02/02/2026
20260201_102818

ಗಡಿಭಾಗದ ಕನ್ನಡ ಶಾಲೆಗಳ ಸುಧಾರಣೆಗೆ ಮೊದಲ ಆದ್ಯತೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್

ಬೆಳಗಾವಿ-01: ಗಡಿ ಜಿಲ್ಲೆ ಬೆಳಗಾವಿಯಲ್ಲಿನ ಕನ್ನಡ ಶಾಲೆಗಳ ಸುಧಾರಣೆ, ಕನ್ನಡ ನಾಮಫಲಕ ಕಡ್ಡಾಯ, ‘ಬೆಳಗಾವಿ’ ಹೆಸರು ಕಡ್ಡಾಯ ಬಳಕೆ, ಕನ್ನಡಲ್ಲಿ ಪತ್ರ ವ್ಯವಹಾರ, ವಿವಿಧ ಸಮಸ್ಯೆಗಳ ಪರಿಹಾರ ಹಾಗೂ ಅಭಿವೃದ್ಧಿ ಯೋಜನೆ ಸೇರಿದಂತೆ ಕನ್ನಡ ಭಾಷೆ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶನಿವಾರ  ಕನ್ನಡಪರ ಸಂಘಟನೆ/ಕನ್ನಡಪರ ಹೋರಾಟಗಾರರೊಂದಿಗೆ ನಡೆದ ಚಿಂತನ-ಮಂಥನ ಸಭೆಯ ಅಧ್ಯಕ್ಷೆ ವಹಿಸಿ ಅವರು ಮಾತನಾಡಿದರು.

ಸಹಕಾರಿ ಸಂಘ-ಸಂಸ್ಥೆಗಳು ಕಡ್ಡಾಯವಾಗಿ ಕನ್ನಡ ನಾಮಫಲಕಲ ಅಳವಡಿಸಲು ಸೂಚನೆ ನೀಡಲಾಗಿದೆ. ನಿಯಮ ಪಾಲಿಸದ ಸಂಘ ಸಂಸ್ಥೆಗಳಿಗೆ ನೋಟಿಸ್ ನೀಡಲಾಗುವುದು. ಇಲಾಖೆಗಳಲ್ಲಿ ಕನ್ನಡ ಅನುಷ್ಠಾನ ವಿಷಯದ ಕುರಿತು ಪ್ರಥಮವಾಗಿ ಆದ್ಯತೆ ನೀಡಲಾಗಿದೆ ಎಂದರು.

ಖಾಸಗಿ ಆಂಗ್ಲಮಾಧ್ಯಮ, ಮರಾಠಿ ಶಾಲೆಗಳಲ್ಲಿ ನಾಡಗೀತೆ ಬಳಕೆ ಮಾಡದ ಶಾಲೆಗಳಿಗೆ ನೋಟಿಸ್ ನೀಡಲಾಗುವುದು. ಒಂದುವೇಳೆ ನಾಡಗೀತೆ ಬಳಕೆ ಮಾಡದೇ ಹೋದಲ್ಲಿ ಅಂತಹ ಶಾಲೆಗಳನ್ನು ಪರವಾನಿಗೆ ರದ್ದುಪಡಿಸಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಶಾಂತಿ ಕಾಪಾಡಿಕೊಂಡು, ಕನ್ನಡ ನಾಮಫಲಕಗಳ ಅಳವಡಿಕೆಗೆ ಈಗಾಗಲೇ ಸೂಚನೆ ನೀಡಲಾಗಿದೆ. ಒಂದುವೇಳೆ ನಿಯಮ ಉಲ್ಲಂಘನೆ ಮಾಡಿದಲ್ಲಿ ಅಂತಹವರ ವಿರುದ್ಧ ಕಾನೂನೂನಾತ್ಮಕವಾಗಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.

ಕನ್ನಡ ಶಾಲಾ ಕಟ್ಟಡ ದುರಸ್ತಿ:

ಕನ್ನಡಪರ ಸಂಘಟನಾ ಸದಸ್ಯ ವಾಜಿದ್ ಹಿರೆಕೋಡಿ ಮಾತನಾಡಿ ಜಿಲ್ಲೆಯಲ್ಲಿ ಚಿಂತನ ಮಂಥನ ಮಾದರಿಯ ಕನ್ನಡ ಅನುಷ್ಠಾನ ಕುರಿತು ಇನ್ನಷ್ಟು ಸಭೆಗಳನ್ನು ನಿರಂತರ ಮಾಡಬೇಕು. ಬೆಳಗಾವಿ ಭಾಗದಲ್ಲಿ ಬಹಳಷ್ಟು ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುವ ಪರಿಸ್ಥಿತಿಗಳು ನಿರ್ಮಾಣವಾಗಿದೆ. ಸರಿಯಾದ ಶಾಲಾ ಕಟ್ಟಡ, ಬಸ್ ವ್ಯವಸ್ಥೆ, ರಸ್ತೆಗಳು ಸೇರಿದಂತೆ ಮೂಲಭೂತ ಸೌಕರ್ಯ ಇಲ್ಲದೆ ಕನ್ನಡ ಶಾಲೆಗಳನ್ನು ಮುಚ್ಚುವ ಹಂತಗಳಲ್ಲಿವೆ. ಮಳೆಗಾಲದಲ್ಲಿ ಶಾಲಾ ಕೊಠಡಿ, ಬೆಂಚ್, ಬೋರ್ಡ್ ಇಲ್ಲದೆ ಸಮಸ್ಯೆ ಬಹಳಷ್ಟಿವೆ ಕೂಡಲೇ ಅಂತಹವುಗಳನ್ನು ಪಟ್ಟಿ ಮಾಡಿ ದುರಸ್ತಿ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಮಾತನಾಡಿ
ಜಿಲ್ಲೆಯಲ್ಲಿ ಕನ್ನಡ ಶಾಲೆಗಳನ್ನು ಬಂದ್ ಮಾಡಿ ಇತರೆ ಖಾಸಗಿ ಶಾಲೆಗಳು ಬಹಳಷ್ಟು ನಿರ್ಮಾಣಗುತ್ತಿವೆ. ರಾಜ್ಯದಲ್ಲಿ 40 ಸಾವಿರ ಶಾಲೆಗಳು ಮುಚ್ಚುತ್ತಿವೆ ಈ ಕುರಿತು ಸರ್ಕಾರ ಎಚ್ಚೆತ್ತುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸರ್ಕಾರದ ಹಂತದಲ್ಲಿ ಚರ್ಚೆ ನಡೆಸಬೇಕು. ಮ್ಯಾಗ್ನೆಟ್ ಶಾಲಾ ನೀತಿ ತುಂಬ ಅಪಾಯಕಾರಿ ಇದರಿಂದ ಹೆಚ್ಚು ಕನ್ನಡ ಶಾಲೆಗಳು ಮುಚ್ಚುವ ಸಾದ್ಯತೆ ಇದೆ ಎಂದರು

ಮ್ಯಾಗ್ನೆಟ್ ಶಾಲಾ ನೀತಿಯಿಂದ ಈಗಾಗಲೇ 17 ಲಕ್ಷ ಮಕ್ಕಳು ಶಾಲೆಯಿಂದ ಹೊರಗುಳಿದಿರುವ ಕುರಿತು ವರದಿಗಳು ಲಭ್ಯವಾಗಿವೆ. ಜಿಲ್ಲಾಡಳಿತದಿಂದ ಇಂತಹ ಅಪಾಯಕಾರಿ ಬೆಳವಣಿಗೆಯನ್ನು ತಡೆ ಹಿಡಿಯುವಂತೆ ಚರ್ಚಿಸಬೇಕು ಎಂದು ಚಂದರಗಿ ಮನವಿ ಮಾಡಿಕೊಂಡರು.

ಕನ್ನಡಪರ ಹೋರಾಟಗಾರರೊಬ್ಬರು ಮಾತನಾಡಿ
ಬೆಳಗಾವಿ ವ್ಯಾಪ್ತಿಯಲ್ಲಿನ ಕನ್ನಡ ಶಾಲೆಗಳಿಗೆ ಕಡ್ಡಿಯವಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಗಡಿ ಭಾಗದಲ್ಲಿ ಕನ್ನಡ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಕೋರಿದರು.

ಕನ್ನಡ ಫಲಕ ಅಳವಡಿಕೆ ಕಡ್ಡಾಯ:

ಸರ್ಕಾರಿ ಇಲಾಖೆಯ ನೌಕರರಿಗೆ ಕಡ್ಡಾಯವಾಗಿ ಹಳದಿ ಕೆಂಪು ಬಣ್ಣದ ಗುರುತಿನ ಚೀಟಿ ಟ್ಯಾಗ್ ಧರಿಸುವಂತೆ ಸೂಚನೆ ನೀಡಬೇಕು. ಮಹಾನಗರ ಪಾಲಿಕೆ ಅಧಿಕಾರಿಗಳು ಕನ್ನಡ ಅನುಷ್ಠಾನದಲ್ಲಿ ದೊಡ್ಡ ಜವಾಬ್ದಾರಿ ನಿರ್ವಹಿಸಬೇಕು.
ನಗರದಲ್ಲಿ ಕನ್ನಡ ಬಳಕೆ, ಕನ್ನಡ ಫಲಕಗಳನ್ನು ನಿಯಮಾನುಸಾರ ಕಡ್ಡಾಯವಾಗಬೇಕು ಎಂದು ಕನ್ನಡಪರ ಸಂಘಟನೆಯ ಶ್ರೀನಿವಾಸ ತಾಳೂರಕರ ಒತ್ತಾಯಿಸಿದರು.

ಇನ್ನೋರ್ವ ಕನ್ನಡಪರ ಹೋರಾಟಗಾರ ಮಾತನಾಡಿ
ಶಿಕ್ಷಣಿಕವಾಗಿ ಬೇರೆ ರಾಜ್ಯಗಳಲ್ಲಿ ಭಾಷಾ ಶಿಕ್ಷಕರ ಕೊರತೆಯಿಲ್ಲ ಆದರೆ ನಮ್ಮ ರಾಜ್ಯದಲ್ಲಿ ಭಾಷಾ ಶಿಕ್ಷಕರ ಕೊರತೆಯಿದೆ. 1ನೇ ತರಗತಿಯಿಂದ 10ನೇ ತರಗತಿವರೆಗೆ ಕನ್ನಡ ಭಾಷೆಯಲ್ಲಿ ಓದಿದ ಮಕ್ಕಳಿಗೆ ಮಾತ್ರ ಮೀಸಲಾತಿ ಹುದ್ದೆ ಭರ್ತಿಗೆ ಆದ್ಯತೆ ನೀಡಬೇಕು ಎಂದು ಸುತ್ತೋಲೆ ಹೊರಡಿಸಿದರೆ ರಾಜ್ಯದಲ್ಲಿ ಪರಿಣಾಮಕಾರಿ ಕನ್ನಡ ಅನುಷ್ಠಾನ ಸಾಧ್ಯ ಎಂದು ತಿಳಿಸಿದರು.

ಶಾಲೆಗಳಲ್ಲಿ ನಾಡಗೀತೆ ಕಡ್ಡಾಯ:

ಕನ್ನಡಪರ ಸಂಘಟನೆಯ ಮಹಾದೇವ ತಳವಾರ ಮಾತನಾಡಿ ಬೆಳಗಾವಿ ನಗರದಲ್ಲಿ ಕನ್ನಡ ನಾಮಫಲಕ ನಿಯಮಾನುಸಾರ ಆಗಬೇಕು. ಒಂದುವೇಳೆ ನಿಯಮ ಉಲ್ಲಂಘನೆಯಾದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.

ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡವಾಗಿ ಬಳಕೆ ಮಾಡಬೇಕು ಎಂದು ಆದೇಶವಿದ್ದರೂ ಸಹ ನಾಡಗೀತೆ ಪ್ರಸಾರವಾಗುತ್ತಿಲ್ಲ ಅಂತಹ ಇಲಾಖೆಗಳಿಗೆ ಸೂಚನೆ ನೀಡಬೇಕು. ಸರ್ಕಾರಿ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಕನ್ನಡ ಭಾಷೆ ಕಡ್ಡಾಯವಾಗಿ ಬಳಕೆ ಮಾಡಬೇಕು.

ಕನ್ನಡಪರ ಹೋರಾಟಗಾರ ಮೇಲೆ ವಿನಾಕಾರಣ ಪೊಲೀಸ್ ಪ್ರಕರಣಗಳು ದಾಖಲಾಗುತ್ತಿವೆ ಅಂತಹ ಪ್ರಕರಣಗಳನ್ನು ಖುಲಾಸೆಗೊಳಿಸುವ ನಿಟ್ಟಿನಲ್ಲಿ ಸರ್ಕಾರದ ಹಂತದದಲ್ಲಿ ಚರ್ಚಿಸಬೇಕು ಎಂದು ಮಹಾದೇವ ತಳವಾರ ಒತ್ತಾಯಿಸಿದರು.

ಕನ್ನಡಪರ ಸಂಘಟನಾ ಸದಸ್ಯ ಸುರೇಶ ಗವನ್ನವರ ಮಾತನಾಡಿ ಗ್ರಾಮ ಪಂಚಾಯತಿ ಮತ್ತು ಲೋಕೋಪಯೋಗಿ ಇಲಾಖೆ ರಸ್ತೆಗಳಲ್ಲಿನ ಇತರೆ ಭಾಷೆ ಫಲಕಗಳು ಅಳವಡಿಸಲಾಗಿದೆ ಹಾಗಾಗಿ ನಾಮಫಲಕದಲ್ಲಿ ಕನ್ನಡ ಭಾಷೆ ಬಳಕೆ ಮಾಡುವಂತೆ ಗ್ರಾಮ ಪಂಚಾಯಿತಿ ಮತ್ತು ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡಬೇಕು ಎಂದು ತಿಳಿಸಿದರು.

ನಗರ ಪೊಲೀಸ್ ಆಯುಕ್ತ ಭೂಷಣ್ ಗುಲಾಬರಾವ ಬೊರಸೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಾಹುಲ್ ಶಿಂಧೆ, ಮಹಾನಗರ ಪಾಲಿಕೆ ಆಯುಕ್ತ ಎಂ. ಕಾರ್ತಿಕ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸೇರಿಯಂತೆ ವಿವಿಧ ಕನ್ನಡಪರ ಸಂಘಟನೆಗಳ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!