13/06/2026
IMG-20260613-WA0004

ಬೆಳಗಾವಿ-12: ಮರಾಠಿ ಭಾಷಿಕರು ಪಾಕಿಸ್ತಾನದಲ್ಲಿಲ್ಲ, ಭಾರತದಲ್ಲೇ ಇದ್ದಾರೆ. ಬೆಳಗಾವಿಯಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕರು ಪರಸ್ಪರ ಸೌಹಾರ್ದತೆಯಿಂದ ಬದುಕುತ್ತಿದ್ದು, ನಗರದ ಅಭಿವೃದ್ಧಿಯ ಹಿತದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಿನಿಂದ ಚಿಂತನೆ ನಡೆಸಬೇಕಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದರು.
ಶನಿವಾರ ನಗರದಲ್ಲಿ ನಡೆದ ಸುದ್ಧಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದು, ಗಡಿ ವಿವಾದದ ಕುರಿತಾಗಿ ಮಹಾಜನ್ ವರದಿ ಅಂತಿಮ ಎಂಬ ಗೊತ್ತುವಳಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಬೆಳಗಾವಿಯಲ್ಲಿ ಕನ್ನಡ ಮತ್ತು ಮರಾಠಿ ಬಾಂಧವರು ಪರಸ್ಪರ ಅಣ್ಣ-ತಮ್ಮಂದಿರಂತೆ ಬದುಕುತ್ತಿದ್ದಾರೆ.
ಈ ಸೌಹಾರ್ದತೆಯ ವಾತಾವರಣದಿಂದಲೇ ಬೆಳಗಾವಿಯ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಚಿಂತನೆ ಮಾಡಬೇಕಿದೆ. ಬೆಳಗಾವಿ ಕರ್ನಾಟಕದ್ದು ಎಂಬ ವಿಚಾರದಲ್ಲಿ ಯಾವುದೇ ಪ್ರಶ್ನೆಯೇ ಇಲ್ಲ. ರಾಜ್ಯ ಸರ್ಕಾರದ ವಿಧಾನಮಂಡಲ ಅಧಿವೇಶನವೇ ಬೆಳಗಾವಿಯಲ್ಲಿ ನಡೆಯುತ್ತದೆ ಎಂದು ಹೇಳಿದರು.
ಮರಾಠಿ ಭಾಷಿಕರು ಭಾರತ ದೇಶದ ಪ್ರಜೆಗಳಾಗಿದ್ದು, ಅವರನ್ನು ಬೇರ್ಪಡಿಸುವ ಮನೋಭಾವ ಸಲ್ಲದು ಎಂದರು. ಮರಾಠಿ ಭಾಷಿಕರು ಭಾರತದಲ್ಲಿಯೇ ಇದ್ದಾರೆ, ಪಾಕಿಸ್ತಾನದಲ್ಲಿಲ್ಲ. ಭಾಷೆಯ ಆಧಾರದ ಮೇಲೆ ಭಿನ್ನಾಭಿಪ್ರಾಯ ಬೆಳೆಸುವ ಬದಲು ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದು ಅಭಿಪ್ರಾಯಪಟ್ಟರು.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರ ಠರಾವು ಅಂಗೀಕಾರಕ್ಕೆ ಸಂಬಂಧಿಸಿದಂತೆ ಮಹಾಪೌರರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು. ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬೆಳಗಾವಿಯ ಸಮಗ್ರ ಅಭಿವೃದ್ಧಿ ಹಾಗೂ ಭಾಷಾ ಸೌಹಾರ್ದತೆಯೇ ನಗರದ ಪ್ರಗತಿಗೆ ಮುಖ್ಯ ಅಡಿಪಾಯವಾಗಿದ್ದು, ಎಲ್ಲ ಸಮುದಾಯದವರು ಸಹಕಾರದಿಂದ ಮುನ್ನಡೆಯಬೇಕು ಎಂದು ಕರೆ ನೀಡಿದರು.

Leave a Reply

Your email address will not be published. Required fields are marked *

error: Content is protected !!