21/06/2026
IMG-20260619-WA0017

ಬೆಳಗಾವಿ-20: ಕರ್ನಾಟಕ ಸರ್ಕಾರ, ಕನ್ನಡ ಭಾಷೆ ಹಾಗೂ ರಾಜ್ಯದ ಅಧಿಕಾರಿಗಳ ವಿರುದ್ಧ ನಿರಂತರವಾಗಿ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುತ್ತ ಭಾಷಾ ಸೌಹಾರ್ದತೆಯನ್ನು ಹಾಳು ಮಾಡಲು ಯತ್ನಿಸುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮತ್ತು ಅದರ ನಾಯಕರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿವಿಧ ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ.
ಶುಕ್ರವಾರ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬೆಳಗಾವಿ ನಗರದ ಪೊಲೀಸ್ ಆಯುಕ್ತರ ಕಛೇರಿಗೆ ತೆರಳಿ, ಜೂನ್ 22ರಂದು ಬೆಳಗಾವಿಯಲ್ಲಿ ಎಂಇಎಸ್ ವತಿಯಿಂದ ಮೆರವಣಿಗೆ ನಡೆಸುವ ಸಿದ್ಧತೆ ನಡೆಯುತ್ತಿರುವ ಮಾಹಿತಿ ಲಭ್ಯವಾಗಿದ್ದು, ಯಾವುದೇ ಕಾರಣಕ್ಕೂ ಈ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಸಂಘಟನೆಗಳು ಪೊಲೀಸ್ ಆಯುಕ್ತ ಭೂಷನ್ ಬೊರಸೆ ಗೋಲಾಬರಾವ್ ಅವರಿಗೆ ಮನವಿ ಸಲ್ಲಿಸಿದರು.
ಇದೇ ವೇಳೆ ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿದ ಗಡಿನಾಡು ಕನ್ನಡಿಗ ರಾಜ್ಯಾಧ್ಯಕ್ಷ ಬಲರಾಮ್ ಮಾಸೇನಟ್ಟಿ ಅವರು, ಎಂಇಎಸ್ ಸಂಘಟನೆ ರಾಜ್ಯದ ವಿರುದ್ಧ ನಿರಂತರವಾಗಿ ಪ್ರಚೋದನಕಾರಿ ಚಟುವಟಿಕೆಗಳಲ್ಲಿ ತೊಡಗಿದ್ದು, ಭಾಷಾ ಸಾಮರಸ್ಯಕ್ಕೆ ಧಕ್ಕೆ ತರುವ ಪ್ರಯತ್ನ ನಡೆಸುತ್ತಿದೆ. ಇಂತಹ ಸಂಘಟನೆಗಳೊಂದಿಗೆ ಸರ್ಕಾರ ಅಥವಾ ಅಧಿಕಾರಿಗಳು ಯಾವುದೇ ರೀತಿಯ ಮಾತುಕತೆ ನಡೆಸಬಾರದು ಹಾಗೂ ಅವರ ಬೇಡಿಕೆಗಳ ಕುರಿತು ಚರ್ಚೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಮಹಾರಾಷ್ಟ್ರಕ್ಕೆ ಹೋಲಿಸಿದರೆ ಕರ್ನಾಟಕದ ಗಡಿ ಭಾಗದಲ್ಲಿರುವ ಭಾಷಾ ಅಲ್ಪಸಂಖ್ಯಾತರಿಗೆ ರಾಜ್ಯ ಸರ್ಕಾರ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿದೆ. ಆದರೆ ಮಹಾರಾಷ್ಟ್ರದ ಅಕ್ಕಲಕೋಟೆ, ದಕ್ಷಿಣ ಸೊಲ್ಲಾಪುರ ಹಾಗೂ ಸಾಂಗ್ಲಿ ಜಿಲ್ಲೆಯ ಹಲವು ಕನ್ನಡಭಾಷಿಕ ಪ್ರದೇಶಗಳಲ್ಲಿ ಕನ್ನಡ ಶಾಲೆಗಳು ಮುಚ್ಚಲ್ಪಡುತ್ತಿದ್ದು, ಕನ್ನಡ ನಾಮಫಲಕಗಳೂ ಕಾಣಿಸುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಎಂಇಎಸ್ ಕರ್ನಾಟಕ ಸರ್ಕಾರದ ವಿರುದ್ಧ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿರುವ ಕನ್ನಡಪರ ಸಂಘಟನೆಗಳು, ಜೂನ್ 22ರ ಮೆರವಣಿಗೆಗೆ ಜಿಲ್ಲಾಡಳಿತ ಯಾವುದೇ ರೀತಿಯ ಅನುಮತಿ ನೀಡಬಾರದು ಒಂದು ವೇಳೆ ಮೆರವೆಣಿಗೆ ನಡೆಸಿದ್ದಲ್ಲಿ ಮೇರೆವಣಿಗೆಯಲ್ಲಿ ಕನ್ನಡ ಪರ ಸಂಘಟನೆಯ ಕಾರ್ಯಕತರ್ತರು ಮಧ್ಯ ಪ್ರವೇಶಿಸಿ ಎಂಇಎಸ್ ಪುಂಡರಿಗೆ ಬಳಿಯುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ಬಲರಾಮ್ ಮಾಸೇನಟ್ಟಿ, ವಾಜೀದ ಹಿರೇಕುಂಡಿ, ಈಶ್ವರಗೌಡ ಪಾಟೀಲ, ಸಿದ್ದಲಿಂಗಪ್ಪ ಸುಣಕುಪ್ಪಿ, ರಾಜು ಕೋಲಾ, ಮಲ್ಲಪ್ಪಾ ಗುಡೇನಟ್ಟಿ, ಮಾಹಾದೇವ ತಳವಾರ, ಮಹೇಶ ಶಿಗಿಹಳ್ಳಿ, ಸೇರಿದಂತೆ ಹಲವು ಕನ್ನಡಪರ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!