23/12/2024
IMG-20241016-WA0002

ಬೆಳಗಾವಿ-೧೬: ಸರ್ವೋಚ್ಚ ನ್ಯಾಯಾಲಯದ ಏಳು ನ್ಯಾಯಮೂರ್ತಿಗಳ ಪೂರ್ಣ ಪೀಠವು ಎಸ್.ಸಿ.ಎಸ್.ಟಿ ಮೀಸಲಾತಿಯಲ್ಲಿ ಒಳಮೀಸಲಾತಿ ನೀಡುವುದು ರಾಜ್ಯ ಸರಕಾರಕ್ಕೆ ಹಕ್ಕಿದೆ ಎಂದು ತೀರ್ಪು ನೀಡಿದೆ. ಸುಪ್ರೀಂ ತೀರ್ಪಿನಂತೆ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಆಗ್ರಹಿಸಿದೆ.

ಬುಧವಾರ ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಲಾಯಿತು. ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಮೀಸಲಾತಿಯನ್ನು ಪರಿಣಾಮಕಾರಿಗೊಳಿಸುವ ಹಲವು ಸಾಧ್ಯತೆಗಳಲ್ಲಿ ಒಳಮೀಸಲಾತಿಯು ಒಂದು, ಒಳಮೀಸಲಾತಿಗಾಗಿ ಕರ್ನಾಟಕದಲ್ಲಿ ಮೂರು ದಶಕಗಳ ನಿರಂತರ ಹೋರಾಟ ನಡೆದಿದೆ. ಒಳಮೀಸಲಾತಿ ಹೋರಾಟದ ಬಗ್ಗೆ ಪ್ರಸ್ತುತ ಸರಕಾರವು ಕೇವಲ ಸಹಾನುಭೂತಿ ತೋರಿಸುತ್ತದೆ ನಿಜ. ಸಹಾನಬೂತಿ ಕ್ರಿಯಾತ್ಮಕ ರೂಪ ಪಡೆಯದಿದ್ದರೆ ಅಪ್ರಯೋಜಕ. ಪರಿಶಿಷ್ಟ ಜಾತಿಗಳಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅತಿ ಹಿಂದುಳಿದಿರುವ ಜಾತಿಗಳ ಅಭಿವೃದ್ಧಿಯ ಕಲ್ಯಾಣದ ಸದುದ್ದೇಶದಿಂದ ಆಯಾ ಜಾತಿಗಳಿಗೆ ಸೇರಿದವರಿಗೆ ಮೀಸಲಾತಿ ಸೌಲಭ್ಯ ತಲುಪಲು ಒಳಮಿಸಲಾತಿ ನೀಡುವ ಸಾಂವಿಧಾನಿಕ ಅಧಿಕಾರವು ಆಯಾ ರಾಜ್ಯಗಳಿಗಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಪೂರ್ಣ ಪೀಠವು ತೀರ್ಪು ನೀಡಿದೆ. ಸಂವಿಧಾನ ಪರಿಚ್ಛೇದ 341ನೇ ವಿಧಿಯ ತಿದ್ದುಪಡಿಯ ಅವಶ್ಯಕತೆ ಇರುವದಿಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿದೆ ಎಂದು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಸದಸ್ಯರು ಹೇಳಿದರು.

ಈ ಸಂದರ್ಭದಲ್ಲಿ ರಾಜೇಂದ್ರ ಐಹೊಳೆ,ಎನ್,ಪ್ರಶಾಂತರಾವ್,ಅನಂತಕುಮಾರ ಬ್ಯಾಕುಡ್,ಉದಯ ರೆಡ್ಡಿ, ಹಾಗೂ ವಿನಯನಿಧಿ ಕಮಾಲ ಸೇರಿದಂತೆ ಹಲವಾರು ಪ್ರಮುಖರು ಬೃಹತ್  ಪ್ರತಿಭಟನೆಯಲ್ಲಿ  ಪಾಲ್ಗೊಂಡಿದ್ದರು.

error: Content is protected !!