ಬೆಳಗಾವಿ-11: ಸಮಾಜದ ಕಲ್ಯಾಣಕ್ಕೆ ಶಿಕ್ಷಣವೇ ಮೂಲವೆಂದು ತಿಳಿದ ಲಿಂಗರಾಜರು ತಮ್ಮ ಇಡೀ ಸಂಪತ್ತನ್ನು ಶಿಕ್ಷಣಕ್ಕೆ ಮೀಸಲಾಗಿಟ್ಟಿದ್ದು ಭಾರತದ ಚರಿತ್ರೆಯಲ್ಲಿಯೇ ಅಪರೂಪವೆನಿಸಿದೆ. ಸಮಾಜದ ಸುಖವೇ ತನ್ನ ಸುಖವೆಂದು ಎಲ್ಲವನ್ನೂ ಧಾರೆ ಎರೆದ ಲಿಂಗರಾಜರು ಇಂದಿಗೂ ಅಮರರೆನಿಸಿದ್ದಾರೆ ಎಂದು ಸಾಹಿತಿ ಡಾ.ಗುರುಪಾದ ಮರಿಗುದ್ದಿ ಹೇಳಿದರು.
ಅವರು ಲಿಂಗರಾಜ ಕಾಲೇಜಿನಲ್ಲಿ ಬೆಳಗಾವಿಯ ಎಲ್ಲ ಕೆಎಲ್‌ಇ ಅಂಗಸಂಸ್ಥೆಯ ಆಶ್ರಯದಲ್ಲಿ ಜರುಗಿದ ಸಿರಸಂಗಿ ಲಿಂಗರಾಜರ ೧೬೩ನೇ ಜಯಂತಿ ಉತ್ಸವದಲ್ಲಿ ಅತಿಥಿಗಳಾಗಿ ಮಾತನಾಡಿದರು.
ಲಿಂಗರಾಜರು ಸಮಾಜದ ಉದಾತ್ತ ಉದ್ದೇಶಕ್ಕಾಗಿ ಮಹಾದಾನ ನೀಡಿ ಔದರ‍್ಯವನ್ನು ಮೆರೆದಿದ್ದಾರೆ. ಅವರ ಬದುಕು ಸುಖದ ಸುಪತ್ತಿಕೆಯಾಗಿರಲಿಲ್ಲ. ಕೌಟುಂಬಿಕವಾಗಿ ಬವಣೆಗಳಿಂದ ನೊಂದುಕೊಂಡರು. ನೂರೆಂಟು ಕಷ್ಟಗಳನ್ನು ಎದುರಿಸಿದರು. ಜೀವನದ ಕೊನೆಗೆ ತಮ್ಮ ಸಮಸ್ತ ಚಿರಾಸ್ಥಿಯನ್ನು ಸಮಾಜದ ಮಕ್ಕಳ ಕಲ್ಯಾಣಕ್ಕಾಗಿ ಸಮರ್ಪಿಸಿದರು. ಕೃಷಿ, ನೀರಾವರಿ ಮೊದಲ್ಗೊಂಡು ಹಲವಾರು ಮೌಲಿಕ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅಂತಹ ಪ್ರಾಥಃಸ್ಮರಣೀಯರು ಇಂದಿನ ಯುವ ಪೀಳಿಗೆಗೆ ಅನುಕರಣೀಯರು. ಇಂದು ಕೆಎಲ್‌ಇಯ ಎಲ್ಲ ಅಂಗಸAಸ್ಥೆಗಳಲ್ಲಿ ಅವರ ಜಯಂತಿಯನ್ನು ಆಚರಿಸಿ ಮಕ್ಕಳಲ್ಲಿ ಅವರ ದಾನದ, ತ್ಯಾಗದ ಕುರಿತು ಹೇಳುತ್ತಿರುವುದು ಅಭಿನಂದನೀಯವೆನಿಸಿದೆ ಎಂದರು.
ದಿವ್ಯ ಸಾನ್ನಿಧ್ಯವಹಿಸಿದ್ದ ಧಾರವಾಡ ಮುರಘಾಮಠದ ಪೂಜ್ಯ ಡಾ.ಮಲ್ಲಿಕಾರ್ಜುನ ಮಹಾಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ, ಲಿಂಗರಾಜರಂತಹ ಪುಣ್ಯಾತ್ಮರನ್ನು ಸ್ಮರಿಸುವುದು ನಿಜಮುಕ್ತಿ ಇದ್ದಂತೆ. ಅವರ ಮರವೇ ಅಸ್ತಮಾನ. ಸಮಸ್ತ ನಾಡಿಗೆ ಅವರು ನೀಡಿದ ಕೊಡುಗೆ ಅನನ್ಯ ಅನುಪಮ. ಅವರಂತಹ ದಾನಿಗಳು ಹಿಂದೆಯೂ ಇರಲಿಲ್ಲ, ಇಂದಿಗೂ ಹುಟ್ಟಿಲ್ಲವೆನ್ನಬೇಕು. ಬದುಕಿನುದ್ದಕ್ಕೂ ಅನೇಕ ಜನೋಪಯೋಗಿ ಕಾರ್ಯಗಳನ್ನು ನಿರ್ವಹಿಸಿದರು. ಲಿಂಗರಾಜರ ತ್ಯಾಗದಲ್ಲಿ ಒಂದು ವೈಶಿಷ್ಟö್ಯವುಂಟು, ಅವರು ಸ್ವಾರ್ಥವನ್ನು ಸಂಪೂರ್ಣವಾಗಿ ಮರೆತು ತಮ್ಮ ಇಡಿಯ ಆಸ್ತಿಯನ್ನು ಸಮಾಜದ ಶಿಕ್ಷಣಕ್ಕಾಗಿ ಧಾರೆಯೆರೆದರು. ಅಂತಹ ಮಹಾತ್ಮರನ್ನು ಇಂದಿನ ಯುವಪೀಳಿಗೆ ತಿಳಿದುಕೊಳ್ಳುವುದು ಅಗತ್ಯವಿದೆ ಎಂದು ನುಡಿದರು.
ಕೆಎಲ್‌ಇ ಉಪಾಧ್ಯಕ್ಷರಾದ ಬಸವರಾಜ ತಟವಟಿಯವರು ಅಧ್ಯಕ್ಷೀಯ ನುಡಿಗಳನ್ನಾಡಿ ಜನತೆಯ ಹಿತಕ್ಕಾಗಿ ಬದುಕಿದ ಮಹಾಚೇತನ ಸಿರಸಂಗಿ ಲಿಂಗರಾಜರು. ಸಮಾಜದ ಪ್ರತಿಯೊಬ್ಬರೂ ಸುಶಿಕ್ಷಿತರಾಗಬೇಕು, ಮುಂದೆ ಬರಬೇಕು, ಬದುಕಿನ ಕಷ್ಟಗಳನ್ನು ತೊಡೆದುಹಾಕಬೇಕೆಂಬ ಸಂಕಲ್ಪದೊAದಿಗೆ ಶಿಕ್ಷಣ ರಂಗಕ್ಕೆ ಆರ್ಥಿಕ ಮತ್ತು ಜ್ಞಾನದ ಶಕ್ತಿಯನ್ನು ತುಂಬಿದರು. ವ್ಯಕ್ತಿಯೊಬ್ಬನಿಗೆ ಕೊಡುವ ದಾನಕ್ಕಿಂತಲೂ ಶಿಕ್ಷಣ ಸಂಘ ಸಂಸ್ಥೆಗಳಿಗೆ ಕೊಡುವ ದಾನ ಶ್ರೇಷ್ಠವೆಂದು ತಿಳಿದರು. ಸಮಾಜಕ್ಕೆ ಪ್ರೇರಕರಾದರು. ಅವರ ಇಚ್ಛೆಯಂತೆ ಪ್ರಾರಂಭವಾದ `ಸಿರಸಂಗಿ ನವಲಗುಂದ ಟ್ರಸ್ಟ್’ ಸಾವಿರಾರೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಧನಸಹಾಯ ಇಂದಿಗೂ ನೀಡುತ್ತಿದೆ. ಇಂತಹ ತ್ಯಾಗವೀರ ಸಿರಸಂಗಿ ಲಿಂಗರಾಜರ ವ್ಯಕ್ತಿತ್ವಕ್ಕೆ ಮಾರುಹೋದ ನಮ್ಮ ಕೆಎಲ್‌ಇ ಸಂಸ್ಥೆಯ ಏಳು ಜನ ಶಿಕ್ಷಕರು ಅವರ ಆದರ್ಶವನ್ನೇ ಇಟ್ಟುಕೊಂಡು ೧೯೧೬ ರಲ್ಲಿ ಕೆಎಲ್‌ಇ ಸಂಸ್ಥೆಯನ್ನು ಹುಟ್ಟುಹಾಕಿದರು. ೧೯೩೩ರಲ್ಲಿ ಪ್ರಥಮ ಪದವಿ ಕಾಲೇಜಿಗೆ ಲಿಂಗರಾಜರ ಮೇಲಿನ ಅಭಿಮಾನದಿಂದಾಗಿ ‘ಲಿಂಗರಾಜ ಮಹಾವಿದ್ಯಾಲಯ’ವೆಂದು ನಾಮಕರಣ ಮಾಡಿದರು ಎಂದು ಹೇಳಿದರು.
ಡಾ.ಎಚ್.ಎಂ. ಚೆನ್ನಪ್ಪಗೋಳ ವಂದಿಸಿದರು. ಡಾ.ಮಹೇಶ ಗುರನಗೌಡರ ಹಾಗೂ ಪ್ರೊ.ಸಿದ್ಧನಗೌಡ ಪಾಟೀಲ ನಿರೂಪಿಸಿದರು. ಪ್ರಾಚಾರ್ಯ ಡಾ.ಎಚ್.ಎಸ್. ಮೇಲಿನಮನಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಎಫ್.ವ್ಹಿ.ಮಾನ್ವಿ, ಶ್ರೀಮತಿ ಸುಧಾ ಉಪ್ಪಿನ, ರಾಜಶ್ರೀ ಸಂಬರಗಿಮಠ ಆಗಮಿಸಿದ್ದರು. ಮಾಹೇಶ್ವರ ಅಂಧ ಮಕ್ಕಳ ಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಜಯಂತಿ ಉತ್ಸವದ ನಿಮಿತ್ತ ಡಾ.ಪ್ರಭಾಕರ ಕೋರೆ ರಕ್ತಭಂಡಾರ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ೬೦ ಯುನಿಟ್ ರಕ್ತವನ್ನು ದಾನಿಗಳಿಂದ ಸಂಗ್ರಹಿಸಲಾಯಿತು.