17/06/2026
IMG-20260616-WA0014

ಬೆಳಗಾವಿ-16: ಉತ್ತರ ವಿಧಾನಸಭಾ ಕ್ಷೇತ್ರದ ಆಟೋನಗರ ಹಾಗೂ ರಾಮತೀರ್ಥನಗರ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸಿ ಕೈಗಾರಿಕಾ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ನೀಡುವಂತೆ ಬಿಜೆಪಿ ಮುಖಂಡ ಕಿರಣ ಜಾಧವ್ ಅವರು ಕೇಂದ್ರ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ರಾಜ್ಯ ಸಚಿವ ಭೂಪತಿ ರಾಜು ಶ್ರೀನಿವಾಸ ವರ್ಮಾ ಅವರಿಗೆ ಮನವಿ ಮಾಡಿದರು.
ಮಂಗಳವಾರ ನಗರಕ್ಕೆ ಭೇಟಿ ನೀಡಿದ್ದ ಸಚಿವರನ್ನು ಭೇಟಿಯಾದ ಅವರು, ಉತ್ತರ ಕ್ಷೇತ್ರದ ಆಟೋನಗರ ಮತ್ತು ರಾಮತೀರ್ಥನಗರ ಕೈಗಾರಿಕಾ ಪ್ರದೇಶಗಳಲ್ಲಿ ನೂರಾರು ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದ್ದು, ಸಾವಿರಾರು ಜನರಿಗೆ ಉದ್ಯೋಗಾವಕಾಶ ಕಲ್ಪಿಸುತ್ತಿವೆ. ಆದರೆ, ಕೈಗಾರಿಕೆಗಳ ಸಂಖ್ಯೆಗೆ ಅನುಗುಣವಾಗಿ ಮೂಲಸೌಕರ್ಯಗಳ ಅಭಿವೃದ್ಧಿಯಾಗದಿರುವುದರಿಂದ ಉದ್ಯಮಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಸಚಿವರ ಗಮನಕ್ಕೆ ತಂದರು.
ಪ್ರಮುಖವಾಗಿ ಕೈಗಾರಿಕಾ ಪ್ರದೇಶಗಳಲ್ಲಿನ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು, ಸಮರ್ಪಕ ಒಳಚರಂಡಿ ವ್ಯವಸ್ಥೆ ನಿರ್ಮಿಸುವುದು, ನಿರಂತರ ವಿದ್ಯುತ್ ಪೂರೈಕೆ, ಕುಡಿಯುವ ನೀರಿನ ಸೌಲಭ್ಯ, ಬೀದಿ ದೀಪಗಳ ವ್ಯವಸ್ಥೆ, ಮಳೆ ನೀರು ಹರಿದು ಹೋಗಲು ಅಗತ್ಯ ವ್ಯವಸ್ಥೆ ಹಾಗೂ ಕೈಗಾರಿಕೆಗಳಿಗೆ ಅಗತ್ಯವಾದ ಇತರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದಿಂದ ವಿಶೇಷ ಯೋಜನೆ ಮತ್ತು ಅನುದಾನ ಒದಗಿಸುವಂತೆ ಮನವಿ ಮಾಡಿದರು.
ಬೆಳಗಾವಿ ದೇಶದ ಪ್ರಮುಖ ಕೈಗಾರಿಕಾ ನಗರಗಳಲ್ಲಿ ಒಂದಾಗಿದ್ದು, ಇಲ್ಲಿನ ಫೌಂಡ್ರಿ, ಎಂಜಿನಿಯರಿಂಗ್, ಆಟೋಮೊಬೈಲ್ ಮತ್ತು ಉತ್ಪಾದನಾ ಕ್ಷೇತ್ರಗಳು ದೇಶದ ಆರ್ಥಿಕ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುತ್ತಿವೆ. ಆದ್ದರಿಂದ ಆಟೋನಗರ ಮತ್ತು ರಾಮತೀರ್ಥನಗರ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದರೆ ಹೊಸ ಹೂಡಿಕೆಗಳು ಬರಲಿದ್ದು, ಸ್ಥಳೀಯ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಕಿರಣ ಜಾಧವ್ ಅಭಿಪ್ರಾಯಪಟ್ಟರು.
ಮನವಿಗೆ ಸ್ಪಂದಿಸಿದ ಸಚಿವ ಭೂಪತಿ ರಾಜು ಶ್ರೀನಿವಾಸ ವರ್ಮಾ ಅವರು, ಕೈಗಾರಿಕಾ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಿತ ಇಲಾಖೆಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಕ್ತಿಯಾರ್ ಪಠಾಣ ಸೇರಿದಂತೆ ಸ್ಥಳೀಯ ಕೈಗಾರಿಕೋದ್ಯಮಿಗಳು, ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!