ಬೆಳಗಾವಿ-೨೯:ಶರಣರ ಅನುಭಾವದ ಪ್ರವಚನದ ನುಡಿಗಳು ಮನಸ್ಸಿನಲ್ಲಿನ ದುಃಖ, ದೋಷ, ಆಸೆ, ಆಮಿಷ ಸೇರಿದಂತೆ ಅರಿಷಡ್ ವರ್ಗಗಳನ್ನು ದೂರಗೊಳಿಸಿ ಮನಸ್ಸನ್ನು ಪರಿಶುದ್ಧಗೊಳಿಸುತ್ತವೆ. ಲೌಕಿಕ ಸುಖ ಅಲ್ಪಸುಖವಾದರೆ ಅನುಭಾವದಿಂದ ದೊರೆತ ಸುಖ ಶಾಶ್ವತವಾದದ್ದು. ಇದು ವ್ಯಕ್ತಿಗೆ ತಾನು ಯಾರೆಂಭುದನ್ನು ತಿಳಿಸುತ್ತದೆ. ಏಕೆಂದರೆ ಅನುಭಾವ ಎಂಬುದು ಆತ್ಮದ ವಿದ್ಯೆಯಾಗಿದೆ ಎಂದು ಎಡೆಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. ಅವರು ಇಂದು ಶಿವಬಸವ ನಗರದ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಆರ್. ಎನ್. ಶೆಟ್ಟಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಡಾ. ಶಿವಬಸವ ಮಹಾಸ್ವಾಮಿಗಳವರ 135ನೇ ಜಯಂತಿ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಶರಣರ ಅನುಭವಾಮೃತ ಪ್ರವಚನ ಉದ್ಘಾಟಿಸಿ ಮಾತನಾಡಿದರು. ಮುಂದುವರೆದು ಮಾತನಾಡಿದ ಶ್ರೀಗಳು ಈ ಹಿಂದೆ ಬಂಡವಾಳಶಾಹಿಗಳು ಈ ಜನ್ಮದಲ್ಲಿ ದುಡಿದರೆ ಮುಂದಿನ ಜನ್ಮದಲ್ಲಿ ಅದರ ಫಲ ದೊರೆಯುತ್ತದೆ ಎಂದು ಧರ್ಮ, ದೇವರು ಹಾಗೂ ಪುನರ್ಜನ್ಮದ ಹೆಸರಿನಲ್ಲಿ ಜನರ ಶೋಷಣೆ ಮಾಡುತ್ತಿದ್ದರು. ಆದರೆ ಬಸವಾದಿ ಶರಣರು ಈ ಶೋಷಣೆಯನ್ನು ತಡೆಗಟ್ಟಿ ಗುರು, ಲಿಂಗ, ಜಂಗಮ, ಭಕ್ತ ಸೇರಿದಂತೆ ಎಲ್ಲರೂ ಸತ್ಯ ಶುದ್ಧವಾದ ಕಾಯಕ ಮಾಡಬೇಕು. ದುಡಿದು ತಿನ್ನದವರು ಭಕ್ತರೇ ಅಲ್ಲ ಎಂದು ತಿಳಿಸುತ್ತಾ ಶ್ರಮ ಸಂಸ್ಕೃತಿಯನ್ನು ಪರಿಚಯಿಸಿ ಮಾನವ ಬದುಕನ್ನು ಹಸನುಗಳಿಸುವ ಕಾರ್ಯ ಮಾಡಿದರು ಎಂದರು.
ಶ್ರೀಮಠದ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಆರ್. ಎನ್. ಶೆಟ್ಟಿ ಮಹಾವಿದ್ಯಾಲಯದ ಆವರಣದಲ್ಲಿ ನಿರ್ಮಾಣವಾದ ನೂತನ ಅನುಭವ ಮಂಟಪವನ್ನು ಉದ್ಘಾಟಿಸಿದ ಶ್ರೀಗಳು ಈ ಅನುಭವ ಮಂಟಪದಲ್ಲಿ ವಚನಗಳ ಚಿಂತನೆಯಾಗಬೇಕು, ಸುಸಜ್ಜಿತ ಸುಂದರ ಅನುಭವ ಮಂಟಪವು ನಿರ್ಮಾಣವಾಗಿದ್ದು ನಮಗೆಲ್ಲ ಖುಷಿ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಸಮ್ಮುಖ ನುಡಿಗಳನ್ನಾಡಿದ ಬೆಳ್ಳೇರಿಯ ಬಸವಾನಂದ ಮಹಾಸ್ವಾಮಿಗಳು ಹಬ್ಬ ಹರಿದಿನಗಳಲ್ಲಿ ಭಕ್ಷ ಭೋಜನ ತಯಾರಿಸಿ ನೈವೇದ್ಯ ಅರ್ಪಿಸುವುದು ಭಕ್ತಿಯಲ್ಲ. ಏಕೆಂದರೆ ಈ ಭೂಮಿ, ಬೆಳೆ, ಗಾಳಿ ಇವೆಲ್ಲವೂ ಭಗವಂತನ ಕರುಣೆಯಿಂದಲೆ ದೊರೆತಂತವು. ಭಕ್ತ ಮತ್ತು ದೇವರನ್ನು ಬೆಸೆಯುವ ಸೇತುವೆಯೇ ಭಕ್ತಿ. ಇದು ಅರಿವು, ಆಚಾರ ಮತ್ತು ಅನುಭಾವ ಗಳನ್ನೊಳಗೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಶರಣರ ಅನುಭವಾಮೃತ ಪ್ರವಚನ ನೀಡಿದ ಮನಕವಾಡ ದೇವಮಂದಿರದ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ಇತ್ತೀಚಿಗೆ ಕೆಲವು ಮಠಗಳು ಬಸವ ತತ್ವವನ್ನು ತೊಡುವ ಬಟ್ಟೆಯೆಂದು ಭಾವಿಸಿ, ಅಗತ್ಯವಿದ್ದಾಗ ಧರಿಸಿ ಅದನ್ನು ಬದಲಾಯಿಸುತ್ತಿರುತ್ತಾರೆ ಆದರೆ ನಾಗನೂರು ರುದ್ರಾಕ್ಷಿ ಮಠವು ಬಸವ ತತ್ವವನ್ನು ತನ್ನ ಅಂಗವೆಂದು ಭಾವಿಸಿ, ನಿತ್ಯ ಅದರ ಅನುಷ್ಠಾನದಲ್ಲಿ ಕಾರ್ಯತತ್ಪರವಾಗಿದೆ ಎಂದರು.
ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಸಮಾರಂಭದ ನೇತೃತ್ವ ವಹಿಸಿದ್ದರು. ವೇದಿಕೆಯ ಮೇಲೆ ತೋಂಟದಾರ್ಯ ವಿರಕ್ತಮಠ ಅರಳಿಕಟ್ಟಿಯ ಶಿವಮೂರ್ತಿ ಮಹಾಸ್ವಾಮಿಗಳು, ಜುಂಜರವಾಡದ ಬಸವರಾಜ ಶರಣರು ಉಪಸ್ಥಿತರಿದ್ದರು. ಪ್ರವಚನಕ್ಕೆ ದೇವರಾಜ ಗವಾಯಿಗಳು ಸಂಗೀತ, ಹನುಮಂತಪ್ಪನವರ ವಯಲಿನ್, ತೋಂಟೆದ್ರ ಕುಮಾರ ಅವರು ತಬಲಾ ಸಾಥ್ ನೀಡಿದರು. ಪ್ರಾರಂಭದಲ್ಲಿ ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಎ.ಎಲ್. ಪಾಟೀಲ ಸ್ವಾಗತಿಸಿದರು. ಪ್ರಾಧ್ಯಾಪಕ ಏ.ಕೆ. ಪಾಟೀಲ ನಿರೂಪಿಸಿದರು. ಇನ್ನೋರ್ವ ಪ್ರಾಧ್ಯಾಪಕ ಮಂಜುನಾಥ ಶರಣಪ್ಪನವರ ವಂದಿಸಿದರು. ಉದ್ಘಾಟನಾ ಸಮಾರಂಭಕ್ಕೂ ಮುಂಚೆ ಶ್ರೀನಗರ ಉದ್ಯಾನವನದಿಂದ ರುದ್ರಾಕ್ಷಿ ಮಠದವರೆಗೆ ಶರಣರ ವಚನಗಳ ಕಟ್ಟುಗಳನ್ನು ಹೊತ್ತ ಭವ್ಯ ಮೆರವಣಿಗೆ ನಡೆಯಿತು. ಬಾಲಕರು ಶರಣರ ವೇಷ ಧರಿಸಿ ಗಣ್ಯರನ್ನು ಸ್ವಾಗತಿಸಿದ್ದು ಆಕರ್ಷಣೀಯವಾಗಿತ್ತು. ಕಾರ್ಯಕ್ರಮದಲ್ಲಿ ಸಾವಿರಾರು ಶರಣ ಶರಣೆಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.