ಬೆಂಗಳೂರು-16:ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಇಂದು ಮಾಜಿ ಮುಖ್ಯ ಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಪತ್ನಿ ಶಕುಂತಲಾ ಹೆಗಡೆ ಅವರನ್ನು ಬೆಂಗಳೂರಿನ ಸದಾಶಿವನಗರದಲ್ಲಿರುವ “ಕೃತಿಕಾ ನಿವಾಸ” ದಲ್ಲಿ ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಕೊಡುಗೆಗಳನ್ನು ಸ್ಮರಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರು ಮೌಲ್ಯಾಧಾರಿತ ರಾಜಕಾರಣಿ ಆಗಿದ್ದ ಹೆಗಡೆಯವರ ಬದುಕು ಹಾಗೂ ಸಾರ್ವಜನಿಕ ಸೇವೆ ಇಂದಿಗೂ ಜನ ಮಾನಸದಲ್ಲಿ ಹಚ್ಚಹಸಿರಾಗಿದೆ ಎಂದು ಹೇಳಿದರು.
ರಾಜ್ಯದ ಬಡಜನತೆಯ ಬದುಕು ಹಸನಗೊಳಿಸಲು ಅವರು ಜಾರಿಗೆ ತಂದಿದ್ದ ವಿಧವಾ ವೇತನ, ವೃದ್ಯಾಪ ವೇತನ, ಬಸ್ ಪಾಸು ಸೌಲಭ್ಯ, ಪಂಚಾಯತ್ ರಾಜ್ ವ್ಯವಸ್ಥೆ, ಲೋಕಾಯುಕ್ತ ಸೇರಿದಂತೆ ಹತ್ತು ಹಲವು ಜನಪರ ಯೋಜನೆಗಳ ಮೂಲಕ ರಾಜ್ಯದ ಮನೆ ಮಾತಾಗಿದ್ದ ರಾಮಕೃಷ್ಣ ಹೆಗಡೆಯವರು ಕಲುಷಿತ ರಾಜಕಾರಣದ ಶುದ್ಧತೆಗೆಗಾಗಿ ಪಣತೊಟ್ಟು ಹೊಸ ರಾಜಕೀಯ ಸಂಸ್ಕೃತಿಯನ್ನು ಹುಟ್ಟು ಹಾಕಿದ ಧೀಮಂತ ನಾಯಕ ಎಂದು ತಿಳಿಸಿದರು.
ರಾಜಕಾರಣದಲ್ಲಿ ಸಂಸ್ಕಾರ, ಪದಬಳಕೆ ಹಾಗೂ ಪರಸ್ಪರ ಗೌರವದಂತಹ ಸಾರ್ವಕಾಲಿಕ ಮೌಲ್ಯಗಳುಳ್ಳ ವಿಚಾರಗಳನ್ನು ಹೆಗಡೆಯವರು ಪ್ರತಿಪಾದಿಸಿದ್ದನ್ನು ಬಸವರಾಜ ಹೊರಟ್ಟಿ ಈ ಸಂದರ್ಭದಲ್ಲಿ ಮೆಲುಕು ಹಾಕಿದರು.
ರಾಮಕೃಷ್ಣ ಹೆಗಡೆಯವರ ಜಾತ್ಯಾತೀತ ಮನೋಭಾವ, ಮೌಲ್ಯ ಸಿದ್ದಾಂತಗಳ ಅನುಷ್ಠಾನ, ಜನಪರ ಕಾಳಜಿ, ಸರಳತೆ, ಇನ್ನು ಮುಂತಾದ ಉದಾತ್ತ ಗುಣಗಳು ಇಂದಿನ ಯುವ ರಾಜಕಾರಣಿಗಳಿಗೆ ಅನುಕರಣೀಯ ಆದರ್ಶಗಳಾಗಿವೆ ಎಂದು ಬಸವರಾಜ ಹೊರಟ್ಟಿಯವರು ಬಣ್ಣಿಸಿದರು.