18/06/2026
IMG-20260613-WA0037

ಬೆಳಗಾವಿ-13: ಪರಿಸರ ಸಂರಕ್ಷಣೆ, ಆರೋಗ್ಯಕರ ಜೀವನಶೈಲಿ ಮತ್ತು ಸೈಕಲ್ ಬಳಕೆಯ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಶನಿವಾರ ಬೆಳಗಾವಿಯಲ್ಲಿ ಬೃಹತ್ ಸೈಕಲ್ ರ‍್ಯಾಲಿಯನ್ನು ಆಯೋಜಿಸಲಾಯಿತು.
‘ಅಸ್ಮಿತಾ ಸೈಕಲ್ ಲೀಗ್’ ವತಿಯಿಂದ ಹಮ್ಮಿಕೊಳ್ಳಲಾದ ಈ ರ‍್ಯಾಲಿಗೆ ಸೈಕಲ್ ಪ್ರೇಮಿಗಳಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ನೂರಾರು ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡರು.
ವಿಶ್ವ ಬೈಸಿಕಲ್ ದಿನಾಚರಣೆಯ ಅಂಗವಾಗಿ ನಡೆದ ಈ ಜಾಗೃತಿ ರ‍್ಯಾಲಿಯು ನಗರದ ಹನುಮಾನ್ ನಗರ ಸರ್ಕಲ್‌ನಿಂದ ಆರಂಭವಾಗಿ ಕುವೆಂಪು ನಗರದವರೆಗೆ ಸಾಗಿತು. ರ‍್ಯಾಲಿಗೆ ಅನಿಲ್ ಪೋತದಾರ್, ಮಾಜಿ ವಿಧಾನ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ್ ಹಾಗೂ ಡಿಡಿಪಿಐ ಲೀಲಾವತಿ ಹಿರೇಮಠ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವಿವೇಕರಾವ್ ಪಾಟೀಲ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಯೋಗ ದಿನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯಗೊಳಿಸಿದಂತೆ, ವಿಶ್ವ ಬೈಸಿಕಲ್ ದಿನಾಚರಣೆಯೂ ಜನರಲ್ಲಿ ಆರೋಗ್ಯ ಹಾಗೂ ಪರಿಸರ ಜಾಗೃತಿಯನ್ನು ಮೂಡಿಸುವ ವೇದಿಕೆಯಾಗುತ್ತಿದೆ ಎಂದು ಹೇಳಿದರು. ಸುಮಾರು 300ಕ್ಕೂ ಹೆಚ್ಚು ಸೈಕಲ್ ಸವಾರರು ಭಾಗವಹಿಸಿದ್ದರೆ, ಅವರಲ್ಲಿ 100ಕ್ಕೂ ಹೆಚ್ಚು ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡಿರುವುದು ವಿಶೇಷವಾಗಿದೆ ಎಂದು ತಿಳಿಸಿದರು.
ಈ ವಿಶೇಷ ದಿನದ ಅಂಗವಾಗಿ ಕೋಕೋ ಬ್ಯಾಂಡ್ ಟೀಂ 24 ಕನ್ಸೂಮರ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಸೈಕಲ್ ಸವಾರರಿಗೆ ಆರೋಗ್ಯಕರ ಪಾನೀಯವನ್ನು ಪ್ರಾಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಮಾರು 500ಕ್ಕೂ ಹೆಚ್ಚು ಜನರಿಗೆ ಹೆಲ್ತ್ ಡ್ರಿಂಕ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು, ಸ್ಥಳೀಯ ಸೈಕಲ್ ಸವಾರರು ಹಾಗೂ ಕ್ರೀಡಾಪಟುಗಳು ಒಲಿಂಪಿಕ್ಸ್ ಸೇರಿದಂತೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವಂತಾಗಲು ಅಗತ್ಯ ಪ್ರೋತ್ಸಾಹ ಹಾಗೂ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಕುಂದಾನಗರಿಯ ರಸ್ತೆಗಳಲ್ಲಿ ಸೈಕಲ್ ಸವಾರರ ದಂಡು ಆರೋಗ್ಯ, ಪರಿಸರ ಸಂರಕ್ಷಣೆ ಮತ್ತು ಫಿಟ್ನೆಸ್ ಕುರಿತು ಜಾಗೃತಿ ಮೂಡಿಸುತ್ತಾ ಸಾಗಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

Leave a Reply

Your email address will not be published. Required fields are marked *

error: Content is protected !!