ಬೆಳಗಾವಿ-16: ವಾರ್ಷಿಕ ಪರೀಕ್ಷೆ ಇದೆ ಎಂಬ ಭಯವನ್ನು ಮನಸ್ಸಿನಲ್ಲಿಟ್ಟುಕೊಂಡು ಪರೀಕ್ಷೆ ಬರೆಯಲು ಹೋಗಬಾರದು. ಪರೀಕ್ಷೆಯನ್ನು ಒಂದು ಹಬ್ಬದ ವಾತಾವರವಣದಂತೆ ಆಚರಿಸಿ ಧೈರ್ಯದಿಂದ ಪರೀಕ್ಷೆಯನ್ನು ಬರೆಯಬೇಕೆಂದು ಕಾರ್ಪೋರೇಟ ತರಬೇತುದಾರ ಸಂಧ್ಯಾ ಶೇರೆಗಾರ ಅವರು ಹೇಳಿದರು.
ಇತ್ತಿಚಿಗೆ ಬೆಳಗಾವಿ ತಾಲೂಕಿನ ಶಿಂದೊಳ್ಳಿ ಗ್ರಾಮದಲ್ಲಿರುವ ಗೋಪಾಲಜೀ ಜಿನಗೌಡ ಶಾಲೆ ಮತ್ತು ಇಂಟಿಗ್ರೆಟೆಡ್ ಪಿಯು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯ ಎಂಬ ವಿಷಯದಡಿ ವಿಶೇಷ ಉಪನ್ಯಾಸ ನೀಡಿದ ಅವರು, ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ಭಯಭೀತರಾಗಬಾರದು. ಪ್ರಶ್ನೆ ಪತ್ರಿಕೆ ಕೈಸೇರಿದ ನಂತರ ಸಮಾಧಾನದಿಂದ ಪ್ರಶ್ನೆಗಳನ್ನು ಓದಿಕೊಂಡು ತದನಂತರ ತಮಗೆ ಗೊತ್ತಿರುವ ವಿಷಯವನ್ನು ಮೊದಲು ಬರೆಯಬೇಕು ಎಂದು ಅವರು ತಿಳಿಸಿದರು.
ಪರೀಕ್ಷಾ ಸಮಯದಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದೇ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಅಧ್ಯಯನದತ್ತ ಹೆಚ್ಚಿನ ಗಮನ ನೀಡಬೇಕು. ವರ್ಷವಿಡಿ ನಿರಂತರ ಅಧ್ಯಯನ, ಪುಸ್ತಕಗಳನ್ನು ಓದುವುದು. ಸಮಯ ಸಿಕ್ಕಾಗ ಬರೆಯುವ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು. ಆಗ ಮಾತ್ರ ನಿಮಗೆ ಪರೀಕ್ಷೆಯಸಂದರ್ಭದಲ್ಲಿ ಯಾವುದೇ ಕಠಿಣ ಪ್ರಸಂಗಗಳು ಎದುರಾಗುವುದಿಲ್ಲ ಎಂದು ಅವರು ತಿಳಿಸಿದರು .
ಪ್ರಶ್ನೆ ಪತ್ರಿಕೆಗಳನ್ನು ನಿಗದಿತ ಕಾಲಾವಧಿಯಲ್ಲಿ ಹೇಗೆ ಬರೇಯಬೇಕು. ಪರೀಕ್ಷೆಯ ಸಮಯವನ್ನು ಹೇಗೆ ಸದುಪಯೋಗ ಪಡೆದುಕೊಳ್ಳಬೇಕು. ಯಾವ ಪ್ರಶ್ನೆಯನ್ನು ಮೊದಲು ಬಿಡಿಸಬೇಕು. ಮತ್ತು ಭಯಪಡದೆ ಧೈರ್ಯದಿಂದ ಹೇಗೆ ಪ್ರಶ್ನೆ ಪತ್ರಿಕೆಯನ್ನು ಎದುರಿಸಬೇಕು ಎಂಬುದರ ಸಲಹೆ ಸೂಚನೆಗಳನ್ನು ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಮನಸ್ಸಿನಲ್ಲಿದ್ದ ಕೆಲ ಅಂತಕದ ಪ್ರಶ್ನೆಗಳಿಗೆ ಉತ್ತರಿಸಿ ಅವರ ಸಂಶಯ ಮತ್ತು ಪಪರೀಕ್ಷೆಯ ಭಯದ ವಾತಾವರಣ ದೂರ ಮಾಡಿದರು.
ವೇದಿಕೆ ಮೇಲೆ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೀಯಾ ಮೂಡಲಗಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ೩೦೦ ಕ್ಕೂ ಹೆಚ್ಚು ವಿದ್ಯಾರ್ಥಿ , ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿತೋ ಲೇಡಿಜ ವಿಂಗ ಅಧ್ಯಕ್ಷೆ ಮಾಯಾ ಜೈನ ಅವರು ವಹಿಸಿದ್ದರು.ಕಾರ್ಯಕ್ರಮ ಸಂಯೋಜಕಿ ವೈಶಾಲಿ ಉಪಾಧ್ಯೆ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಮಮತಾ ಜೈನ ಅತಿಥಿಗಳನ್ನು ಸ್ವಾಗತಿಸಿದರು.