ಬೆಂಗಳೂರು-16: ರಾಜ್ಯ ಸರ್ಕಾರದಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿರಯರಿಗೆ ಗ್ರಾಚ್ಯುಟಿ ಸವಲತ್ತು ಘೋಷಣೆ ಮಾಡಲಾಗಿದೆ.
ಶುಕ್ರವಾರ ಬಜೆಟ್ ಮಂಡಿಸಿ ಮಾತನಾಡಿದಂತ ಸಿಎಂ ಸಿದ್ಧರಾಮಯ್ಯ ಅವರು, ರಾಜ್ಯದಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1000 ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳನ್ನು 200 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದರು.
ಅಂಗನವಾಡಿ ಮೂಲಕ ಕೈಗೊಳ್ಳುವ ಚಟುವಟಿಕೆಗಳನ್ನು ಸುಗಮಗೊಳಿಸಲು 90 ಕೋಟಿ ರೂ ವೆಚ್ಚದಲ್ಲಿ 75,938 ಸ್ಮಾರ್ಟ್ ಪೋನ್ ಗಳನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಮೇಲ್ವಿಚಾರಕಿಯರಿಗೆ ಒದಗಿಸಲಾಗುವುದು ಎಂದರು.
ವಿವಿಧ ಖಾಯಿಲೆಯಿಂದ ಬಳಲುತ್ತಿರುವಂತ ವ್ಯಕ್ತಿಗಳ ಆರೈಕೆದಾರರಿಗೆ ಪ್ರತಿ ತಿಂಗಳು 1000 ರೂ ಪ್ರೋತ್ಸಾಹ ನೀಡಲಾಗುತ್ತದೆ. ಯಂತ್ರಚಾಲಿತ ದ್ವಿಚಕ್ರ ವಾಹನಗಳ್ನು ಒದಗಿಸಲು ಇನ್ನೂ ಬಾಕಿ ಇರುವ 1500 ವಿಶೇಷ ಚೇತನರಿಗೆ 2024-25ನೇ ಸಾಲಿನಲ್ಲಿ ದ್ವಿಚಕ್ರ ವಾಹನಗಳನ್ನು ವಿತರಿಸಲಾಗುವುದು ಎಂದರು.
ಲಿಂಗತ್ವ ಅಲ್ಪಸಖ್ಯಾತರ ಬದುಕನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ಮೈತ್ರಿ ಯೋಜನೆಯಡಿ ನೀಡುವ ಮಾಸಾಶನವನ್ನು 800 ರೂಗಳಿಂದ 1,200ಕ್ಕೆ ಹೆಚ್ಚಿಸಲಾಗುತ್ತದೆ. ಜೊತೆಗೆ ಗುರುತಿಸುವಿಕೆ ಹಾಗೂ ಗುರುತಿನ ಚೀಟಿ ವಿತರಣೆ ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸಲಾಗುವುದು ಎಂದು ಸಿಎಂ ಹೇಳಿದರು.