23/12/2024
IMG-20241125-WA0035

“ಸಿಇಟಿ ಸಕ್ಷಮ್”ಕ್ಕೆ 10 ಲಕ್ಷ ರೂಪಾಯಿ ಅನುದಾನ

ಬೆಳಗಾವಿ-೨೫: ಸರ್ಕಾರಿ ಪದವಿ ಪೂರ್ವ ವಿದ್ಯಾಲಯಗಳಲ್ಲಿ ವಿಜ್ಞಾನ ವ್ಯಾಸಂಗ ಮಾಡುತ್ತಿರುವ ಜಿಲ್ಲೆಯ ಗ್ರಾಮೀಣ ಪ್ರದೇಶದ ಮತ್ತು ಆರ್ಥಿಕವಾಗಿ ದುರ್ಬಲರಾಗಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗಾಗಿ ಬೆಳಗಾವಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗಿರುವ “ಸಿ.ಇ.ಟಿ.-ಸಕ್ಷಮ್” ಎಂಬ ವಿನೂತನ ಮತ್ತು ಸೃಜನಾತ್ಮಕ ಕಾರ್ಯಕ್ರಮಕ್ಕೆ ರಾಜ್ಯ ಸರಕಾರದ ಮೆಚ್ಚುಗೆ ಜತೆಗೆ ಚಾಲೆಂಜ್ ಫಂಡ್ ಯೋಜನೆಯಡಿ ಹತ್ತು ಲಕ್ಷ ರೂಪಾಯಿ ಅನುದಾನ ಕೂಡ ಲಭಿಸಿದೆ.

IMG 20241125 WA0034 -

ಜಿಲ್ಲೆಯ ಎಲ್ಲ ಸರಕಾರಿ ವಿಜ್ಞಾನ ಪದವಿ ಪೂರ್ವ ಕಾಲೇಜುಗಳಲ್ಲಿ ಕಲಿಯುತ್ತಿರುವ ಬಡ ಕುಟುಂಬಗಳ ಹಾಗೂ ಗ್ರಾಮೀಣ ಪ್ರದೇಶಗಳ ಸಾವಿರಾರು ವಿದ್ಯಾರ್ಥಿಗಳನ್ನು ಸಿ.ಇ.ಟಿ ಎದುರಿಸಲು ಸಕ್ಷಮ ಗೊಳಿಸುವ ನಿಟ್ಟಿನಲ್ಲಿ ಹೊಸ ಪ್ರಯೋಗಾತ್ಮಕ ಕಾರ್ಯಕ್ರಮವನ್ನು ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಆರಂಭಿಸಿದ್ದಾರೆ.

ಜಿಲ್ಲಾ ಪಂಚಾಯತ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ CET-Saksham (ಸಿಇಟಿ-ಸಕ್ಷಮ) ವಿನೂತನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಸರಕಾರಿ ವಿಜ್ಞಾನ ಪಿಯು ಕಾಲೇಜುಗಳ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಎರಡನೇ ಶನಿವಾರ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನಾಲ್ಕನೇ ಶನಿವಾರ ಸಿದ್ಧತಾ ಪರೀಕ್ಷೆಗಳನ್ನು ನಡೆಸುವ ಮೂಲಕ ಸಿಇಟಿ-ನೀಟ್ ಪರೀಕ್ಷೆಗಳಿಗೆ ಅವರನ್ನು ಸಜ್ಜುಗೊಳಿಸುವುದು ಸಿಇಟಿ-ಸಕ್ಷಮ್ ಕಾರ್ಯಕ್ರಮವಾಗಿದೆ.

ಇಂತಹ ಪ್ರಯೋಗಾತ್ಮಕ ಮತ್ತು ಸೃಜನಾತ್ಮಕ ಕಾರ್ಯಕ್ರಮದಲ್ಲಿ ಗುಣಮಟ್ಟದ ಗುರಿಗಳನ್ನು ಸಾಧಿಸಲು ಅನುಕೂಲವಾಗುವಂತೆ ಅಗತ್ಯ ಅನುದಾನವನ್ನು ಒದಗಿಸಲು ಸರಕಾರವು “ಚಾಲೆಂಜ್ ಫಂಡ್” ಸ್ಥಾಪಿಸಿರುತ್ತದೆ.

ಇದೀಗ ಸಿಇಟಿ-ಸಕ್ಷಮ್ ಪರಿಣಾಮಕಾರಿ ಜಾರಿಗೊಳಿಸಲು ಈ “ಚಾಲೆಂಜ್ ಫಂಡ್” ಯೋಜನೆಯಡಿ ಸರಕಾರವು ಹತ್ತು ಲಕ್ಷ ರೂಪಾಯಿ‌ಅನುದಾನವನ್ನು ಬಿಡುಗಡೆಗೊಳಿಸಿರುತ್ತದೆ ಎಂದು ಬೆಳಗಾವಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ತಿಳಿಸಿದ್ದಾರೆ.

ತಮ್ಮ ಕನಸಿನ ಯೋಜನೆಯಾಗಿರುವ ಸಿಇಟಿ-ಸಕ್ಷಮ್ ಅನುಷ್ಠಾನಕ್ಕೆ ಸರಕಾರವು ಅನುದಾನ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಅವರು, ಮುಂಬರುವ ದಿನಗಳಲ್ಲಿ ಸಿಇಟಿ-ಸಕ್ಷಮ್ ಸಮರ್ಪಕ ಅನುಷ್ಠಾನ, ವಿಶ್ಲೇಷಣೆ ಹಾಗೂ ದತ್ತಾಂಶ ಸಂಗ್ರಹಕ್ಕೆ ವಿಶೇಷ ಸಾಫ್ಟವೇರ್ ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಸಾಫ್ಟವೇರ್ ಮೂಲಕ ಪ್ರತಿಯೊಂದು ವಿದ್ಯಾರ್ಥಿಯ ಪರ್ಫಾಮೆನ್ಸ್ ಒಂದು ಕಡೆ ಸಂಗ್ರಹಿಸಿ ಅದನ್ನು ವಿಶ್ಲೇಷಣೆಗೊಳಪಡಿಸುವ ಯೋಚನೆ ಇದೆ ಎಂದು ರಾಹುಲ್ ಶಿಂಧೆ ವಿವರಿಸಿದರು.

ಜಿಲ್ಲಾ ಪಂಚಾಯತ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಉಪನ್ಯಾಸಕರು ಸಿಇಟಿ-ಸಕ್ಷಮ್ ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ಜಾರಿಗೊಳಿಸುವ ಮೂಲಕ ಅದನ್ನು ಯಶಸ್ವಿಗೊಳಿಸುತ್ತಿದ್ದು, ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಜಿಪಂ ಸಿಇಓ ರಾಹುಲ್ ಶಿಂಧೆ ತಿಳಿಸಿದರು.

ಸಿಇಟಿ-ಸಕ್ಷಮ್ ವಿನೂತನ ಕಾರ್ಯಕ್ರಮದ ಮೂಲಕ ನಡೆಸಲಾಗುವ ಸಿದ್ಧತಾ ಪರೀಕ್ಷೆಗಳು ವಿದ್ಯಾರ್ಥಿಗಳ CET/NEET ಪರೀಕ್ಷೆಗಳನ್ನು ಎದುರಿಸಲು ಸಾಮರ್ಥ್ಯ ಬಲಪಡಿಸುವುದಲ್ಲದೇ, ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಪರಿಣಿತಿಯನ್ನು ಮತ್ತು ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸಲು ಸಹಕಾರಿಯಾಗಲಿವೆ.

ಶಿವಮೊಗ್ಗ, ವಿಜಯಪುರ ಸೇರಿದಂತೆ ಏಳೆಂಟು ಜಿಲ್ಲೆಗಳ ಅಧಿಕಾರಿಕಾರಿಗಳ ತಂಡಗಳು ಬೆಳಗಾವಿಗೆ ಭೇಟಿ ನೀಡಿ “ಸಿಇಟಿ-ಸಕ್ಷಮ್” ಮಾದರಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿರುತ್ತಾರೆ.

ಬೆಳಗಾವಿ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ಇಂತಹ‌ ಪ್ರಯೋಗಾತ್ಮಕ ಹಾಗೂ ಸೃಜನಾತ್ಮಕ ಕಾರ್ಯಕ್ರಮವು ಇಡೀ ರಾಜ್ಯದ ಶೈಕ್ಷಣಿಕ ವಲಯದಲ್ಲಿ ಗಮನಸೆಳೆದಿರುವುದು ವಿಶೇಷವಾಗಿದೆ.

Leave a Reply

Your email address will not be published. Required fields are marked *

error: Content is protected !!