23/12/2024
IMG-20241107-WA0002

ಬೆಳಗಾವಿ-೦೭: ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಕಳೆದ 18 ವರ್ಷಗಳಿಂದ ನಡೆಸುತ್ತಿರುವ ಭಗವದ್ಗೀತೆ ಅಭಿಯಾನ ಒಂದು ಪವಿತ್ರ ಕಾರ್ಯವಾಗಿದ್ದು, ಇದರಿಂದ ಭಾರತಕ್ಕೆ ಅಂತ್ಯ ಇಲ್ಲ ಎನ್ನುವುದು ಖಾತ್ರಿಯಾಗಿದೆ ಎಂದು ರಾಮಕೃಷ್ಣ ಮಿಶನ್ ಆಶ್ರಮದ ಸ್ವಾಮೀಜಿ ಶ್ರೀ ಮೋಕ್ಷಾತ್ಮಾನಂದ ಮಹಾರಾಜ ಅಭಿಪ್ರಾಯಪಟ್ಟಿದ್ದಾರೆ.

ಭಗವದ್ಗೀತೆ ಅಭಿಯಾನದ ಬೆಳಗಾವಿ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಗುರುವಾರ ಇಲ್ಲಿಯ ಸಂತ ಮೀರಾ ಶಾಲೆಯ ಮಾಧವ ಶಾನಭಾಗ ಸಭಾಭವನದಲ್ಲಿ ಉದ್ಘಾಟಿಸಿ ಅವರು ಆಶಿರ್ವಚನ ನೀಡುತ್ತಿದ್ದರು.
ಭಗವಂತನ ಮೂರು ಸೃಷ್ಟಿಗಳಲ್ಲಿ ಭಗವದ್ಗೀತೆಯೂ ಒಂದು. ಪ್ರಪಂಚ, ಮನುಷ್ಯ ಮತ್ತು ಭಗವದ್ಗೀತೆ ಇವು ಅದ್ಭುತ ಸೃಷ್ಟಿಗಳು. ಭಗವಂತ ಇರುವುದಕ್ಕೆ ಈ ಪ್ರಪಂಚವೇ ಸಾಕ್ಷಿ ಎಂದು ಅವರು ತಿಳಿಸಿದರು.
ಮೊಬೈಲ್ ಇಂದು ಮನುಷ್ಯನನ್ನು ನಾಶ ಮಾಡುತ್ತಿದೆ. ಅಮೇರಿಕಾದಲ್ಲಿ ಗ್ಯಾಂಬ್ಲಿಂಗ್ ತತ್ವದ ಮೇಲೆ ಮೊಬೈಲ್ ಕಂಡು ಹಿಡಿಲಾಗಿದೆ. ಒಮ್ಮೆ ಬಳಸಲು ಆರಂಭಿಸಿದರೆ ಹೊರಬರುವುದೇ ಕಷ್ಟವಾಗಿದೆ. ಹಾಗಾಗಿ ಸಾಧ್ಯವಾದಷ್ಟು ಅದರಿಂದ ದೂರವಿರಬೇಕು. ಮಕ್ಕಳು ಪದವಿ ಮುಗಿಯುವವರೆಗೆ ಮನರಂಜನೆಗಾಗಿ ಮೊಬೈಲ್ ಬಳಸುವುದನ್ನು ನಿಲ್ಲಿಸಬೇಕು. ನಿತ್ಯ ಧ್ಯಾ ನ ಮಾಡುವ ಮೂಲಕ ಮಕ್ಕಳು ತಮ್ಮ ಸರ್ವತೋಮುಖ ಬೆಳವಣಿಗೆ ಮಾಡಿಕೊಳ್ಳಬೇಕು ಎಂದು ಸ್ವಾಮೀಜಿ ಕಿವಿ ಮಾತು ಹೇಳಿದರು.

ಹಿರಿಯ ಸಾಹಿತಿ ಡಾ.ಬಸವರಾಜ ಜಗಜಂಪಿ ಮಾತನಾಡಿ, ಭಗವದ್ಗೀತೆ ಒಂದು ಅಪೂರ್ವ ಗ್ರಂಥ. ನಮ್ಮ ತಂದೆ- ತಾಯಿ ಮಾಡಿಟ್ಟಿರುವ ಆಸ್ತಿಗಳು ಚರ ಆಸ್ತಿಗಳಾದರೆ ಭಗವದ್ಗೀತೆ ಮತ್ತು ಭಗವದ್ಗಾತೆ ಅಭಿಯಾನ ನಮ್ಮ ಮಕ್ಕಳಿಗಾಗಿ ಮಾಡುತ್ತಿರುವ ಸ್ಥಿರ ಆಸ್ತಿ, ಇದು ಎಂದೆಂದೂ ನಾಶವಾಗದು ಎಂದು ಬಣ್ಣಿಸಿದರು.

ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆ ಪವಿತ್ರ ಗ್ರಂಥ, ಎಲ್ಲರನ್ನೂ ಮುನ್ನಡೆಸುವ ಶಕ್ತಿ ಅದಕ್ಕಿದೆ. ಅತ್ಯಂತ ಉದಾತ್ತ ವಿಚಾರಗಳು ಅದರಲ್ಲಿವೆ. ದುಃಖದಲ್ಲಿದ್ದವರಿಗೆ ಸಾಂತ್ವನ ಹೇಳುವ, ಕಷ್ಟದಲ್ಲಿದ್ದವರಿಗೆ ಶಕ್ತಿ ತುಂಬುವ ಸಾಮರ್ಥ್ಯ ಭಗವದ್ಗೀತೆಗಿದೆ. ಎಲ್ಲರಿಗೂ ಮಾರ್ಗದರ್ಶನ ನೀಡುವ ಮೌಲ್ಯಗಳ ಖಜಾನೆ ಅದು ಎಂದು ಅವರು ಹೇಳಿದರು.

ಇಂದು ಮೊಬೈಲ್ ನಮ್ಮನ್ನು ಆವರಿಸಿದೆ. ಅದರಿಂದ ನಮ್ಮ ವ್ಯಕ್ತಿತ್ವ ಕುಬ್ಜವಾಗುತ್ತಿದೆ. ಸಕಾರಾತ್ಮಕ ಚಿಂತನೆ ಮೂಲಕ, ಇರುವ ಭಾಗ್ಯವನ್ನು ನೆನೆದು ವ್ಯಕ್ತಿಗಳನ್ನು ರೂಪಿಸುವ ಮೂಲಕ ರಾಷ್ಟ್ರ ಕಟ್ಟಬೇಕಿದೆ. ಅದ್ಭುತ ಚಿಂತನೆ ಮೂಲಕ ನಡೆಯುವ ಇಂತಹ ಅಭಿಯಾನದಿಂದ ಅದು ಸಾಧ್ಯವಿದೆ. ಎಲ್ಲ ಆಯಾಮಗಳಿಂದ ಒಳ್ಳೆಯ ವಿಚಾರಗಳು ಬರಲಿ, ಪ್ರಯತ್ನ ಮಾಡು, ಫಲ ಬಯಸಬೇಡ ಎನ್ನುವ ಸಂದೇಶಗಳನ್ನು ಭಗವದ್ಗೀತೆಯಲ್ಲಿ ನೀಡಲಾಗಿದೆ. ಜಯ ಅಪಜಯ, ಲಾಭ ನಷ್ಟ ಎಲ್ಲವನ್ನೂ ಮೀರಿ ಕೆಲಸ ಮಾಡಬೇಕು ಎಂದು ಜಗಜಂಪಿ ಸಲಹೆ ನೀಡಿದರು.

ಖ್ಯಾತ ಉದ್ಯಮಿ ಗೋಪಾಲ ಜಿನಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಗವದ್ಗೀತೆ ಅಭಿಯಾನ ಸಮಿತಿಯ ಕಾರ್ಯಾಧ್ಯಕ್ಷ ಪರಮೇಶ್ವರ ಹೆಗಡೆ ಸ್ವಾಗತಿಸಿದರು, ಸಂಚಾಲಕ
ಸುಬ್ರಹ್ಮಣ್ಯ ಭಟ್ ನಿರೂಪಿಸಿದರು. ಕಾರ್ಯದರ್ಶಿ ಎಂ.ಕೆ.ಹೆಗಡೆ ವಂದಿಸಿದರು. ಆರಂಭದಲ್ಲಿ ವಿದ್ಯಾರ್ಥಿಗಳಿಂದ ಸರಸ್ವತಿ ವಂದನಾ, ಮಾತೆಯರಿಂದ ಧ್ಯಾನ ಶ್ಲೋಕ ಮತ್ತು ಭಗವದ್ಗೀತೆಯ 9ನೇ ಅಧ್ಯಾಯದ ಪಠಣ ನಡೆಯಿತು.

error: Content is protected !!