ಮೈಕ್ರೋ ಆಬ್ಸರ್ವರ್‌ಗಳ ಕಾರ್ಯ ಮಹತ್ವದ್ದು: ಚುನಾವಣಾ ಸಾಮಾನ್ಯ ವೀಕ್ಷಕ ಜಿ.ಎಸ್.ಪಾಂಡಾ ದಾಸ್
ಚಿಕ್ಕೋಡಿ-೦೩: ಚುನಾವಣೆಯಲ್ಲಿ ಮೈಕ್ರೋ ಆಬ್ಸರ್ವರ್‌ಗಳ ಪಾತ್ರ ಮಹತ್ವದ್ದಾಗಿದ್ದು ಮೇ ೭ ರಂದು ಜರುಗಲಿರವು ಮತದಾನ ದಿನದಂದು ಅತೀ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣಾ ಸಾಮಾನ್ಯ ವೀಕ್ಷಕರಾದ ಶ್ರೀ ಜಿ.ಎಸ್.ಪಾಂಡಾ ದಾಸ್ ಸೂಚಿಸಿದರು.
ಚಿಕ್ಕೋಡಿಯ ಬಿ.ಕೆ. ಕಾಲೇಜಿನಲ್ಲಿ ಶುಕ್ರವಾರ ರಂದು ಜರುಗಿದ ಮೈಕ್ರೋ ಆಬ್ಸರ್ವರ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಮೈಕ್ರೋ ಆಬ್ಸರ್ವರ್‌ಗಳು ನಿಯೋಜಿತ ಮತಗಟ್ಟೆಗೆ ಮತದಾನಕ್ಕೂ ಮುನ್ನ ತೊಂಭತ್ತು ನಿಮಿಷ ನಡೆಯುವ ಅಣಕು ಮತದಾನದಿಂದ ಹಿಡಿದು ಮತದಾನ ಪ್ರಕ್ರಿಯೆ ಮುಗಿಯುವ ವರೆಗೂ ತೀವ್ರ ನಿಗಾವಹಿಸಬೇಕು. ಈ ಎಲ್ಲ ಪ್ರಕ್ರಿಯೆಗಳ ವರದಿಯನ್ನು ನಿಗದಿತ ನಮೂನೆಯಲ್ಲಿ ಚುನಾವಣಾ ವೀಕ್ಷಕರಾದ ನನಗೆ ಒದಗಿಸುವಂತೆ ಶ್ರೀ ಜಿ.ಎಸ್.ಪಾಂಡಾ ದಾಸ್ ಅವರು ತಿಳಿಸಿದರು.
ಚಿಕ್ಕೋಡಿ ಲೋಕಸಭೆ ಮತಕ್ಷೇತ್ರದ ಚುನಾವಣಾಧಿಕಾರಿಗಳಾದ ಶ್ರೀ ರಾಹುಲ ಶಿಂಧೆ ಮಾತನಾಡಿ ಮೈಕ್ರೋ ಆಬ್ಸರ್ವರ್‌ಗಳು ಮತದಾನಕ್ಕೂ ಮುನ್ನ ದಿನವಾದ ಮೇ ೬ ರಂದು ಬೆಳಗ್ಗೆ ೧೦ ಗಂಟೆಗೆ ಆಯಾ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಕೇಂದ್ರಕ್ಕೆ ತೆರಳಿ ಸಹಾಯಕ ಚುನಾವಣಾಧಿಕಾರಿಗಳ ಎದುರು ಕರ್ತವ್ಯಕ್ಕೆ ವರದಿ ಮಾಡಿಕೊಂಡು ತಮಗೆ ನಿಯೋಜಿಸಿದ ಮತಗಟ್ಟೆಗೆ ಹಾಜರಾಗುವುದು. ತಪ್ಪಿದ್ದಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.
ಅಭ್ಯರ್ಥಿ/ಏಜೆಂಟರ ಸಮ್ಮುಖದಲ್ಲಿ ನಡೆಯುವ ಅಣುಕು ಮತದಾನ ವೀಕ್ಷಣೆ ಮಾಡಬೇಕು. ಅಣುಕು ಮತದಾನದ ಸಂದರ್ಭದಲ್ಲಿ ಎಲ್ಲ ಅಭ್ಯರ್ಥಿಗಳಿಗೆ ಸಮಾನ ಮತ ಚಲಾವಣೆಯಾಗಿರುವುದನ್ನು ದೃಢೀಕರಿಸುವುದು. ಚುನಾವಣಾ ಆಯೋಗ ನೀಡಿರುವ ಮಾರ್ಗದರ್ಶನದಂತೆ ಎಲ್ಲ ಅಂಶಗಳನ್ನು ಪಾಲನೆಯಾಗುವಂತೆ ಎಚ್ಚರ ವಹಿಸಬೇಕು. ಮತಗಟ್ಟೆಗೆ ಇರುವಂತಹ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳುವದು ಮೈಕ್ರೋ ಆಬ್ಸರ್ವರ್‌ಗಳ ಜವಾಬ್ದಾರಿಯಾಗಿರುತ್ತದೆ.
ಮತದಾನದ ದಿನದಂದು ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಯನ್ನು ಸೂಕ್ಷö್ಮವಾಗಿ ಪರೀಶಿಲಿಸಬೇಕು. ಮತಗಟ್ಟೆಗಳಲ್ಲಿ ನೀತಿ ಸಂಹಿತೆ ಉಲ್ಲಂಘನೆಯಂತಹ ಪ್ರಕರಣಗಳು ಕಂಡು ಬಂದಲ್ಲಿ ಕೂಡಲೆ ಪ್ರಕರಣ ದಾಖಲಿಸುವಂತೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಶ್ರೀ ರಾಹುಲ ಶಿಂಧೆ ಸೂಚಿಸಿದರು.
ಕಾರ್ಯಾಗಾರದಲ್ಲಿ ಚಿಕ್ಕೋಡಿ ಲೋಕಸಭಾ ಚುನಾವಣಾಧಿಕಾರಿಗಳ ಕಚೇರಿಯ ಸಹಾಯಕ ಚುನಾವಣಾಧಿಕಾರಿ ಶ್ರೀ ಬಸವರಾಜ ಅಡವಿಮಠ, ಜಿಲ್ಲಾ ತರಬೇತಿ ನೋಡೆಲ್ ಅಧಿಕಾರಿ ಶ್ರೀಮತಿ ಗೀತಾ ಕೌಲಗಿ, ಚಿಕ್ಕೋಡಿ ಉಪವಿಭಾಗಾಧಿಕಾರಿ ಶ್ರೀಮತಿ ಮೆಹಬೂಬಿ ಸೇರಿದಂತೆ ಮೈಕ್ರೋ ಆಬ್ಸರ‍್ಸ್ ಉಪಸ್ಥಿತರಿದ್ದರು.