23/12/2024
IMG20240116125351

ಬೆಳಗಾವಿ-16 : ನೇರಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರ ಮಕ್ಕಳಿಗೆ ಕೂಸಿನ ಮನೆ ಸಹಕಾರಿಯಾಗಲಿದೆ ಎಂದು ಸಹಾಯಕ ನಿರ್ದೇಶಕರಾದ (ಗ್ರಾ.ಉ) ಸವಿತಾ ಎಂ. ಅವರು ಹೇಳಿದರು.

ತಾಲ್ಲೂಕಿನ ಕಂಗ್ರಾಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಲತಗಾ ಗ್ರಾಮದಲ್ಲಿ  ಜಿಲ್ಲಾ ಪಂಚಾಯತ, ಎಸ್.ಐ.ಆರ್.ಡಿ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ   ಮಂಗಳವಾರ ಜನವರಿ 16 ರಂದು ಆಯೋಜಿಸಿದ್ದ ಕೂಸಿನಮನೆಯ  ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ ಅವರು ಮಾತನಾಡಿದರು

ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ಜಮೀನುಗಳಲ್ಲಿ ಕೃಷಿ ಕೆಲಸಕ್ಕೆ ತೆರಳುತ್ತಾರೆ. ಕೂಲಿಕಾರ್ಮಿಕರು ಹಾಗೂ ಕೃಷಿ ಕಾರ್ಮಿಕರು ಬಹುತೇಕರು ಬಡ ಕುಟುಂಬದವರಾಗಿದ್ದು, ಪ್ರತಿ-ನಿತ್ಯ ಕೂಲಿ ಕೆಲಸಕ್ಕೆ ತೆರಳುವ ಅನಿವಾರ್ಯತೆ ಇರುತ್ತದೆ. ಇಂತಹ ಕುಟುಂಬದ ಮಹಿಳೆಯರು ತಮ್ಮ ಚಿಕ್ಕ ಮಕ್ಕಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವುದು ಅಸಾಧ್ಯ. ಮಹಿಳೆಯರು ತಮ್ಮ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಕೆಲಸಕ್ಕೆ ತೆರಳಿದ ಸಂದರ್ಭದಲ್ಲಿ ಅವರು ಕೆಲಸದಿಂದ ಮನೆಗೆ ಮರಳುವವರೆಗೆ ಮಗುವಿಗೆ ತಾಯಿ ಹಾಲು ದೊರೆಯುವುದಿಲ್ಲ ಜೊತೆಗೆ ಪೌಷ್ಠಿಕ ಆಹಾರ ದೊರೆಯುವುದಿಲ್ಲ ಇದರಿಂದ ಮಕ್ಕಳು ಅಪೌಷ್ಠಿಕತೆಗೆ ಒಳಗಾಗಬಹುದಾಗಿದೆ. ಇದರಿಂದ ಗ್ರಾಮೀಣರ ಮಾನಸಿಕ ಆರೋಗ್ಯವು ಹಾಳಾಗುತ್ತದೆ. ಈ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಈ ಯೋಜನೆ ಆರಂಭಿಸಿದೆ ಎಂದರು.

ಗ್ರಾಪಂ ಅಧ್ಯಕ್ಷರಾದ ಶ್ರೀಮತಿ ದೊಡ್ಡವ್ವ ಸಿದ್ದಪ್ಪ ಮಾಳಗಿ, ಉಪಾಧ್ಯಕ್ಷರಾದ ಕಲ್ಲಪ್ಪ ನಾಗೋಜಿ ಪಾಟೀಲ, ಪಿಡಿಒ ಗೋಪಾಲ ನಾಯಕ, ತಾಂತ್ರಿಕ ಸಂಯೋಜಕ ನಾಗರಾಜ ಯರಗುದ್ದಿ, ತಾಐಇಸಿ ಸಂಯೋಕರುಗಳಾದ ರಮೇಶ ಮಾದರ, ಮಾಂತೇಶ ಬಾಡವನಮಠ, ಗಣಕಯಂತ್ರ ನಿರ್ವಾಹಕ ಪ್ರಶಾಂತ ಹೊಸಮನಿ ಸರ್ವ ಸದಸ್ಯರು ಹಾಗೂ  ಗ್ರಾಮ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

 

error: Content is protected !!