23/12/2024
collage_4_0-1728314709672

ಬೆಳಗಾವಿ-೦೭ : ಒಕ್ಕೂಟದ ಬೇಡಿಕೆಗಳು ಈಡೇರುವವರೆಗೂ ಜಿಲ್ಲಾ ಪಂಚಾಯತಿ ಮುಂದೆ ಧರಣಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಎಲ್ಲಾ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ವತಿಯಿಂದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅ. 04 ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದುವರೆಗೂ ಇಲಾಖೆ ಹಾಗೂ ಸರ್ಕಾರದಿಂದ ಯಾವುದೇ ಬೇಡಿಕೆಗಳಿಗೆ ಸ್ಪಂದನೆ ಸಿಕ್ಕಿರುವುದಿಲ್ಲಾ ಆದ್ದರಿಂದ ಪ್ರತಿಭಟನೆಯನ್ನು ರಾಜ್ಯದ್ಯಾಂತ ಏಕಕಾಲದಲ್ಲಿ ಎಲ್ಲಾ ಜಿಲ್ಲಾ ಪಂಚಾಯಿತಿಯ ಮುಂದೆ ಮುಂದುವರೆಸಲು ರಾಜ್ಯ ಒಕ್ಕೂಟ ನಿರ್ದರಿಸಿದ್ದು ಬೆಳಗಾವಿಯಲ್ಲಿ ಸಹ  ಜಿಲ್ಲಾ ಪಂಚಾಯಿತಿಯ ಮುಂಭಾಗದಲ್ಲಿ  ಧರಣಿ ನಡೆಸಲಾಯಿತು.

1993ರ ಪಂಚಾಯತ್ ರಾಜ್ ಕಾಯ್ದೆ ಪ್ರಕರಣ 4 ರ ಅನುಸಾರ 5,000 ದಿಂದ 7000 ವರಗಿನ ಜನ ಸಂಖ್ಯೆಯುಳ್ಳ ಗ್ರಾಮ ಅಥವಾ ಗ್ರಾಮಗಳ ಗುಂಪಿಗೆ ಒಂದು ಗ್ರಾಮ ಪಂಚಾಯಿತಿ ಎಂದು ಘೋಷಣೆ ಮಾಡಲಾಗಿದೆ. ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣಕನ್ನಡ, ಧಾರವಾಡ, ಹಾಸನ, ಕೊಡಗು, ಶಿವಮೊಗ್ಗ, ಉಡುಪಿ, ಹಾವೇರಿ, ಉತ್ತರಕನ್ನಡ ಜಿಲ್ಲೆಗಳಿಗೆ 2500 ಜನ ಸಂಖ್ಯೆ ಹೊಂದಿರುವ ಗ್ರಾಮ ಅಥವಾ ಗ್ರಾಮಗಳ ಗುಂಪುಗಳನ್ನು ಗ್ರಾಮ ಪಂಚಾಯಿತಿ ಎಂದು ಘೋಷಿಸಲಾಗಿದೆ.

ಇಲಾಖೆಯ ಸರ್ವತೋಮುಖ ಅಭಿವೃದ್ಧಿಯನ್ನು ಪರಿಗಣಿಸಲು ಆ ಬಗ್ಗೆ ನಿಯಮಗಳನ್ನು ರೂಪಿಸಲು ಅಧಿಕಾರಿ ವೃಂದದ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಮಸ್ಯೆಗಳನ್ನು ಸೂಕ್ಷ್ಮವಾಗಿ ಅರಿತು ಪರಿಹರಿಸುವ ಸಲುವಾಗಿ ಉದಯಗೊಂಡ ಆಯುಕ್ತಾಲಯವು ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಕೇವಲ ಹೆಚ್ಚುವರಿ ಮತ್ತು ಅವೈಜ್ಞಾನಿಕ ಕೆಲಸಗಳನ್ನು ಗ್ರಾಮ ಪಂಚಾಯಿತಿ ಮೇಲೆ ಮತ್ತು ಅದರ ಅಧಿಕಾರಿಗಳ ಮೇಲೆ ಹೇರುವಂತಹ ಕೆಲಸ ಆಗುತ್ತಿದೆ.

ಇಲಾಖೆಯ ಹಂತದಲ್ಲಿ ಯಾವುದೇ ಆದೇಶಗಳನ್ನು ಹೊರಡಿಸುವ ಮುನ್ನ ಅನುಷ್ಠಾನ ಮಾಡುವ ಅಧಿಕಾರಿಗಳ ಸಮಸ್ಯೆಯನ್ನು ಕಾನೂನಿನ ತೊಡಕುಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿಲ್ಲ ಹಾಗಾಗಿ ಈ ಎಲ್ಲ ಸಮಸ್ಯೆಯ ನೋವನ್ನು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅನುಭವಿಸುವಂತಹಾಗಿದೆ.

ಗ್ರಾಮ ಪಂಚಾಯಿತಿಯಲ್ಲಿ ಜನರಿಂದ ಚುನಾಯಿತರಾದ ಅಡಳಿತ ಮಂಡಳಿ ಇರುತ್ತದೆ, ಸದರಿ ಆಡಳಿತ ಮಂಡಳಿಯು ನಿರ್ಣಯ ಕೈಗೊಳ್ಳಲು ಅವಕಾಶವಿದ್ದು, ಅಧಿಕಾರ ವಿಕೇಂದ್ರೀಕರಣ ಬಯಸುವ ಜನವುತಿನಿಧಿಗಳು ಇದ್ದಾಗ್ಯೂ ಸಹ ಅತಿಯಾದ ಸರ್ಕಾರಿ ಆದೇಶಗಳು, ಇಲಾಖಾ ಆದೇಶಗಳ ಮುಖಾಂತರವೇ ಅಧಿಕಾರಿಗಳು/ನೌಕರರು ಕೆಲಸ ನಿರ್ವಹಿಸಿ ಅನುದಾನ ಬಳಸಬೇಕಾಗಿರುವುದರಿಂದ ಸ್ಥಳೀಯ ಪ್ರತಿನಿಧಿಗಳು ತಮ್ಮ ಅಧಿಕಾರಕ್ಕೆ ಧಕ್ಕೆ ತರುವಂತ ಇಂತಹ ಆದೇಶಗಳ ವಿರುದ್ಧ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ/ನೌಕರರ ಜೊತೆ ಪ್ರತಿನಿತ್ಯ ಮನಸ್ತಾಪ ಪರಿಸ್ಥಿತಿ ಉಂಟಾಗುತ್ತಿದೆ.

ಕಳೆದ ಮೂರು ವರ್ಷಗಳಿಂದ ಖಾಲಿಯಾದ ಗ್ರಾಮ ಪಂಚಾಯತ ಸಿಬ್ಬಂದಿಗಳು ನೇಮಕಾತಿ ಮಾಡಿಕೊಳ್ಳಲು ಅವಕಾಶ ನೀಡಿರುವುದಿಲ್ಲ, ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕರ ಅನೇಕ ಹುದ್ದೆಗಳು ಖಾಲಿ ಇವೆ, ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸ್ವತ್ತು ತಂತ್ರಾಂಶ ಹಾಗೂ ವಂಚತಂತ್ರ ತಂತ್ರಾಂಶಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಅದರಲ್ಲಿನ ಹಲವಾರು ದೋಷಗಳನ್ನು ಪರಿಹರಿಸುವಂತೆ ಹಲವು ಬಾರಿ ಬೇಡಿಕೆ ಸಲ್ಲಿಸಲಾಗಿದ್ದು ಯಾವುದೇ ಸಮಸ್ಯೆ ಪರಿಹಾರವಾಗಿರುವುದಿಲ್ಲ.

ಪಂಚಾಯತ ಅಭಿವೃದ್ಧಿ ಅಧಿಕಾರಿ ಹುದ್ದೆಯನ್ನು ಗೆಜೆಟೆಡ್ ಗ್ರೂಪ್ ಬಿ ವೃಂದಕ್ಕೆ ಮೇಲ್ದರ್ಜೆಗೇರಿಸುವಂತೆ ಸಂಘದ ಹಲವು ವರ್ಷದ ಬೇಡಿಕೆ ಇದ್ದರೂ ಅದನ್ನು ಪರಿಗಣಿಸದೇ ಪ್ರಸ್ತುತ ಇರುವ 6021 ಹುದ್ದೆಗಳಲ್ಲಿಯೇ 1500 ಹುದ್ದೆಗಳನ್ನು ಕಡಿಮೇ ಮಾಡಿ ಹಿರಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಗ್ರೂಪ್ ಬಿ ಕಿರಿಯ ವೃಂದ) ಎಂದು ಮತ್ತೊಂದು ಹುದ್ದೆ ಸೃಷ್ಟಿಸಲಾಗಿದೆ. ಎರಡು ಹುದ್ದೆಗಳು ಮಾಡುವ ಎಲ್ಲ ಕೆಲಸಗಳು ಒಂದೇ ಆಗಿದ್ದರೂ ಹಾಗೂ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆ ಆಗದಿದ್ದರೂ ಸಹ ಎಲ್ಲ ಹುದ್ದೆಗಳನ್ನು ಗೆಜೆಟೆಡ್ ಗ್ರೂಪ್ ಬಿ ವೃಂದಕ್ಕೆ ಮೇಲ್ಮರ್ಜಿಗೇರಿಸಬೇಕಾದ ಮೂಲ ಆಶಯವನ್ನು ಅರಿಯದ ಇಲಾಖೆ ಇಂತಹ ಎಡವಟ್ಟುಗಳನ್ನು ಮಾಡಿರುತ್ತದೆ. ಆದ್ದರಿಂದ ಸಂಘವು ಎಲ್ಲ 6021 ಹುದ್ದೆಗಳನ್ನು ಗಜೆಟೆಡ್ ಗ್ರೂಪ್ ಬಿ ವೃಂದಕ್ಕೆ ಮೇಲ್ದರ್ಜೆಗೇರಿಸಲು ಇಲಾಖೆಗೆ ಒತ್ತಾಯಿಸುತ್ತದೆ.

ಹೊಸದಾಗಿ ಏಳು ವರ್ಷ ಒಂದೇ ತಾಲೂಕಿನಲ್ಲಿ ಕೆಲಸ ಮಾಡುತ್ತಿರುವ ಪಂಚಾಯತ ಅಭಿವೃದ್ಧಿ ಅಧಿಕಾರಿಗಳೂ, ಕಾರ್ಯದರ್ಶಿಗಳು ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳ ವರ್ಗಾವಣೆ ಮಾಡುವ ನಿಯಮವನ್ನು ಕೌನ್ಸೆಲಿಂಗ್‌ ನಿಯಮದೊಳಗೆ ಸೇರಿಸುವ ಪ್ರಯತ್ನ ನಡೆಯುತ್ತಿದ್ದು, ಇಲಾಖೆಯ ಈ ಎಲ್ಲಾ ಶೋಷಣೆಗಳಿಂದ ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ಸುಮಾರು 21 ಜನ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು/ನೌಕರರು ಒತ್ತಡದಿಂದ ಉಂಟಾಗುವ ಕಾಯಿಲೆಗೆ ತುತ್ತಾಗಿ ಪ್ರಾಣ ಕಳೆದುಕೊಂಡಿರುತ್ತಾರೆ.

ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಬೇಡಿಕೆಗಳು :

ಏಳು ವರ್ಷ ಪೂರೈಸಿ ಕರ್ತವ್ಯ ನಿರ್ವಹಿಸುತ್ತಿರುವ ಪಂಚಾಯತ ಅಭಿವೃದ್ಧಿ ಅಧಿಕಾರಿಗಳನ್ನು ಬೇರೆ ತಾಲೂಕಿಗೆ ವರ್ಗಾವಣೆ ಮಾಡುವ ನಿಯಮವನ್ನು ಕೈಬಿಡುವುದು ಹಾಗೂ ಜಿಲ್ಲೆಯಲ್ಲಿ ಸ್ನೇಹಿಚ್ಚೆ ಇಲ್ಲದೆ ಸಾರ್ವಜನಿಕ ಹಿತಾಸಕ್ತಿ ಹಿತದೃಷ್ಟಿ ತೋರದೆ ವರ್ಗಾವಣೆ ಮಾಡಬಾರದು ಮತ್ತು ವರ್ಗಾವಣೆ ನಿಯಮಗಳಲ್ಲಿ ಯಾವುದೇ ಬದಲಾವಣೆಗೆ ಮುನ್ನ ಸಂಘದ ಸಲಹೆಯನ್ನು ಪಡೆಯುವುದು, ರಾಜ್ಯದ ಎಲ್ಲಾ ಪಂಚಾಯಿತ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಗೆಜೆಟೆಡ್ ಗ್ರೂಪ್ ಬಿ ದರ್ಜೆಗೆ ಉನ್ನತಿಕರಿಸುವುದು, ಎಂ.ಜಿ.ಎನ್.ಆರ್.ಇ.ಜಿ.ಎ ಯೋಜನೆಯ ಅನುಷ್ಠಾನ ಪಡಿಸುವ ಬಗ್ಗೆ ಗುರಿ ನಿಗದಿಯನ್ನು ಕೈಬಿಡುವುದು ಅವಶ್ಯಕತೆ ಇಲ್ಲದ ಕಡೆಗಳಲ್ಲಿ ಗ್ರಾಮ ಪಂಚಾಯತ್ ಅಭಿಪ್ರಾಯ ಪಡೆದು ಕೂಸಿನ ಮನೆ ಮುಂದುವರಿಸುವ ಬಗ್ಗೆ, ಕ್ರಮ ಕೈಗೊಳ್ಳುವುದು,
ಗ್ರಾಮ ಪಂಚಾಯಿತಿಗೆ ಅಗತ್ಯವಿರುವ ಕಾರ್ಯದರ್ಶಿಗಳು ಲೆಕ್ಕ ಸಹಾಯಕರು ಹಾಗೂ ಅಗತ್ಯವಿದ್ದಷ್ಟು ಗ್ರಾಮ ಪಂಚಾಯತ್ ಸಿಬ್ಬಂದಿಗಳನ್ನು ನೇಮಕ ಮಾಡುವುದು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ಮಾದರಿಯನ್ನು ಪರಿಷ್ಕರಿಸಿ ಪ್ರತಿಯೊಂದು ವಿಷಯಕ್ಕೂ ಒಬ್ಬರು ವಿಷಯ ನಿರ್ವಾಹಕರನ್ನು ನೇಮಿಸುವುದು ಹಾಗೂ ತಾಂತ್ರಿಕ ಸಿಬ್ಬಂದಿಯನ್ನು ಒದಗಿಸುವುದು.

ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಜೇಷ್ಠತಾ ಪಟ್ಟಿ ಹಾಗೂ ಬಡ್ತಿಯಲ್ಲಿನ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸುವುದು. ಕುಂದು ಕೊರತೆ ಪ್ರಾಧಿಕಾರವನ್ನು ಪೊಲೀಸ್ ಇಲಾಖೆ ಮಾದರಿಯಲ್ಲಿ ಸದೃಢಗೊಳಿಸುವುದು. ಮತ್ತು ತಜ್ಞರ ಸಮಿತಿ ನೇಮಿಸುವುದು ಹಾಗೂ ಏಕರೂಪದ ಅಡಿಟ್ ಪದ್ಧತಿ ಜಾರಿಗೊಳಿಸುವುದು. ಮತ್ತು ಸೇವಾ ವಿಷಯಗಳನ್ನು ಸಕಾಲ ವ್ಯಾಪ್ತಿಗೆ ತರುವುದು. ಹಾಗೂ ಎಲ್ಲ ತಂತ್ರಾಂಶಗಳಿಗೆ ಏಕರೂಪದ ಸಹಾಯವಾಣಿ ವ್ಯವಸ್ಥೆ ಜಾರಿಗೊಳಿಸುವುದು.

ಲಾಂಛನ:

ಪಂಚಾಯತ್ ರಾಜ್ಯ ಸಂಸ್ಥೆಗಳು ರಾಜ್ಯ ಸರ್ಕಾರದ ಲಾಂಚನವನ್ನು ಬಳಸುವಂತಿಲ್ಲವಾದರಿಂದ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಅರ್ಥಪೂರ್ಣವಾದಂತಹ ಪ್ರತ್ಯೇಕ ಲಾಂಛನವನ್ನು ಸೃಜಿಸಿ ನೀಡಬೇಕು. ಪಂಚಾಯತ್ ಆಡಳಿತ ಸೇವೆ ಜಾರಿಗೊಳಿಸಬೇಕು

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಪತ್ರಾಂಕಿತ ಅಧಿಕಾರಿಗಳ ಸಂಘದ ಬೇಡಿಕೆಗಳು:-

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ ಹುದ್ದೆಗಳಲ್ಲಿ 33% ಹುದ್ದೆಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮೀಸಲಿಡುವುದು. ಉಪಕಾರ್ಯದರ್ಶಿ (ಆಯ್ಕೆಶ್ರೇಣಿ) ವೃಂದದ ಹುದ್ದೆಯನ್ನು ಜಂಟಿ ಕಾರ್ಯದರ್ಶಿ ಎಂದು ಮರು ಪದನಾಮೀಕರಿಸಿ, ಇತರ ಇಲಾಖೆಯ ಜಂಟಿ ಕಾರ್ಯದರ್ಶಿ ಹುದ್ದೆಗೆ ಸಮನಾದ ವೇತನ ಶ್ರೇಣಿಯನ್ನು ನಿಗದಿಪಡಿಸುವುದು.

ಉಪಕಾರ್ಯದರ್ಶಿ (ಹಿರಿಯಶ್ರೇಣಿ) ವೃಂದದಿಂದ ಉಪಕಾರ್ಯದರ್ಶಿ (ಆಯ್ಕೆಶ್ರೇಣಿ) ವೃಂದಕ್ಕೆ ಮುಂಬಡ್ತಿ ನೀಡಲು ಇರುವ ಅರ್ಹತಾದಾಯಕ ಸೇವೆಯನ್ನು ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಉಪಕಾರ್ಯದರ್ಶಿ(ಹಿರಿಯಶ್ರೇಣಿ) ವೃಂದಗಳಲ್ಲಿ ಸಲ್ಲಿಸಿದ ಒಟ್ಟು ಸೇವೆ 12 ವರ್ಷಗಳಿಂದ 06 ವರ್ಷಗಳಿಗೆ ಇಳಿಸುವುದು. 08 ಜಿಲ್ಲೆಗಳ ಜಿಲ್ಲಾ ಪಂಚಾಯತಿಗಳಲ್ಲಿ ಇರುವಂತೆ ಉಪಕಾರ್ಯದರ್ಶಿ ಮತ್ತು ಸಹಾಯಕ ಕಾರ್ಯದರ್ಶಿ ಹುದ್ದೆಗಳನ್ನು ಕಾರ್ಯ ಒತ್ತಡದ ಕಾರಣ ಎಲ್ಲಾ ಜಿಲ್ಲೆಗಳಲ್ಲಿಯೂ ತಲಾ 02 ಹುದ್ದೆಗಳ ಸೃಜನೆ, ಈ ಹಿಂದಿನ DRDA ಹುದ್ದೆಯಾದ ಯೋಜನಾಧಿಕಾರಿ-1 ಹುದ್ದೆಯನ್ನು ಕಾರ್ಯನಿರ್ವಾಹಕ ವೃಂದಕ್ಕೆ ಸೇರಿಸುವುದು ಮತ್ತು ಈ ಹಿಂದೆ ಅಸಿತ್ಯದಲ್ಲಿದ್ದ ಪರಿಷತ್ ಕಾರ್ಯದರ್ಶಿ ಹುದ್ದೆಯನ್ನು ಉಪಕಾರ್ಯದರ್ಶಿ ವೃಂದಕ್ಕೆ ಮೇಲ್ದರ್ಜೆಗೇರಿಸಿ ಪುನಃ ಮಂಜೂರು ಮಾಡಬೇಕು ಎಂದರು.

ಹಲವು ಬೇಡಿಕೆಗಳನ್ನು ಇಟ್ಟು ತಮ್ಮ ಬೇಡಿಕೆಗಳು ಇಡೆರುವವರಿಗೂ ನಗರದ ಜಿಲ್ಲಾ ಪಂಚಾಯತಿ ಮುಂದೆ ಧರಣಿ ಮುಂದು ವರೆಯುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಲವಾರು ಸಂಘಟನೆಯ ಕಾರ್ಯಕರ್ತರು ಧರಣಿಯಲ್ಲಿ ಉಪಸ್ಥಿತಿರಿದ್ದರು.

 

error: Content is protected !!