ಹಲಶಿ-21:ಕರ್ನಾಟಕದ ಜನಪ್ರಿಯ ಬ್ಯಾಂಕುಗಳಲ್ಲಿ ಒಂದಾಗಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಹಲಶಿ ಶಾಖೆ ವತಿಯಿಂದ ಗ್ರಾಮದ ಹಲಶಿ ಪ್ರೌಢಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿತರಣೆ ಮಾಡಲಾಯಿತು. ” ಕರ್ನಾಟಕದಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳು ಜನರಿಗೆ ಅತ್ಯುತ್ತಮ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿವೆ. ಕೆವಿಜಿ ಬ್ಯಾಂಕ್ ನಿಂದ ಶಾಲೆಯ ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವರಿಗೆ 5000/ ರೂಪಾಯಿ ಸ್ಕಾಲರ್ ಶಿಪ್ ಅನ್ನು ನೀಡಲಾಗಿದೆ. ವಿದ್ಯಾರ್ಥಿ/ನಿಯರು ಸ್ಪರ್ಧಾತ್ಮಕ ಮನೋಭಾವ ದಿಂದ ಅಧ್ಯಯನ ಮಾಡಿದರೆ ಯಶಸ್ಸು ದೊರೆಯುತ್ತದೆ ” ಎಂದು ಕೆವಿಜಿ ಬ್ಯಾಂಕ್ ಮ್ಯಾನೇಜರ್ ಶ್ರೀಮತಿ ವೀಣಾ ಭಂಡಾರಿ ಮಕ್ಕಳಿಗೆ ಕರೆ ನೀಡಿದರು.
ಕೆವಿಜಿ ಬ್ಯಾಂಕ್ ನಿಂದ ಔಟ್ ರೀಚ್ ಮತ್ತು ಆರ್ಥಿಕ ಶಿಕ್ಷಣ ಕಾರ್ಯಕ್ರಮದ ಅಡಿಯಲ್ಲಿ ಹಲಶಿ ಪ್ರೌಢಶಾಲೆ ಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಕಳೆದ ವರ್ಷದಲ್ಲಿ
8, 9 ಮತ್ತು 10 ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ಜಾತಿಯ ವಿದ್ಯಾರ್ಥಿನಿಯರಾದ ಕು. ಪ್ರಿಯಾ ನಾಗಪ್ಪ ಮಾದರ, ಕು. ಮಮತಾ ತಿಪ್ಪಣ್ಣ ಕುಕಡೊಳ್ಳಿ ಹಾಗೂ ಕು. ರಾಧಿಕಾ ಸುರೇಶ ಮಾದರ ಇವರು 5000 ರೂಪಾಯಿ ಸ್ಕಾಲರ್ ಶಿಪ್ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿನಿಯರಾಗಿದ್ದಾರೆ.
ಮುಖ್ಯೋಪಾಧ್ಯಾಯರಾದ ಶ್ರೀ ಪಿ. ಎಸ್. ಕೋಲಕಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಲಶಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ಅಶ್ವಿನಿ ದೇಸಾಯಿ ಅತಿಥಿಗಳಾಗಿ ಆಗಮಿಸಿದ್ದರು. ಶಿಕ್ಷಕರಾದ ಶ್ರೀ ಬಸವರಾಜ ಘೋಡಗೇರಿ ಸ್ವಾಗತ ಕೋರುವ ಜೊತೆಗೆ ಕೆವಿಜಿ ಬ್ಯಾಂಕ್ ನ ಇತಿಹಾಸ ಹಾಗೂ ವಿವಿಧ ಬ್ಯಾಂಕಿಂಗ್ ಸೇವೆಗಳ ಕುರಿತು ಮಾಹಿತಿ ನೀಡಿದರು. ಬ್ಯಾಂಕ್ ಸಿಬ್ಬಂದಿಗಳಾದ ವಾಸುದೇವ ಭೋಸ್ಲೆ, ಸಾತೇರಿ ಪಾಟೀಲ್, ಗ್ರಾಮದ ಗಣ್ಯರು ಸುರೇಶ ಮಾದರ, ಶಿಕ್ಷಕರಾದ ವೀರಣ್ಣ ಮಾಗಿ, ಶ್ರೀಮತಿ ರಜನಿ ಶಹಾಪುರಕರ, ಸದಾಶಿವ ಭಜಂತ್ರಿ, ವಿಜಯ ಹಿರೇಮಠ ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಮತಿ ಅನಿತಾ ಮಠಪತಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಮತಿ ಸವಿತಾ ಚಂದರಗಿ ವಂದನಾರ್ಪಣೆ ಸಲ್ಲಿಸಿದರು.