ಬೆಳಗಾವಿ-16:ಎರಡು ಕೋಟಿ ರೂಪಾಯಿ ವಿಮೆ ಹಣಕ್ಕಾಗಿ ಪ್ರಿಯಕರನ ಜೊತೆ ಸೇರಿ ಪತ್ನಿಯೇ ಗಂಡನ ಕೊಲೆ ಮಾಡಿಸಿದ ಪ್ರಕರಣಕ್ಕೆ ಇದೀಗ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಾಜಿ ಸೈನಿಕ ಸಂದೀಪ್ ಮಂಜರಗಿ ಕೊಲೆ ಪ್ರಕರಣದಲ್ಲಿ ಎಫ್‌ಎಸ್‌ಎಲ್ ಅಧಿಕಾರಿಗಳೇ ಭಾಗಿಯಾಗಿರುವುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯ ಘಡಗೋರಿ ಗ್ರಾಮದ ಮಾಜಿ ಸೈನಿಕ ಸಂದೀಪ್ ಮಂಜರಗಿ ಸಾವನ್ನು ಆರಂಭದಲ್ಲಿ ಅಪಘಾತವೆಂದು ಬಿಂಬಿಸಲಾಗಿತ್ತು. ಆದರೆ ತನಿಖೆ ವೇಳೆ ಇದು ಪೂರ್ವನಿಯೋಜಿತ ಕೊಲೆ ಎಂಬುದು ಬೆಳಕಿಗೆ ಬಂದಿದೆ.
ಪ್ರಕರಣದಲ್ಲಿ ಮರಣೋತ್ತರ ಪರೀಕ್ಷೆ ಹಾಗೂ ಎಫ್‌ಎಸ್‌ಎಲ್ ವರದಿಯನ್ನು ತಿರುಚಿ ಕೇಸ್ ದಿಕ್ಕು ತಪ್ಪಿಸಲು ಯತ್ನಿಸಿದ್ದ ಆರೋಪ ಕೇಳಿಬಂದಿದ್ದು, ರಾಜ್ಯದಲ್ಲೇ ಮೊದಲ ಬಾರಿಗೆ ಎಫ್‌ಎಸ್‌ಎಲ್ ಅಧಿಕಾರಿಗಳು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ.
ಬೆಳಗಾವಿಯ ಎಫ್‌ಎಸ್‌ಎಲ್ ಕಚೇರಿಯ ಸೀನಿಯರ್ ಸೈಂಟಿಫಿಕ್ ಆಫೀಸರ್ ಪಿ.ಎನ್. ನಾಗರಾಜ್, ಲ್ಯಾಬ್ ಅಸಿಸ್ಟೆಂಟ್ ಚನ್ನಯ್ಯ ಹಾಗೂ ಗುಮಾಸ್ತ ಅಪ್ಪಾಸಾಬ್ ನಾಯಿಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಫ್‌ಡಿಎ ಅಶೋಕ ಗುಜಾನಾಳ್‌ನನ್ನೂ ಬಂಧಿಸಲಾಗಿದೆ.
ಮೂರು ಲಕ್ಷ ರೂಪಾಯಿ ಹಣ ಪಡೆದು ವರದಿ ತಿರುಚಿದ ಆರೋಪ ಕೇಳಿಬಂದಿದೆ. ಆರೋಪಿ ಸುಮಾಳಿಂದ ಹಣ ಹಂಚಿಕೆ ನಡೆದಿದ್ದು, ಎಫ್‌ಡಿಎ ಅಶೋಕ ಮೂಲಕ ಎಫ್‌ಎಸ್‌ಎಲ್ ಅಧಿಕಾರಿಗಳ ಸಂಪರ್ಕ ಸಾಧಿಸಲಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಪ್ರಕರಣದಲ್ಲಿ ಇದುವರೆಗೆ ಪತ್ನಿ ಸುಮಾ, ಆಕೆಯ ಪ್ರಿಯಕರ ಪುಂಡಲೀಕ, ಸ್ನೇಹಿತ ಸಚಿನ್ ಸೇರಿದಂತೆ ಒಟ್ಟು ಒಂಬತ್ತು ಆರೋಪಿಗಳನ್ನು ಬಂಧಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಕುರಿತು ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದ ಎಸ್ಪಿ ಸಾಹೇಬರು ಕೆ.ರರಾಮರಾಜನ್ , ಎರಡು ಕೋಟಿ ರೂಪಾಯಿ ವಿಮೆ ಹಣಕ್ಕಾಗಿ ಗಂಡನನ್ನೇ ಸಂಚು ರೂಪಿಸಿ ಕೊಲೆ ಮಾಡಿದ ಬೆಚ್ಚಿಬೀಳಿಸುವ ಪ್ರಕರಣವನ್ನು ಬೆಳಗಾವಿ ಪೊಲೀಸರು ಭೇದಿಸಿ ಹೆಂಡತಿ ಸೇರಿ 9 ಜನರನ್ನು ಬಂಧಿಸಲಾಗಿದೆ. ಕಳೆದ ಮಾರ್ಚ್ 13ರಂದು ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂದೀಪ್ ಮಂಜರಗಿ ಬೈಕ್ ಸ್ಕೀಡ್ ಆಗಿ ಬಿದ್ದಿದ್ದ. ಬಳಿಕ ಆತನನ್ನು ಹುಕ್ಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ನಂತರ ಘಟಪ್ರಭಾ ಜೆಜಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಮಾರ್ಚ್ 15ರಂದು ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಘೋಷಿಸಲಾಗಿತ್ತು.
ಆದರೆ ಯಾವುದೇ ಗಂಭೀರ ಗಾಯಗಳಿಲ್ಲದ ವ್ಯಕ್ತಿ ಹಾರ್ಟ್ ಅಟ್ಯಾಕ್‌ನಿಂದ ಮೃತಪಟ್ಟಿದ್ದೇ ಅನುಮಾನಕ್ಕೆ ಕಾರಣವಾಗಿತ್ತು. ಮರಣೋತ್ತರ ಪರೀಕ್ಷೆಗಾಗಿ ಬಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಎಫ್‌ಎಸ್‌ಎಲ್ ವರದಿಯಲ್ಲೂ ವಿಷಪ್ರಯೋಗ ನಡೆದಿಲ್ಲ ಎಂದರಿ.
ಈ ನಡುವೆ ಮೃತನ ಪತ್ನಿ ಸುಮಾ ಪ್ರಿಯಕರ ಪುಂಡಲೀಕ ಡೊಂಬರ್ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಸ್ಟೇಟಸ್ ಪ್ರಕರಣಕ್ಕೆ ಹೊಸ ತಿರುವು ನೀಡಿತು. ಪೊಲೀಸರ ವಿಚಾರಣೆಯಲ್ಲಿ ಸಂಪೂರ್ಣ ಸಂಚು ಬಯಲಾಗಿತ್ತು.
ಸುಮಾ ಹಾಗೂ ಪುಂಡಲೀಕ ನಡುವೆ ಕಳೆದ ಎರಡೂವರೆ ವರ್ಷಗಳಿಂದ ಅಕ್ರಮ ಸಂಬಂಧ ಇತ್ತು. ಇದೇ ವೇಳೆ ಸಂದೀಪ್ ಹೆಸರಲ್ಲಿ ಮೂರು ಕಂಪನಿಗಳಿಂದ ಸುಮಾರು ಎರಡು ಕೋಟಿ ರೂಪಾಯಿ ವಿಮೆ ಮಾಡಿಸಲಾಗಿತ್ತು. ವಿಮೆ ಹಣಕ್ಕಾಗಿ ಕೊಲೆ ಪ್ಲ್ಯಾನ್ ರೂಪಿಸಲಾಗಿತ್ತು ಎಂದು ಎಸ್‌ಪಿ ತಿಳಿಸಿದ್ದಾರೆ.
ಜೆಜಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ರಾಹುಲ್ ಜೋಗಿ ಸಹಾಯದಿಂದ ಸಂದೀಪ್‌ರನ್ನು ಸ್ಪೆಷಲ್ ರೂಮ್‌ನಲ್ಲಿ ದಾಖಲಿಸಿ, ಸಲೈನ್ ಬಾಟಲ್‌ಗೆ ವಿಷ ಮಿಶ್ರಣ ಮಾಡಿ ಕೊಲೆ ಮಾಡಲಾಗಿದೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದರು.
ಪ್ರಕರಣ ಮುಚ್ಚಿಹಾಕಲು ಎಫ್‌ಎಸ್‌ಎಲ್ ವರದಿ ಬದಲಾವಣೆ ಮಾಡಲಾಗಿತ್ತು. ಈ ಕೃತ್ಯಕ್ಕೆ ಆರ್‌ಎಂಪಿ ವೈದ್ಯ ಬಸವರಾಜ್ ಭಸ್ಮೆ, ಕಮಿಷನರ್ ಕಚೇರಿಯ ಎಫ್‌ಡಿಎ ಅಶೋಕ ಗುಜನಾಳ, ಎಫ್‌ಎಸ್‌ಎಲ್ ಸಿಬ್ಬಂದಿ ಅಪ್ಪಾಸಾಬ್ ನಾಯಿಕ್, ಲ್ಯಾಬ್ ಅಸಿಸ್ಟೆಂಟ್ ಚನ್ನಯ್ಯ ಹಾಗೂ ಸೀನಿಯರ್ ಸೈಂಟಿಫಿಕ್ ಆಫೀಸರ್ ಪಿ.ಎನ್. ನಾಗರಾಜ್ ಸಹಕರಿಸಿದ್ದರೆಂದರು.
ಹಣ ಪಡೆದು ಸುಳ್ಳು ವರದಿ ನೀಡಿದ ಆರೋಪದಲ್ಲಿ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದುವರೆಗೆ ಒಟ್ಟು 9 ಮಂದಿಯನ್ನು ಬಂಧಿಸಲಾಗಿದೆ ಹೇಳಿದರು.
