ಬೆಳಗಾವಿ-೨೫: ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿರುವ ಐತಿಹಾಸಿಕ ಧಾರ್ಮಿಕ ಕೇಂದ್ರ ಸುಳೆಬಾವಿಯಲ್ಲಿ ಬಹು ಎತ್ತರದ ಶಿವಾಜಿ ಮಹಾರಾಜರ ಮೂರ್ತಿಯನ್ನು ಜಾತ್ರೆಯ ಮುನ್ನ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಸೋಮವಾರ ಸಂಜೆ ಸುಳೆಬಾವಿಯಲ್ಲಿ ಶಿವಾಜಿ ಮಹಾರಾಜರ ಮೂರ್ತಿ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಚಿವರು, ಎಲ್ಲರ ಸಹಕಾರ, ಆಶೀರ್ವಾದದಿಂದ ಇಂತಹ ಒಳ್ಳೆಯ ಕೆಲಸಗಳು ಆಗುತ್ತಿವೆ. ಎಲ್ಲ ಗುರುಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾತ್ರೆಯೊಳಗೆ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು; ಎಲ್ಲ ಗಣ್ಯರ ಸಮ್ಮುಖದಲ್ಲಿ ಉದ್ಘಾಟನೆ ಆಗಬೇಕು ಎಂದರು.
ಶಿವಾಜಿ ಮಹಾರಾಜರ ಮೂರ್ತಿ ನಿರ್ಮಾಣದ ವೇಳೆ ಎಲ್ಲ ಗುರುಹಿರಿಯರ ಮತ್ತು ಶಿವಾಜಿ ಮಹಾರಾಜರ ಕಮಿಟಿಯ ಎಲ್ಲ ಸದಸ್ಯರ ಸಲಹೆ, ಸಹಕಾರದಿಂದ ನಿರ್ಮಾಣ ಮಾಡಬೇಕು ಎಂದು ಇದೇ ವೇಳೆ ಸಚಿವರು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಇಡೀ ಸುಳೆಬಾವಿ ಊರನ್ನು ಅಭಿವೃದ್ದಿಪಡಿಸಬೇಕಾಗಿದೆ. ಅಮ್ಮನ ಆಶೀರ್ವಾದಿಂದ ಕೈಯಲ್ಲಿ ಶಕ್ತಿ ಇದೆ. ಈ ಕ್ಷೇತ್ರವನ್ನು ಜಾತ್ರೆಯೊಳಗೆ ಅಭಿವೃದ್ಧಿಪಡಿಸಲಾಗುವುದು. ಈ ಬಾರಿಯೂ ಅತ್ಯಂತ ವಿಜೃಂಭಣೆಯಿಂದ ಜಾತ್ರೆಯನ್ನು ಮಾಡಲು 3 ಕೋಟಿ ರೂಪಾಯಿ ಅನುದಾನವನ್ನು ಸರ್ಕಾರ ನೀಡಿದೆ. ಪ್ರತಿ ಸಲವೂ ಜಾತ್ರೆಗೆಂದು ಅನುದಾನ ತರಲು ನಾನು ಪ್ರಯತ್ನಿಸುತ್ತಿದ್ದೇನೆ. ಆದರೆ, ಈ ಬಾರಿ ಐದು ಊರಿನ ಜಾತ್ರೆ ನಿಮಿತ್ತ ಸಹೋದರ ಚನ್ನರಾಜ ಅನುದಾನವನ್ನು ತಂದಿದ್ದಾರೆ. ಬಹಳ ಕಷ್ಟಪಟ್ಟು, ಎಲ್ಲವನ್ನೂ ಮುಖ್ಯಮಂತ್ರಿಯವರಿಗೆ ಹೇಳಿ; ಐದು ಊರಿನ ಜಾತ್ರೆಯೆಂದು ಅನುದಾನವನ್ನು ತಂದಿದ್ದು; ನನಗೆ ಸಹಕಾರ ನೀಡಿದ್ದಾರೆಂದು ಸಚಿವರು ಹೇಳಿದರು.
ಐದು ಊರಿನ ಜಾತ್ರೆಯನ್ನು ಎಲ್ಲರೂ ಸೇರಿಕೊಂಡು ಪಕ್ಷಾತೀತವಾಗಿ, ಜಾತ್ಯಾತೀತವಾಗಿ, ಅಮ್ಮನ ಆಶೀರ್ವಾದದಿಂದ ಅತ್ಯಂತ ವಿಜೃಂಭಣೆಯಿಂದ ಮಾಡೋಣ ಎಂದು ಇದೇ ವೇಳೆ ಸಚಿವರು ತಿಳಿಸಿದರು.
ಈ ವೇಳೆ, ವಿಧಾನಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ,
ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಶ ಸುಗನೆಣ್ಣವರ, ದತ್ತಾ ಬಂಡಿಗಣಿ, ನಾನಪ್ಪ ಪಾರ್ವತಿ, ಮಂಜುನಾಥ ಪೂಜೇರಿ, ಸಂಭಾಜಿ ಯಮೂಜಿ, ದೇವಣ್ಣ ಭಂಗೆಣ್ಣವರ, ಬಸವರಾಜ ಮ್ಯಾಗೋಟಿ, ಶಂಕರಗೌಡ ಪಾಟೀಲ, ಪ್ರಕಾಶ ಕಡ್ಯಾಗೋಳ, ಸುರೇಶ ಕಡಬುಗೋಳ, ನಾಗೇಶ್ ದೇಸಾಯಿ, ಗಜಾನನ ಕಣಬರ್ಕರ್, ಪಿಂಟು ಮಲ್ಲವ್ವಗೋಳ, ಅಶೋಕ್ ಯರಜರ್ವಿ, ಜೀವನಪ್ಪ ಶಿಂಧೆ, ಅಪ್ಪಾಜಿ ಪಾರ್ವತಿ ಸೇರಿದಂತೆ ಗ್ರಾಮದ ಪ್ರಮುಖರು, ಸುತ್ತಮತ್ತಲಿನ ಗ್ರಾಮಸ್ಥರು, ಪಕ್ಷದ ಅನೇಕ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.