ಕಾವ್ಯವೆನ್ನುವದೊಂದು ಬೆರಗು, ನಮ್ಮ ಜೀವನದ ಉಸಿರು
ಬೆಳಗಾವಿ-೦೯:ಕಾವ್ಯವೆನ್ನುವದೊಂದು ಬೆರಗು. ನಮ್ಮ ಜೀವನದ ಉಸಿರೂ ಹೌದು. ಹಾಡು, ಕಾವ್ಯವಿಲ್ಲದೇ ಮನುಷ್ಯ ಬದುಕಲಾರ. ಕಾವ್ಯವೆನ್ನುವುದು ಅಂತರಂಗದ ಶೋಧ; ನಾವು ಹುಡುಕುವಂತಹದ್ದು. ನಮ್ಮ ಅನುಭವದ ತಿರುಳು. ಈ ತಿರುಳು ಹರಳಾದಾಗ ನಮಗೂ ಆನಂದ, ಓದಿದವರಿಗೂ ಆನಂದ ಕೇಳಿದವರಿಗೂ ಆನಂದವಾಗುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಡಾ. ಬಸವರಾಜ ಜಗಜಂಪಿಯವರು ಹೇಳಿದರು.
ಹೊರಮಂಟಪದಲ್ಲಿ ೯೭ ನೇ ನಾಡಹಬ್ಬ ಉತ್ಸವ ಸಮಿತಿಯವರು ಐದು ದಿನಗಳ ಕಾರ್ಯಕ್ರಮದ ಕೊನೆ ದಿನವಾದ ಇಂದು ದಿ. ೭ ಸೋಮವಾರದಂದು ಕವಿಗೋಷ್ಠಿ ಮತ್ತು ಸನ್ಮಾನ ಸಮಾರಂಭವನ್ನು ಹಮ್ಮಿಕೊಂಡಿದ್ದರು. ಕವಿಗೋಷ್ಠಿಯನ್ನು ಉದ್ಘಾಟಿಸಿದ ಡಾ. ಜಗಜಂಪಿಯವರು ಮೇಲಿನಂತೆ ಅಭಿಪ್ರಾಯಪಟ್ಟರು.
ಮುಂದೆ ಮಾತನಾಡುತ್ತ ಡಾ. ಜಗಜಂಪಿಯವರು ಕಾವ್ಯವನ್ನು ಏಕೆ ಬರೆಯಬೇಕು ಎಂಬ ಪ್ರಶ್ನೆಗೆ ಪಂಪ ಹೇಳಿದಂತೆ ಕಾವ್ಯವನ್ನು ಬರೆಯುವುದು ಯಶಸ್ಸಿಗಾಗಿ, ಕೀರ್ತಿಗಾಗಿ, ಹಣಕ್ಕಾಗಿ, ಆನಂದಕ್ಕಾಗಿ, ಸಂತೋಷಕ್ಕಾಗಿ ಆದರೆ ಇದು ಎಲ್ಲರಿಗೂ ಸಿಗುವಂತಹದ್ದಲ್ಲ. ಅದರ ಹಿಂದೆ ಸಾಕಷ್ಟು ಓದು, ಪರಿಶ್ರಮವಿದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ವಿದ್ಯಾವತಿ ಭಜಂತ್ರಿಯವರು ಸಾಹಿತ್ಯ, ಸಂಗೀತ, ನೃತ್ಯ, ಕಲೆಗಳನ್ನು ಉಳಿಸುವಂತಹ ಬೆಳೆಸುವಂತಹ ಕೆಲಸವನ್ನು ನಾಡಹಬ್ಬ ಉತ್ಸವ ಸಮಿತಿ ಮಾಡುತ್ತಿದೆ. ವಿಶೇಷವಾಗಿ ಯುವ ಜನತೆಗೆ ಸಂಸ್ಕಾರವನ್ನು ಕಲಿಸುತ್ತಿದೆ ಅವರನ್ನು ಪ್ರೋತ್ಸಾಹಿಸುತ್ತಿದೆ ಎಂದು ಹೇಳಿದರು.
ಕವಿಗೋಷ್ಠಿ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಎಚ್. ಆಯ್. ತಿಮ್ಮಾಪುರ ಅವರು ಮಾತನಾಡುತ್ತ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳು ಭೂಮಿ, ಹೆಣ್ಣು, ಭಾಷೆ, ಸಂಸ್ಕೃತಿ, ತಾಯಿ ಹೀಗೆ ಬೇರೆ ಬೇರೆ ವಿಷಯಗಳನ್ನಿಟ್ಟುಕೊಂಡು ಕವಿತೆಗಳನ್ನು ಬರೆದಿದ್ದಾರೆ. ಆಯ್ದುಕೊಂಡ ಕವಿತೆಗಳ ವಸ್ತುಗಳು ಚೆನ್ನಾಗಿತ್ತು ಆದರೆ ಕವಿಗಳು ಭಾಷೆಯತ್ತ ಹೆಚ್ಚಿನ ಗಮನ ಕೊಡಬೇಕು ಎಂದು ಹೇಳಿದರು.
ಕವಿಗೋಷ್ಠಿಯಲ್ಲಿ ಡಾ. ದಯಾನಂದ ಧನವಂತ, ಸುಮಾ ಕಿತ್ತೂರ, ಮಾಲಾ ಅಕ್ಕಿಶೆಟ್ಟಿ, ಜ್ಯೋತಿ ಬದಾಮಿ, ಇಂದಿರಾ ಹೋಳಕರ, ಹೇಮಾ ಸೊನೋಳಿ, ಅನ್ನಪೂರ್ಣಾ ಹಿರೇಮಠ, ಮಮತಾ ಶಂಕರ, ನದಿಮ ಸನದಿ, ಗುರುಸಿದ್ದಯ್ಯ ಹಿರೇಮಠ, ಆಶಾ ಯಮಕನಮರಡಿ, ಸುಧಾ ಪಾಟೀಲ, ಇಂದಿರಾ ಮೋಟೆಬೆನ್ನೂರ, ಬಸವರಾಜ ಗಾರ್ಗಿ ಮುಂತಾದ ಕವಿಗಳು ಸ್ವರಚಿತ ಕವನಗಳನ್ನು ವಾಚಿಸಿದರು.
ಸಂಗೀತ, ಸಾಹಿತ್ಯ, ನಾಟಕ, ಸಂಘಟನೆ ಮುಂತಾದ ಕ್ಷೇತ್ರಗಳಲ್ಲಿ ವಿಶೇಷ ಸೇವೆ ಸಲ್ಲಿಸಿದ ಶ್ರೀಮತಿ ನೀಲಗಂಗಾ ಚರಂತಿಮಠ, ಶ್ರೀಮತಿ ಪ್ರಿಯಾ ಪುರಾಣ ಕ, ಮಧುಕರ ಗುಂಡೇನಟ್ಟಿ, ಶಿರೀಷ ಜೋಶಿ, ಶ್ರೀಮತಿ ನಿರ್ಮಲಾ ಪ್ರಕಾಶ, ಶ್ರೀ ಬಸವರಾಜ ಸುಣಗಾರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ಶಿರೀಷ ಜೋಶಿ ಮಾತನಾಡಿದರು.
ಸುನಂದಾ ಮುಳೆ ಹಾಡಿದ ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಡಾ. ಎಚ್ ಬಿ. ರಾಜಶೇಖರ ಅಧ್ಯಕ್ಷತೆಯನ್ನು ವಹಿಸಿದ್ದರು. ಸುಮಾ ಕಿತ್ತೂರ ಸ್ವಾಗತಿಸಿದರು. ಸುನಿತಾ ದೇಸಾಯಿ, ಬಸವರಾಜ ಗಾರ್ಗಿ ನಿರೂಪಿಸಿದರು. ಡಾ. ಸಿ. ಕೆ. ಜೋರಾಪೂರ ವಂದಿಸಿದರು. ಬೆಳಗಾವಿಯ ಪುಷ್ಪಕಲಾ ನೃತ್ಯಾಲಯದವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.