ಬೆಳಗಾವಿ-19:ವಿಜ್ಞಾನದ ಪ್ರಗತಿ ಹೆಚ್ಚಾದಂತೆ ದೇಶದ ಜನರ ಜೀವನದ ಗುಣಮಟ್ಟ ಸುಧಾರಿಸುತ್ತದೆ. ಪ್ರಸ್ತುತ ಭಾರತ ವಿಜ್ಞಾನ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡುತ್ತಿದ್ದು, 2035ಕ್ಕೆ ಬಾಹ್ಯಾಕಾಶದಲ್ಲಿ ಭಾರತ ತನ್ನದೇ ಆದ ಸ್ಪೇಸ್ ಸ್ಟೇಷನ್ ಹೊಂದಲ್ಲಿದೆ. ಅದಲ್ಲದೆ 2040ಕ್ಕೆ ಚಂದ್ರನ ಮೇಲೆ ಭಾರತೀಯರು ಕಾಲಿಡಲಿದ್ದಾರೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಎಸ್ ಹಿರಿಯಣ್ಷ ಅಭಿಪ್ರಾಯಪಟ್ಟರು. ಅವರು ಶುಕ್ರವಾರ ನಗರದ ಶ್ರೀ ಸಿದ್ಧರಾಮೇಶ್ವರ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ರಾಜ್ಯ ವಿಜ್ಞಾನ ಪರಿಷತ್ತು, ಬೆಳಗಾವಿ ವಿಜ್ಞಾನ ಕೇಂದ್ರ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಲಿಖಿತ ರಸಪ್ರಶ್ನೆ ಸ್ಪರ್ಧೆ ಹಾಗೂ ವಿದ್ಯಾರ್ಥಿ ವಿಜ್ಞಾನಿ ನೇರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು ಸರ್ಕಾರವೇ ವಿದ್ಯಾರ್ಥಿ-ವಿಜ್ಞಾನಿ ಸಂವಾದ ಕಾರ್ಯಕ್ರಮ ನಿಲ್ಲಿಸಿದ್ದರೂ ಸಹ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಜಿಲ್ಲೆಯ ವಿದ್ಯಾರ್ಥಿಗಳು ವೈಜ್ಞಾನಿಕ ಜ್ಞಾನದಿಂದ ವಂಚಿತರಾಗಬಾರದೆಂದು ಈ ಕಾರ್ಯಕ್ರಮ ಆಯೋಜಿಸಿರುವುದು ಅಭಿನಂದನೀಯ ಎಂದರು. ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಡಿ.ಆರ್. ಡಿ.ಒ. ಹಾಗೂ ಇಸ್ರೊ ನಿವೃತ್ತ ವಿಜ್ಞಾನಿ ಎನ್.ಎಸ್. ಕುಮಾರ್ ಮಾತನಾಡಿ ಪ್ರಸ್ತುತ ವಿಜ್ಞಾನ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು, ವಿದ್ಯಾರ್ಥಿಗಳು ಪಿ.ಯು ಹಾಗು ಪದವಿ ಹಂತದಲ್ಲಿ ಮೂಲ ವಿಜ್ಞಾನವನ್ನು ಆಯ್ಕೆ ಮಾಡಿಕೊಂಡು ಭವಿಷ್ಯದ ವಿಜ್ಞಾನಿಗಳಾಗಬೇಕು ಎಂದರು. ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ ಮಾತನಾಡಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಸಮಾಜ ಕಟ್ಟುವ ಕೆಲಸದಲ್ಲಿ ಯುವ ಜನತೆ ತಮ್ಮನ್ನು ತೊಡಗಿಸಿಕೊಳ್ಳಬೇಕು. ಅತ್ಯಂತ ಕಡಿಮೆ ವೆಚ್ಚದಲ್ಲಿ ವಿಜ್ಞಾನದ ಗುಣಮಟ್ಟದ ಶಿಕ್ಷಣ ನೀಡುವ ದೃಷ್ಟಿಯಿಂದ ಸಿದ್ಧರಾಮೇಶ್ವರ ಇಂಟಿಗ್ರೇಟೆಡ್ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ ನೂತನವಾಗಿ ಪ್ರಾರಂಭಿಸಿದ್ದು, ನಾಡಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಬೆಳಗಾವಿ ಅಸೋಸಿಯೇಷನ್ ಫಾರ್ ಸೈನ್ಸ್ ಎಜುಕೇಶನ್ ಕಾರ್ಯದರ್ಶಿ ಕೆ.ಬಿ. ಹಿರೇಮಠ ವಹಿಸಿದ್ದರು. ವೇದಿಕೆಯ ಮೇಲೆ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಸಿದ್ದರಾಮ ರೆಡ್ಡಿ, ಉಪನ್ಯಾಸಕ ಪ್ರಭು ಶಿವನಾಯ್ಕ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯೆ ಸ್ವಪ್ನ ಜೋಷಿ ಸ್ವಾಗತಿಸಿದರು. ರಾಜಶೇಖರ್ ಪಾಟೀಲ ನಿರೂಪಿಸಿದರು. ಉಪನ್ಯಾಸಕಿ ಪವಿತ್ರಾ ಪಾಟೀಲ ವಂದಿಸಿದರು. ಕಾರ್ಯಕ್ರಮದಲ್ಲಿ ಬೆಳಗಾವಿ ನಗರ ಹಾಗೂ ಗ್ರಾಮೀಣ ಪ್ರದೇಶದ 500 ವಿದ್ಯಾರ್ಥಿಗಳು ವಿಜ್ಞಾನಿಗಳೊಂದಿಗಿನ ಸಂವಾದದಲ್ಲಿ ಹಾಜರಿದ್ದರು.