ಬೆಳಗಾವಿ-೨೫: ರಕ್ತದಾನ ಶ್ರೇಷ್ಠ ದಾನಗಳಲ್ಲಿ ಒಂದು. ಪ್ರತಿಯೊಬ್ಬ ವ್ಯಕ್ತಿಯು ವರ್ಷದಲ್ಲಿ ಒಂದರಿಂದ ಮೂರು ಸಲ ರಕ್ತದಾನ ಮಾಡಬೇಕು. ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಸಾಮಾಜಿಕ ಸೇವೆಗಳಲ್ಲಿ ರಕ್ತದಾನವು ಮಹತ್ವದ್ದಾಗಿದೆ ಎಂದು ೨೫ ಕರ್ನಾಟಕ ಎನ್‌ಸಿಸಿ ಬಟಾಲಿಯನ್ ಕಮಾಡಿಂಗ್ ಆಫೀಸರ್ ಕರ್ನಲ್ ಸುಧಾಂಶು ದೀಕ್ಷಿತ್ ಹೇಳಿದರು.
ಅವರು ಲಿಂಗರಾಜ ಕಾಲೇಜಿನಲ್ಲಿ ಎನ್‌ಸಿಸಿ ದಿನಾಚರಣೆ ಅಂಗವಾಗಿ ೨೬ ಕರ್ನಾಟಕ ಎನ್‌ಸಿಸಿ ಬಟಾಲಿಯನ್, ಲಿಂಗರಾಜ ಕಾಲೇಜು, ಆರ್.ಎಲ್.ವಿಜ್ಞಾನ ಕಾಲೇಜುಗಳ ಆರ್ಮಿ ಹಾಗೂ ಎರ್‌ವಿಂಗ್ ಎನ್‌ಸಿಸಿ ಘಟಕಗಳು, ರೆಡ್ ಕ್ರಾಸ್, ಎನ್‌ಎಸ್‌ಎಸ್ ಘಟಕಗಳು ಹಾಗೂ ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ರಕ್ತ ಭಂಡಾರ ಸೆಂಟರ್ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಯುವಜನಾಂಗದಲ್ಲಿ ರಕ್ತದಾನದ ಪ್ರಜ್ಞೆಯನ್ನು ಮೂಡಿಸುವುದು ಅಗತ್ಯವಾಗಿದೆ. ನಾವು ರಕ್ತದಾನವನ್ನು ಮಾಡುವುದರಿಂದ ಒಬ್ಬ ರೋಗಿಯ ಜೀವವನ್ನು ಉಳಿಸಲು ಸಾಧ್ಯ. ಸ್ವಯಂ ಇಚ್ಛಿಯಿಂದ ಮುಂದೆ ಬಂದು ರಕ್ತದಾನವನ್ನು ಮಾಡುವಂತಾಗಬೇಕು. ಇದೊಂದು ಪ್ರತಿಯೊಬ್ಬ ನಾಗರಿಕ ಕರ್ತವ್ಯವಾಗಿದೆ ಎಂದರು.
೨೬ ಕರ್ನಾಟಕ ಎನ್‌ಸಿಸಿ ಬಟಾಲಿಯನ್ ಕಮಾಡಿಂಗ್ ಆಫೀಸರ್ ಆದ ಲೆಫ್ಟನಂಟ್ ಕರ್ನಲ್ ಸುನೀಲ ದಾಗರ ಅವರು ಮಾತನಾಡಿ ‘ಎನ್‌ಸಿಸಿ ಕೆಡೆಟ್‌ಗಳಲ್ಲಿ ರಕ್ತದಾನದ ಮಹತ್ವ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ರಕ್ತದಾನವನ್ನು ಆಯೋಜಿಸಲಾಗಿದೆ. ಯುವಕರು ನಮ್ಮ ದೇಶದ ಬೆನ್ನೆಲುಬು. ಅವರು ಸಾಮಾಜಿಕ ಸೇವೆಗಳಲ್ಲಿ ಪಾಲ್ಗೊಳ್ಳಬೇಕು. ೧೯೪೮ರಲ್ಲಿ ಸ್ಥಾಪನೆಗೊಂಡ ದೇಶದ ದೊಡ್ಡ ಸಂಘಟನೆ ಎನ್‌ಸಿಸಿ. ಯುವಕ ಯುವತಿಯರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಅವರ ನೈತಿಕ ಬಲವನ್ನು ಹೆಚ್ಚಿಸುತ್ತಿದೆ. ಕೆಡೆಟ್‌ಗಳಿಗೆ ಸೈನಿಕ ತರಬೇತಿಯನ್ನು ನೀಡುವ ಮೂಲಕ ದೇಶಾಭಿಮಾನವನ್ನು ಮೂಡಿಸುವ ಮಹತ್‌ರ ಕೆಲಸ ಮಾಡುತ್ತಿದೆ. ಎನ್‌ಸಿಸಿ ದಿನಾಚರಣೆಯನ್ನು ರಕ್ತದಾನ ಶಿಬಿರದ ಮೂಲಕ ಅರ್ಥಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.
ಲಿಂಗರಾಜ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ, ಆರ್‌ಎಲ್ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಡಾ.ಜ್ಯೋತಿ ಕವಳೇಕರ, ಸುಬೇದಾರ ಮೇಜರ್ ಕಲ್ಲಪ್ಪಾ ಪಾಟೀಲ, ಹರದೇವಸಿಂಗ್, ಕೆಎಲ್‌ಇ ಆಸ್ಪತ್ರೆಯ ಬ್ಲಡ್ ಬ್ಯಾಂಕಿನ್ ಡಾ.ಮಾನೆ, ಡಾ. ಆನಂದ, ಲಿಂಗರಾಜ ಕಾಲೇಜಿನ ಎನ್‌ಸಿಸಿ ಅಧಿಕಾರಿಗಳಾದ ಲೆಫ್ಟನಂಟ್ ಡಾ.ಮಹೇಶ ಗುರನಗೌಡರ, ಕ್ಯಾಫ್ಟನ್ ಡಾ.ಶಿವಾನಂದ ಬುಲಬುಲೆ, ಎನ್‌ಎಸ್‌ಎಸ್ ಘಟಕದ ಪ್ರಶಾಂತ ಕೊಣ್ಣೂರ, ರೆಡ್ ಕ್ರಾಸ್ ಅಧಿಕಾರಿ ಪ್ರೊ. ಸುಮಿತ್ ಮೂಡಲಗಿ ಉಪಸ್ಥಿತರಿದ್ದರು.
ಎರಡು ಬಟಾಲಿಯನ್ ಕಮಾಂಡಿಂಗ್ ಆಫೀಸರ್‌ಗಳು ರಕ್ತದಾನವನ್ನು ಮಾಡುವುದರ ಮೂಲಕ ಎನ್‌ಸಿಸಿ ಕೆಡೆಟ್‌ಗಳಿಗೆ ಸ್ಫೂರ್ತಿತುಂಬಿದರು. ಸುಮಾರು ೪೫ಕ್ಕೂ ಹೆಚ್ಚು ಎನ್‌ಸಿಸಿ ಕೆಡೆಟ್‌ಗಳು ರಕ್ತದಾನವನ್ನು ನೀಡುವ ಮೂಲಕ ಎನ್‌ಸಿಸಿ ದಿನಾಚರಣೆಯನ್ನು ಅರ್ಥಪೂರ್ಣಗೊಳಿಸಿದರು.