನೀಡಲಾಗುವ “ಮಹಿಳಾ ರತ್ನ ಪ್ರಶಸ್ತಿ” ಪ್ರಧಾನ ಮಾಡಿ ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು ಮೀಸಲಾತಿಯ ಹೊರತಾಗಿಯೂ ಮಹಿಳೆಯರು ತಮ್ಮಲ್ಲಿ ನಾಯಕತ್ವ ಗುಣ ಬೆಳೆಸಿಕೊಂಡು ತಮ್ಮ ಪ್ರತಿಭೆಗೆ ತಕ್ಕಂತೆ ಸ್ಥಾನಮಾನಗಳಿಸಿಕೊಳ್ಳುವಷ್ಟು ಸ್ವಾವಲಂಬಿಗಳಾಗಬೇಕು. ಬಸವ ತತ್ವ ಕೇವಲ ಭಾಷಣಕ್ಕೆ ಸೀಮಿತವಾಗದೇ ಸಮಾಜದಲ್ಲಿ ನೈಜ ಅನುಷ್ಠಾನಗೊಳ್ಳಬೇಕು ಅಂದಾಗ ಮಾತ್ರ ಸದೃಡ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸ ನೀಡಿದ ಧಾರವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಪ್ರಜ್ಞಾ ಮತ್ತಿಹಳ್ಳಿ ಮಾತನಾಡಿ ನಮಗೆ ಜನ್ಮ ನೀಡಿದವಳು, ಮಾತು ಕಲಿಸಿದವಳು, ಉಣಿಸಿ ಬೆಳೆಸಿದವಳು ಮಾತ್ರ ತಾಯಿಯಲ್ಲ. ಸಮಾಜದಲ್ಲಿ ನೊಂದವರಿಗೆ, ಬೆಂದವರಿಗೆ ಅಂತಃಕರಣದ ತುಡಿತದಿಂದ ಕರುಣೆ, ಪ್ರೀತಿ, ವಾತ್ಸಲ್ಯ ತೋರುವವಳೂ ತಾಯಿಯೆ. ಮಾತೃತ್ವ ಎನ್ನುವುದು ಕೇವಲ ಸೃಷ್ಟಿ ಮಾತ್ರವಲ್ಲ ಅದು ಅದರ ಆಚೆ ವಿಶ್ವ ವ್ಯಾಪಿಯಾಗಿ ಬೆಳೆದಿರುವಂಥಹದ್ದು ಎಂದರು.
ಪ್ರಶಸ್ತಿ ಪ್ರಧಾನ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಯಡಿಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ. ತೋಂಟದ ಸಿದ್ದರಾಮ ಸ್ವಾಮಿಗಳು ಮಾತನಾಡಿ ವಿಶ್ವವಿದ್ಯಾಲಯದಿಂದ ಜ್ಞಾನಗಳಿಸಿದವರಿಗಿಂತ ಬದುಕಿನ ಅನುಭವಗಳಿಂದ ಕಲಿತವರು ಸಮಾಜದಲ್ಲಿ ವಿಶೇಷ ಸಾಧನೆ ಮಾಡುತ್ತಾರೆ. ಅಂತವರ ಸಾಲಿಗೆ ಪದ್ಮಾವತಿ ಅಂಗಡಿಯವರು ಸೇರುತ್ತಾರೆ. ಕೇವಲ ನಾಲ್ಕನೇ ತರಗತಿ ಓದಿರುವ ಇವರು ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಅಂತವರ ಸ್ಮರಣೆಯಲ್ಲಿ ನೀಡಲಾಗುವ ಮಹಿಳಾ ರತ್ನ ಪ್ರಶಸ್ತಿ ಪಡೆದಿರುವವರು ಇನ್ನೂ ಹೆಚ್ಚು ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಜೀವನದಲ್ಲಿ ಪ್ರತಿಯೊಬ್ಬರಿಗೂ ಆದರ್ಶಗಳಿರಬೇಕು.ಆದರ್ಶವಿಲ್ಲದ ಜೀವನ ವ್ಯರ್ಥ. ಇನ್ನೊಬ್ಬರ ಹಿತಕ್ಕಾಗಿ ಶ್ರಮಿಸಿದರೆ ಮಾತ್ರ ಮನುಷ್ಯನ ಜೀವನ ಸಾರ್ಥಕವಾಗುತ್ತದೆ. ನಮ್ಮ ಉಸಿರು ಹೋಗುವ ಮುನ್ನ ಹೆಸರು ಉಳಿಸುವ ಕೆಲಸ ಎಲ್ಲರೂ ಮಾಡುವಂತಾಗಬೇಕು ಎಂದರು.
ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಸಮಾರಂಭದ ನೇತೃತ್ವ ವಹಿಸಿದ್ದರು.
ವೇದಿಕೆಯ ಮೇಲೆ ಕಲಬುರ್ಗಿ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕಿ ಉಜ್ವಲಾ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ ಪದ್ಮಾವತಿ ಅಂಗಡಿ ಅವರ ಸಾಧನೆಗಳನ್ನು ಸ್ಮರಿಸಿಕೊಂಡರು.
ಸಮಾರಂಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಹಾಗೂ ಶರಣ ಸಾಹಿತ್ಯ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪ್ರೇಮಕ್ಕ ಅಂಗಡಿ ಹಾಗೂ ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೆ ಹಾಗೂ ಖ್ಯಾತ ಸುಗಮ ಸಂಗೀತ ಕಲಾವಿದೆ ನಯನಾ ಗಿರಿಗೌಡರ ಅವರಿಗೆ ‘ಮಹಿಳಾ ರತ್ನ’ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಪ್ರಾರಂಭದಲ್ಲಿ ಎಸ್. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕಿ ವೀಣಾ ಪುರಾಣಿಕಮಠ ಸ್ವಾಗತಿಸಿದರು. ಇನ್ನೋರ್ವ ಪ್ರಾಧ್ಯಾಪಕಿ ಅನಿತಾ ಪಾಟೀಲ ನಿರೂಪಿಸಿ ವಂದಿಸಿದರು.