ಬೆಂಗಳೂರು-೧೨: ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಯಾರೂ ಸಮರ್ಥನೆ ಮಾಡುವ ಪ್ರಶ್ನೆಯೇ ಇಲ್ಲ. ಆದರೆ, ಪ್ರಕರಣದ ತನಿಖೆ ನಡೆಯುತ್ತಿರುವ ರೀತಿ ಸರಿ ಇಲ್ಲ. ಮಾಹಿತಿ ಕೊಟ್ಟವರನ್ನೇ ಬಂಧನ ಮಾಡುತ್ತಿದ್ದಾರೆ. ಎಸ್ಐಟಿಯ ತನಿಖೆಯ ದಿಕ್ಕು ತಪ್ಪುತ್ತಿದೆ. ಸರಿಯಾದ ತನಿಖೆಗೆ ಸಿಬಿಐಗೆ ವಹಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್ ಐಟಿಯವರು ಅಪರಾಧಿಗಳನ್ನು ಬಂಧಿಸುತ್ತಿಲ್ಲ. ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಅಂದರೆ, ಸಿಬಿಐಗೆ ವಹಿಸಲಿ ಎಂದು ಆಗ್ರಹಿಸಿದರು.
ಈ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿಚಾರಣೆಯೂ ಮಾಡಬೇಕು ಎಂಬ ಕೆಲವರ ಆಗ್ರಹದ ಕುರಿತು ಕೇಳಿದ ಪ್ರಶ್ನೆಗೆ ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರ್ಯಾರ ಹೆಸರು
ಕೇಳಿಬರುತ್ತಿದೆಯೋ ಅವರ ವಿಚಾರಣೆಯೂ ಮಾಡಲಿ
ಅದಕ್ಕೇ ನಾವು ಪ್ರಕರಣ ಸಿಬಿಐಗೆ ಕೊಡಲಿ ಅಂತ ಕೇಳುತ್ತಿದ್ದೇವೆ ಎಂದರು.
ಪರಿಷತ್ ಚುನಾವಣೆಗೆ ಟಿಕೆಟ್ ಘೋಷಣೆಯಾದ ಮೇಲೆ ಕೆಲವರಲ್ಲಿ ಅಸಮಧಾನವಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಿಧಾನ ಪರಿಷತ್ ಚುನಾವಣೆಗೆ ಹಲವರು ಆಕಾಂಕ್ಷಿಗಳು ಇದ್ದರು. ಟಿಕೆಟ್ ಕೈತಪ್ಪಿದಾಗ ಸಹಜವಾಗಿ ಬೇಸರ ಆಗುತ್ತದೆ. ಎಲ್ಲವೂ ಸರಿ ಹೋಗುತ್ತದೆ. ಈಗಾಗಲೇ ಮೈತ್ರಿ ಬಗ್ಗೆ ವರಿಷ್ಠರು ಯಾವ ರೀತಿ ತೀರ್ಮಾನ ಮಾಡಿದ್ದಾರೋ ಅದರಂತೆ ನಡೆಯುತ್ತದೆ ಎಂದು ಹೇಳಿದರು.
*ಎಸ್ಎಂಕೆ ಆರೋಗ್ಯ ವಿಚಾರಣೆ*
ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಆರೋಗ್ಯವನ್ನು ಮಾಜಿ ಸಿಎಂ ಬೊಮ್ಮಾಯಿ ಹಾಗೂ ಪ್ರತಿಪಕ್ಷ ನಾಯಕ ಆರ್ ಅಶೋಕ ವಿಚಾರಿಸಿದರು.
ಇದಕ್ಕೂ ಮೊದಲು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಎಸ್ ಎಂ ಕೃಷ್ಣ ಅವರ ಆರೋಗ್ಯ ಎರಡು ದಿನಗಳಿಂದ ಕ್ಷೀಣಿಸಿದೆ. ಅವರು ಬೇಗ ಗುಣಮುಖರಾಗಲಿ ಅಂತ ಹಾರೈಸುತ್ತೇನೆ ಎಂದು ಹೇಳಿದರು.