01/05/2026
IMG-20260202-WA0017

ಎಂಜಿನಿಯರ್‌ಗಳು ರಾಷ್ಟ್ರೀಯ ಸನ್ನದ್ಧತೆಯನ್ನು ಬಲಪಡಿಸಲು ಶ್ರಮಿಸಬೇಕು: ರಿಯರ್‌ ಅಡ್ಮಿರಲ್ ವಿಕ್ರಂ ಮೆನನ್

 

8,702 ಸಾವಿರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಬೆಳಗಾವಿ-02: “ಎಂಜಿನಿಯರ್‌ಗಳಾದ ನೀವು ನಿಮ್ಮ ಜ್ಞಾನ ಮತ್ತು ಸುಸ್ಥಿರತೆ, ಸ್ಥಿತಿಸ್ಥಾಪಕತ್ವನ್ನು ಒಳಗೊಂಡು ರಾಷ್ಟ್ರೀಯ ಸನ್ನದ್ಧತೆಯನ್ನು ಬಲಪಡಿಸಲು ಶ್ರಮಿಸಬೇಕೆಂದು” ಕರ್ನಾಟಕ ನೌಕಾ ನೆಲೆಯ ಫ್ಲಾಗ್‌ ಆಫೀಸರ್ ಕಮಾಂಡಿಂಗ್ ರಿಯರ್‌ ಅಡ್ಮಿರಲ್ ವಿಕ್ರಂ ಮೆನನ್ ಹೇಳಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ತನ್ನ ಬೆಳಗಾವಿ ಕ್ಯಾಂಪಸ್‌ ಜ್ಞಾನ ಸಂಗಮದಲ್ಲಿ ಆಯೋಜಿಸಿದ್ದ ತನ್ನ 25 ನೇ ವಾರ್ಷಿಕ ಘಟಿಕೋತ್ಸವದಲ್ಲಿ( ಭಾಗ-2) ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, “ರಾಷ್ಟ್ರದ ಪ್ರಗತಿ, ಭದ್ರತೆ ಮತ್ತು ಸಮೃದ್ಧಿಗೆ ನೀವು ನೀಡುವ ಕೊಡುಗೆಗಳಿಗೆ ಮುಂಗಡವಾಗಿ ಶುಭ ಹಾರೈಸುತ್ತೇನೆ. ಎಂಜಿನಿಯರ್‌ಗಳು ಕಂಡು ಹಿಡಿಯುವ ನೂತನ ತಂತ್ರಜ್ಞಾನಗಳು ಮನುಷ್ಯನು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತಿರಬೇಕು. ಹವಾಮಾನ ಬದಲಾವಣೆಯನ್ನು ಎದುರಿಸುವುದರಿಂದ ಹಿಡಿದು, ಆರೋಗ್ಯ ಸೇವೆಗಳನ್ನು ಸುಧಾರಿಸುವವರೆಗೂ ತಂತ್ರಜ್ಞಾನದ ಅವಶ್ಯಕತೆ” ಇದೆ.

“ನಿಜವಾದ ನಾಯಕತ್ವವು ನವೀನತೆಯಲ್ಲಷ್ಟೇ ಅಲ್ಲ, ನೈತಿಕ ಹೊಣೆಗಾರಿಕೆ, ತಂಡದ ಕೆಲಸ, ವಿದ್ಯಾರ್ಥಿಗಳು ಸ್ವಾರ್ಥ ಬಿಟ್ಟು ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ನೀವು ಇದೀಗ ವೃತ್ತಿ ಜೀವನಕ್ಕೆ ಹೆಜ್ಜೆ ಹಿಡುತ್ತಿದ್ದೀರಿ, ದೊಡ್ಡ ಕನಸುಗಳನ್ನು ಕಾಣಿ. ಧೈರ್ಯವಾಗಿ ಸಮಸ್ಯೆಗಳನ್ನು ಎದುರಿಸಿ” ಎಂದು ಸಲಹೆ ನೀಡಿದರು.

“ವಿಟಿಯು ಕೃತಕ ಬುದ್ಧಿಮತ್ತೆ(ಎಐ), ಕ್ವಾಂಟಮ್‌ ಕಂಪ್ಯೂಟಿಂಗ್‌ ನಂತಹ ತಂತ್ರಜ್ಞಾನಗಳು, ಅಡ್ವಾನ್ಸ್‌ ಕಮ್ಯೂನಿಕೇಷನ್‌, ಸೈಬರ್‌ ಸೆಕ್ಯೂರಿಟಿಯನ್ನು ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳುವ ಮೂಲಕ ತಂತ್ರಜ್ಞಾನದಲ್ಲಿ ಮುಂದಿದೆ. ಇದು ರಾಷ್ಟ್ರದ ಪ್ರಗತಿ ಮತ್ತು ಭದ್ರತೆಗೆ ಅತ್ಯಂತ ಅಗತ್ಯವಾದ ಕ್ಷೇತ್ರಗಳಾಗಿವೆ” ಎಂದರು.

“ಏರೋಸ್ಪೇಸ್ ಮತ್ತು ಡಿಫೆನ್ಸ್‌ನಲ್ಲಿ “ಸೆಂಟರ್ ಆಫ್ ಎಕ್ಸಲೆನ್ಸ್” ಸ್ಥಾಪನೆ ಮತ್ತು ಡಿಫೆನ್ಸ್ ಟೆಕ್ನಾಲಜಿಯಲ್ಲಿ ಪ್ರಸ್ತಾಪಿತ ಎಂ.ಟೆಕ್ ಕಾರ್ಯಕ್ರಮಗಳು, ಭವಿಷ್ಯಕ್ಕೆ ಸಿದ್ಧವಾದ ಕೌಶಲ್ಯಾಭಿವೃದ್ಧಿಗೆ ವಿ.ಟಿ.ಯು ನೀಡುತ್ತಿರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ.” ಎಂದರು.

“ಶಿಕ್ಷಣ, ಸಂಶೋಧನೆ ಮತ್ತು ನವೀನತೆಯಲ್ಲಿ ಸಹಕಾರವನ್ನು ಬಲಪಡಿಸಲು ಉದ್ದೇಶದಿಂದ ವಿಟಿಯು, ನೌಕಾನೆಲೆಯೊಂದಿಗೆ ಒಪ್ಪಂದ ಮಾಡಿಕೊಳ್ಳವುದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಇಂತಹ ಸಹಭಾಗಿತ್ವಗಳು ವಿದ್ಯಾರ್ಥಿಗಳು, ಸಂಶೋಧಕರು ಮತ್ತು ನೌಕಾಪಡೆಯ ಸಿಬ್ಬಂದಿ ಏರೋಸ್ಪೇಸ್, ರಕ್ಷಣಾ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಸಂಕೀರ್ಣ ಸವಾಲುಗಳನ್ನು ಸಂಯುಕ್ತವಾಗಿ ಎದುರಿಸಲು ಸಾಧ್ಯವಾಗುತ್ತದೆ” ಎಂದರು.

ರಾಜ್ಯಪಾಲರಾದ ಥಾವರ ಚಂದ್ ಗೆಹ್ಲೋಟ್ ಮಾತನಾಡಿ, “ವಿಶ್ವೇಶ್ವರಯ್ಯ ಅವರು ತಮ್ಮ ದೂರದೃಷ್ಟಿ ಇಟ್ಟುಕೊಂಡು ಈ ವಿಶ್ವವಿದ್ಯಾಲಯ ಆರಂಭಿಸಿದ್ದಾರೆ. ತಂತ್ರಜ್ಞಾನಗಳು ಸಾಮಾನ್ಯ ವರ್ಗದ ಜನರ ಸಮಸ್ಯೆಗಳನ್ನು ಬಗೆಹರಿಸುವಂತಿರಬೇಕು. ಕರ್ನಾಟಕ ರಾಜ್ಯವು ಜ್ಞಾನ, ನಾವೀನ್ಯತೆ ಮತ್ತು ಉತ್ತಮ ಆಡಳಿತದ ಕ್ಷೇತ್ರಗಳಲ್ಲಿ ಯಾವಾಗಲೂ ಪ್ರಮುಖ ಪಾತ್ರ ವಹಿಸಿದೆ.

ಪ್ರಸ್ತುತ ರಾಜ್ಯವು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ ವಿಜ್ಞಾನ, ನವೋದ್ಯಮ ಸಂಸ್ಕೃತಿ ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ದೇಶವು ಮುಂಚೂಣಿಯಲ್ಲಿದೆ. ಆತ್ಮವಿಶ್ವಾಸದ ಮತ್ತು “ಅಭಿವೃದ್ಧಿ ಹೊಂದಿದ ಭಾರತ”ವನ್ನು ಸಾಧಿಸುವ ಸಂಕಲ್ಪದೊಂದಿಗೆ ಮುಂದುವರಿಯುತ್ತಿರುವ ಭಾರತ ಮತ್ತು ಕರ್ನಾಟಕವನ್ನು ಯುವಪೀಳಿಗೆ ಪ್ರತಿನಿಧಿಸುತ್ತಾರೆ. ಈ ಗುರಿಯನ್ನು ಸಾಧಿಸುವಲ್ಲಿ ಜ್ಞಾನ, ಕಠಿಣ ಪರಿಶ್ರಮ ಮತ್ತು ನಿಮ್ಮ ಕರ್ತವ್ಯ ಪ್ರಜ್ಞೆ ಪ್ರಮುಖ ಪಾತ್ರ ವಹಿಸುತ್ತದೆ ” ಎಂದು ತಿಳಿಸಿದರು.

“ನಿಮ್ಮ ಈ ಸಾಧನೆಗೆ ನಿಮ್ಮ ಪೋಷಕರು, ಅಧ್ಯಾಪಕರು ಮತ್ತು ವಿಶ್ವವಿದ್ಯಾಲಯದ ಕುಟುಂಬದ ಕೊಡುಗೆಗಳು ಅಪಾರ. ಅವರ ಮಾರ್ಗದರ್ಶನ, ತ್ಯಾಗ ಮತ್ತು ನಿರಂತರ ಪ್ರಯತ್ನಗಳಿಲ್ಲದೆ, ನಿಮ್ಮ ಶೈಕ್ಷಣಿಕ ಪ್ರಯಾಣ ಸಾಧ್ಯವಾಗುತ್ತಿರಲಿಲ್ಲ. ಅವರೆಲ್ಲರಿಗೂ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಎಲ್ಲಾ ಪದವಿ ವಿಜೇತರು ಮತ್ತು ಚಿನ್ನದ ಪದಕ ವಿಜೇತರಿಗೆ ಮತ್ತೊಮ್ಮೆ ನನ್ನ ಹೃತ್ಪೂರ್ವಕ ಅಭಿನಂದನೆಗಳು” ಎಂದು ಶುಭ ಹಾರೈಸಿದರು.

 

ಈ ಘಟಿಕೋತ್ಸವದಲ್ಲಿ ಒಟ್ಟು 8,702 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಈ ಪೈಕಿ 96 ವಿದ್ಯಾರ್ಥಿಗಳು ರ್ಯಾಂಕ್‌ ವಿಜೇತರು ಹಾಗೂ 25 ವಿದ್ಯಾರ್ಥಿಗಳು ಚಿನ್ನದ ಪದಕವನ್ನು ಪಡೆದಕೊಂಡರು. ವಿಟಿಯು ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ್‌, ಕುಲಸಚಿವರಾದ ಪ್ರೊ.ಯು.ಜೆ.ಉಜ್ವಲ್‌, ಪ್ರೊ.ಪ್ರಸಾದ್‌ ಬಿ.ರಾಂಪೂರೆ , ವಿಟಿಯು ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು, ಕಾರ್ಯಕಾರಿ ಸಮಿತಿಯ ಸದಸ್ಯರು ಭಾಗವಹಿಸಿದ್ದರು.

 

ಶೀಘ್ರ 2 ಸಾವಿರ ಹುದ್ದೆಗಳ ಭರ್ತಿ: ಸಚಿವ ಸುಧಾಕರ್‌

ಬಾಕ್ಸ್‌

“ರಾಜ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳು ಸೇರಿ ಅಂದಾಜು 2 ಸಾವಿರ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡುವುದಾಗಿ” ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಹೇಳಿದರು.

ವಿಟಿಯು ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಸರಕಾರಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ – 186, ಪಾಲಿಟೆಕ್ನಿಕ್‌ನಲ್ಲಿ 941, ಕಾಲೇಜು ಶಿಕ್ಷಣ ಇಲಾಖೆಯಲ್ಲಿ 826, ಯುವಿಸಿಇನಲ್ಲಿ 79 ಸೇರಿದಂತೆ ಅಂದಾಜು 2 ಸಾವಿರ ಹುದ್ದೆಗಳ ಭರ್ತಿ ಮಾಡಲಾಗುವುದು. ಆ ಮೂಲಕ ಉನ್ನತ ಶಿಕ್ಷಣ ಇಲಾಖೆಯಲ್ಲಿರುವ ನೌಕರರ ಕೊರತೆಯನ್ನು ನೀಗಿಸಲಾಗುವುದು ಎಂದರು. ವಿಟಿಯು ಉತ್ತಮ ಕೆಲಸಗಳನ್ನು ಮಾಡುತ್ತಿದೆ. ಇದಕ್ಕಾಗಿ ಏಷ್ಯನ್‌ ಡೆವಲೆಪ್‌ಮೆಂಟ್‌ ಬ್ಯಾಂಕ್‌ನಿಂದಾಗಿ ಸೆಂಟರ್‌ ಆಪ್‌ ಎಕ್ಸಲೆನ್ಸ್‌ ಆರಂಭಿಸುತ್ತಿದ್ದೇವೆ. ಇಂದು ಪದವಿ ಪಡೆದ ವಿದ್ಯಾರ್ಥಿಗಳ ಜೀವನ ಉಜ್ವಲವಾಗಿರಲಿ” ಎಂದು ಶುಭ ಹಾರೈಸಿದರು.

ಕುಲಪತಿ ಕೋಟ್…

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ತಂತ್ರಜ್ಞಾನ ಅಳವಡಿಕೊಳ್ಳುವಲ್ಲಿ ಮುಂದಿದೆ. ಇದಕ್ಕಾಗಿ ಹಲವು ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಂಡಿದೆ. 83 ಸಾವಿರ ವಿದ್ಯಾರ್ಥಿಗಳು ಇಂಟರ್ನ್ ಶಿಪ್ ತೆಗೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಪ್ರಾಜೆಕ್ಟ್ ಗಳ ಪ್ರದರ್ಶನಕ್ಕಾಗಿ ನಾವು ಈ ತಿಂಗಳು ಓಪನ್ ಡೇ ಮಾಡುತ್ತಿದ್ದೇವೆ. ಉತ್ತಮ ಪ್ಲೇಸ್ ಮೆಂಟ್ ಅನ್ನು ವಿಟಿಯು ನೀಡುತ್ತಿದೆ. 4 ಸಾವಿರ ಇಂಡಸ್ಟ್ರಿ ಜತೆಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ. ವಿದ್ಯಾರ್ಥಿಗಳ ಸರ್ವೋತಮುಖ ಬೆಳವಣಿಗೆಗೆ ಪೂರಕವಾದ ವಾತಾವರಣ ಸೃಷ್ಟಿ ಮಾಡುವುದು ನಮ್ಮ ಉದ್ದೇಶವಾಗಿದೆ.

– ಪ್ರೊ.ಎಸ್. ವಿದ್ಯಾಶಂಕರ್, ಕುಲಪತಿಗಳು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ

 

ವಿದ್ಯಾರ್ಥಿಗಳ ಕೋಟ್‌..

ನಾನು ಚಿನ್ನದ ಪದಕವನ್ನು ನೀರಿಕ್ಷೆ ಮಾಡಿದ್ದೆ. ಏಕೆಂದರೆ, ನಾನು 2023ರಲ್ಲಿ ಪದವಿಯಲ್ಲಿ ವಿಟಿಯು ಚಿನ್ನದ ಪದಕ ಪ್ರದಾನ ಮಾಡಿತ್ತು. ಇದೀಗ ಅದೇ ವಿಟಿಯುನಿಂದ ಎರಡನೇ ಬಾರಿಗೆ ಚಿನ್ನದ ಪದಕ ಪಡೆಯಲು ನಾನು ಉತ್ಸುಕಳಾಗಿದ್ದೇನೆ. ನಾನು ಮೂಲತಃ ಭದ್ರಾವತಿಯವಳು. ತಂದೆ ಕೃಷಿಕರು. ತಾಯಿ ಫಾರ್ಮಸಿ ನಡೆಸುತ್ತಾರೆ. ನನಗೆ ಟಿಸಿಎಸ್‌ ನಲ್ಲಿ ಉದ್ಯೋಗ ಸಿಕ್ಕಿದೆ. ಪ್ರಮಾಣ ಪತ್ರಕ್ಕಾಗಿ ಕಾಯುತ್ತಿದ್ದೆ. ಇದೀಗ ಸಕ್ಕಿದೆ. ತಕ್ಷಣ ನಾನು ಕೆಲಸಕ್ಕೆ ಸೇರಿಕೊಳ್ಳುತ್ತೇನೆ.

ಪಾರ್ವತಿ ಸಲೇರಾ, 4 ಚಿನ್ನದ ಪದಕ, ಎಂಬಿಎ, ಜವಹರಲಾಲ್‌ ನೆಹರು ನ್ಯಾಷನಲ್‌ ಕಾಲೇಜು, ಶಿವಮೊಗ್ಗ,

 

ಪಿಎಚ್‌.ಡಿ ಮಾಡಬೇಕೆಂದುಕೊಂಡಿದ್ದೇನೆ. ನಮ್ಮ ಊರು ಮೂಲತಃ ಮಾಗಡಿಯ ತಾವರೆಕರೆ. ತಂದೆ ಕೃಷಿಕರು. ತಾಯಿ ಗೃಹಿಣಿ. ನಾನು ಪದವಿಯಲ್ಲೂ ಮೊದಲ ರ್ಯಾಂಕ್‌ ಗಳಿಸಿದ್ದೆ. ಇಲ್ಲಿ ಹೆಚ್ಚಿನ ಅಂಕ ಬಂದಿದ್ದು, ಚಿನ್ನದ ಪದಕ ಸಿಕ್ಕಿರುವುದು ಖುಷಿ ತಂದಿದೆ. ಸಂಶೋಧನೆಯಲ್ಲಿ ಹೆಚ್ಚಿನ ಆಸಕ್ತಿ ಇದೆ. ಹೀಗಾಗಿ ಇದೇ ಕ್ಷೇತ್ರದಲ್ಲಿ ಮುಂದುವರಿಸುವ ಆಸಕ್ತಿ ಇದೆ.

ಎಚ್‌.ಸಿ. ಕಾವ್ಯ, 3 ಚಿನ್ನದ ಪದಕ, ಎಂಸಿಎ, ಆರ್‌ಎನ್‌ಎಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಬೆಂಗಳೂರು

 

ವಿಟಿಯು ಘಟಕ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ವಿಟಿಯಿಂದ ಚಿನ್ನದ ಪದಕ ಪಡೆಯುವುದಕ್ಕೆ ನನಗೆ ಖುಷಿಯಾಗುತ್ತಿದೆ. ಸದ್ಯ ನಾನು ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದೇನೆ. ನಮ್ಮದು ಮೂಲತಃ ದಾವಣಗೆರೆ. ಪಾಲಕರಿಬ್ಬರೂ ಸರಕಾರಿ ನೌಕರಿಯಲ್ಲಿರುವುದರಿಂದ ನನಗೂ ಸರಕಾರಿ ಉದ್ಯೋಗ ಪಡೆಯಬೇಕೆಂಬ ಆಸೆ ಇದೆ. ಇದಕ್ಕಾಗಿ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದೇನೆ.

ಬಿ.ಎಸ್.ಸಂಚಿತಾ, 3 ಚಿನ್ನದ ಪದಕ, ಎಂ.ಟೆಕ್‌, ಯುಬಿಡಿಟಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌, ದಾವಣಗೆರೆ,

 

ನಾನು ರ್ಯಾಂಕ್‌ ನಿರೀಕ್ಷೆ ಮಾಡಿದ್ದೆ. ಆದರೆ, ಚಿನ್ನದ ಪದಕ ಸಿಗುವ ಬಗ್ಗೆ ಆಲೋಚನೆ ಇರಲಿಲ್ಲ. ಚಿನ್ನದ ಪದಕ ಸಿಕ್ಕಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ. ನನ್ನ ಊರು ಕುಣಿಗಲ್‌. ತಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಯಿ ಗೃಹಿಣಿ. ಒಳ್ಳೆಯ ಕಂಪನಿಯಲ್ಲಿ ಉದ್ಯೋಗ ಪಡೆದುಕೊಂಡು ಬದುಕು ರೂಪಿಸಿಕೊಳ್ಳಬೇಕೆಂದುಕೊಂಡಿದ್ದೇನೆ.

ವಿ.ಯೋಗೇಶ್‌ ಗೌಡ, 2 ಚಿನ್ನದ ಪದಕ, ಎಂ.ಟೆಕ್‌, ಬೆಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಬೆಂಗಳೂರು.

 

ನಾನು ಪದವಿ ಮುಗಿದ ಬಳಿಕ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ ಆನಂತರ ಎಂ.ಟೆಕ್‌ ಮಾಡಿದೆ. ನಾನು ಮೂಲತಃ ಬಳ್ಳಾರಿ ಜಿಲ್ಲೆಯವನು. ಬೇರೆ ಕೆಲಸ ಹುಡುಕುತಿದ್ದೇನೆ. ತಂದೆ ಪಾಲಿಟೆಕ್ನಿಕ್‌ ಕಾಲೇಜಿನ ಪ್ರಾಧ್ಯಾಪಕರಾಗಿದ್ದರಿಂದ ನಾನು ಅವರಂತೆ ಎಂಜಿನಿಯರಿಂಗ್‌ ಕೋರ್ಸ್‌ ಆಯ್ಕೆ ಮಾಡಿಕೊಂಡೆ.

 

ಬಿ.ರಾಹುಲ್‌ ಡೇವಿಡ್‌, ಎಂ.ಟೆಕ್‌, 2 ಚಿನ್ನದ ಪದಕ, ರಾವ್‌ ಬಹದ್ದೂರ್‌ ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್‌ ಕಾಲೇಜು, ಬಳ್ಳಾರಿ

error: Content is protected !!