ಬೆಂಗಳೂರು-21: ಒಕ್ಕಲಿಗ ಸಮುದಾಯ ಕೃಷಿಯಲ್ಲಿ ಬೆವರು ಸುರಿಸಿ ಸಾಧನೆ ಮಾಡುತ್ತಿದ್ದು, ಉದ್ಯಮದಲ್ಲಿಯೂ ಸಾಧನೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅರಮನೆ ಮೈದಾನದಲ್ಲಿ ನಡೆದ ಉದ್ಯಮಿ ಒಕ್ಕಲಿಗ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಒಂದು ಕಾಲ ಇತ್ತು ಯಾರ ಬಳಿ ಭೂಮಿ ಇತ್ತೊ ಅವರು ಜಗತ್ತನ್ನು ಆಳುತ್ತಿದ್ದರು. ಅದಕ್ಕಾಗಿ ರಾಜಮಹಾರಾಜರು ಭೂಮಿ ಪಡೆಯಲು ಯುದ್ದಗಳನ್ನು ಮಾಡುತ್ತಿದ್ದರು. ಅಲೆಕ್ಸಾಂಡರ್ ಜಗತ್ತನ್ನು ಗೆಲ್ಲಲು ಹೋರಾಟ ಮಾಡಿದ. ಅವರ ಗುರು ಅರಿಸ್ಟಾಟಲ್ ಭಾರತವನ್ನು ಗೆದ್ದರೆ ವಿಶ್ವ ಗೆದ್ದಂತೆ ಅಂತ ಹೇಳಿದರು. ನಂತರ ವ್ಯಾಪಾರ ಮಾಡುವವರು ಜಗತ್ತನ್ನು ಆಳುತ್ತಿದ್ದರು. ಈಗ ಜ್ಞಾನ ಇರುವವರು ಜಗತ್ತನ್ನು ಆಳುತ್ತಾರೆ. ಬಿಲ್ ಕ್ಲಿಂಟನ್ ಮತ್ತು ಬಿಲ್ ಗೇಟ್ ನಡುವೆ ಪೈಪೋಟಿ ನಡೆದಾಗ ಬಿಲ್ ಗೇಟ್ ಹೆಚ್ಚು ಜನಪ್ರೀಯ ಅಂತ ಸರ್ವೆ ಆಯಿತು ಎಂದು ಹೇಳಿದರು.
ಕೃಷಿಯು ಕೂಡ ಒಂದು ಉದ್ಯಮ. ಕೃಷಿ ಇಲ್ಲದಿದ್ದರೆ ನಾವು ಬದುಕಲು ಆಗುವುದಿಲ್ಲ. ಕೃಷಿಯಲ್ಲಿ ಶೇ 1% ರಷ್ಟು ಬೆಳವಣಿಗೆ ಆದರೆ, ಉದ್ಯಮ ವಲಯ ಶೇ 4% ರಷ್ಟು ಬೆಳೆಯುತ್ತದೆ. ಸೇವಾ ವಲಯ ಶೇ 10% ರಷ್ಟು ಬೆಳೆಯುತ್ತದೆ. ಎಲ್ಲ ಬೆಳವಣಿಗೆಗೂ ಮೂಲ ಕೃಷಿ. ಕೃಷಿ ಉದ್ಯಮವಾಗಿ ಬೆಳವಣಿಗೆಯಾಗಿಲ್ಲ. ಭೂಮಿ ಇದ್ದಷ್ಟೇ ಇದೆ. ಉತ್ಪಾದನೆ ಹೆಚ್ಚಾಗಿದೆ. ಆದರೆ, ರೈತನ ಆದಾಯ ಹೆಚ್ಚಾಗಿಲ್ಲ. ಒಕ್ಕಲಿಗರು ಕೇವಲ ಕೃಷಿ ಮಾಡಿದರೆ ಅಭಿವೃದ್ಧಿ ಆಗಲು ಸಾಧ್ಯವಿಲ್ಲ. ಕೃಷಿ ಜೊತೆಗೆ ವ್ಯಾಪಾರ, ಉದ್ಯೋಗ ಮಾಡುವ ಮೂಲಕ ಹೊರ ಜಗತ್ತಿಗೆ ತೆರೆದುಕೊಳ್ಳುವ ಕೆಲಸ ಮಾಡಬೇಕು. ಒಕ್ಕಲಿಗರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ಯೋಜನಾ ಬದ್ದವಾಗಿ ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು.
ಒಕ್ಕಲಿಗರು ಜಮೀನು ಮಾರಿ ಎಲೆಕ್ಷನ್ ನಿಲ್ಲುವವರು ಹೆಚ್ಚಾಗಿದ್ದಾರೆ. ನಿಮಗೆ ಉದ್ಯಮದ ಕೌಶ್ಯಲದ ಅಗತ್ಯ ಇದೆ. ಅಗಕ್ಕೆ ಆತ್ಮಸ್ತೈರ್ಯ ಮುಖ್ಯ. ಕೆಲವು ಸಮುದಾಯಗಳು ದುಡ್ಡನ್ನೇ ನಂಬಿವೆ. ನಾವು ದುಡಿಮೆಯನ್ನು ನಂಬಿದವರು. ನಿಮ್ಮ ಬಳಿ ಜ್ಞಾನ ಇದ್ದರೆ ಬಂಡವಾಳ ನಿಮ್ಮ ಹಿಂದೆ ಬರುತ್ತದೆ. ನಾನು ಮಾಡೇ ತೀರುತ್ತೇನೆ ಎನ್ನುವ ಛಲ ಇದ್ದರೆ ಬಂಡವಾಳ ಬರುತ್ತದೆ. ಹೊಟ್ಟೆ ತುಂಬಿದರಿಂದ ಏನೂ ಸಾಧನೆ ಮಾಡಲು ಆಗುವುದಿಲ್ಲ. ಹಸಿದವರಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ಊಟದ ಹಸಿವಲ್ಲ, ಸಾಧನೆಯ ಹಸಿವು ಇದ್ದಾಗ ಸಾಧನೆ ಮಾಡಲು ಸಾಧ್ಯ. ಒಕ್ಕಲಿಗರು ಉದ್ಯಮದಲ್ಲಿಯೂ ಸಾಧನೆ ಮಾಡಬೇಕು. ಉದ್ಯಮದಲ್ಲಿಯೂ ನಮ್ಮ ಸಂಸ್ಕೃತಿ ಪ್ರಮುಖ ಪಾತ್ರ ವಹಿಸುತ್ತದೆ. ನಾವು ಸರಿ ದಾರಿಯಲ್ಲಿ ನಡೆದರೆ ಸಮಾಜ ನಮ್ಮನ್ನು ಗೌರವಿಸುತ್ತದೆ ಎಂದು ಹೇಳಿದರು.
ಕೃಷಿಯಲ್ಲಿ ಬೆವರು ಹಾಕಿ ಉತ್ಪಾದನೆ ಮಾಡಲು ಒಕ್ಕಲಿಗರನ್ನು ಮೀರಲು ಯಾರಿಗೂ ಸಾಧ್ಯವಿಲ್ಲ. ಒಕ್ಕಲಿಗ ಸಮುದಾಯದ ಬಗ್ಗೆ ಅಪಾರ ಗೌರವ ಹಾಗೂ ಪ್ರೀತಿ ಇದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಲು ಡಾ. ಅಶ್ವತ್ಥ್ ನಾರಾಯಣ ಪ್ರಮುಖ ಪಾತ್ರ ವಹಿಸಿದ್ದರು ಎಂದರು.
ಒಕ್ಕಲಿಗರು ಕಾಲಭೈರವನ ಆಶೀರ್ವಾದ ಪಡೆದವರು ನೀವು ಮನಸು ಮಾಡಿದರೆ, ಜಗತ್ತು ನಿಮ್ಮ ಕಡೆಗೆ ಬರುತ್ತದೆ. ನನಗೆ ಯುವಕರ ಮೇಲೆ ವಿಶ್ವಾಸ ಇದೆ. ಅವರು ಜಗತ್ತು ನೋಡಿದ್ದಾರೆ. ಬೆಂಗಳೂರನ್ನು ಕೆಂಪೇಗೌಡರು ಕಟ್ಟಿದ್ದಾರೆ. ನವ ಭವಿಷ್ಯದ ಬೆಂಗಳೂರನ್ನು ಕೆಂಪೇಗೌಡರ ಮಕ್ಕಳೇ ಕಟ್ಟಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸ್ಪಟಿಕಪುರಿ ಸಂಸ್ಥಾನ ಮಠದ ಶ್ರೀ ನಂಜಾವಧೂತ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಮಾಜಿ ಡಿಸಿಎಂ ಡಾ. ಅಶ್ಬತ್ಥ್ ನಾರಾಯಣ, ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ಬಿ.ಎಲ್. ಶಂಕರ್ ಹಾಗೂ ಇತರ ಗಣ್ಯರು ಪಾಲ್ಗೊಂಡಿದ್ದರು.