ಜಿಪಂ ಸಿಇಒ ರಾಹುಲ್ ಶಿಂಧೆ ಅವರಿಂದ ಮಾಹಿತಿ ಪಡೆದ ಶಿವಮೊಗ್ಗ ತಂಡ
ಬೆಳಗಾವಿ-೦೭: ಸರಕಾರಿ ಪದವಿಪೂರ್ವ ಮಹಾವಿದ್ಯಾಲಯಗಳ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ನೀಟ್-ಜೆಇಇ ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಗೊಳಿಸುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಆರಂಭಿಸಲಾಗಿರುವ “ಸಿಇಟಿ-ಸಕ್ಷಮ್” ಕಾರ್ಯಕ್ರಮವು ಇಡೀ ರಾಜ್ಯಕ್ಕೆ ಮಾದರಿಯಾಗಿ ಹೊರಹೊಮ್ಮಿದೆ!
ಜಿಲ್ಲಾ ಪಂಚಾಯತಿ ಸಿಇಒ ರಾಹುಲ್ ಶಿಂಧೆ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಪರೀಕ್ಷೆಗಳ ಕುರಿತು ಅಧ್ಯಯನಕ್ಕಾಗಿ ಶಿವಮೊಗ್ಗ ಜಿಲ್ಲೆಯ ತಂಡವು ಜಿಲ್ಲೆಗೆ ಆಗಮಿಸಿರುತ್ತದೆ.
ಬೆಳಗಾವಿ ಜಿಲ್ಲೆಯ ಉಪ ನಿರ್ದೇಶಕರ ಕಾರ್ಯಾಲಯ ಪ.ಪೂ ಶಿಕ್ಷಣ ಇಲಾಖೆ ಬೆಳಗಾವಿ ಕಚೇರಿಯಲ್ಲಿ “ಸಿಇಟಿ-ಸಕ್ಷಮ್ ಕಾರ್ಯಕ್ರಮದ ಕಾರ್ಯವಿಧಾನವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಸೋಮವಾರ ಪ್ರೋಬೆಷನರಿ ಐಎಎಸ್ ಅಧಿಕಾರಿ ದೃಷ್ಠಿ ಜೇಸ್ವಾಲ್ ಅವರ ನೇತೃತ್ವದ ತಂಡ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದೆ.
ಸರ್ಕಾರಿ ಪದವಿ ಪೂರ್ವ ವಿದ್ಯಾಲಯಗಳಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಜಿಲ್ಲೆಯ ಗ್ರಾಮೀಣ ಪ್ರದೇಶದ ಮತ್ತು ಆರ್ಥಿಕವಾಗಿ ದುರ್ಬಲರಾಗಿರುವ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗಾಗಿ “ಸಿಇಟಿ-ಸಕ್ಷಮ್”ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲ ಕಲ್ಪಿಸಿದೆ. ರಾಜ್ಯ ಮಟ್ಟದಲ್ಲಿಯೂ “ಸಿಇಟಿ-ಸಕ್ಷಮ್” ಕಾರ್ಯಕ್ರಮ ಮೆಚ್ಚುಗೆಗೆ ಪಾತ್ರವಾಗಿತು.
ಶಿವಮೊಗ್ಗ ಜಿಲ್ಲೆಯಲ್ಲಿ “ಸಿಇಟಿ-ಸಕ್ಷಮ್”ಕಾರ್ಯಕ್ರಮ ಅಳವಡಿಸಿಕೊಳ್ಳಬೇಕೆಂದು ಪ್ರೋಬೆಷನರಿ ಐಎಎಸ್ ಅಧಿಕಾರಿ ದೃಷ್ಠಿ ಜೇಸ್ವಾಲ್ ಅವರ ನೇತೃತ್ವದ ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ, ಪ್ರಾಂಶುಪಾಲರಾದ ರವಿಶಂಕರ್, ಡಾ.ಜಿ.ಎಸ್.ಸಿದ್ಧಲಿಂಗಮೂರ್ತಿ, ಅರವಿಂದಕುಮಾರ್ ಕೆ., ವಾಸುದೇವ ಕೆ.ಎಚ್., ಉಪನ್ಯಾಸಕರಾದ ರಾಜೇಶ್ ಬೋಳಾರ್, ಜಾಕೀರ್ ಹುಸೇನ್, ಫ್ರಾನ್ಸಿಸ್ ಬೆಂಜಬಿನ್, ಎಸ್ಡಿಎ ಭರತ್, ಡಿಪಿಎಂ ಪ್ರದೀಪ್ ಒಳಗೊಂಡ ತಂಡ ಭೇಟಿ ನೀಡಿ ಜಿಪಂ ಸಿಇಒ ರಾಹುಲ್ ಶಿಂಧೆ ಅವರನ್ನು ಭೇಟಿ ಮಾಡಿ ಸಮಗ್ರ ಮಾಹಿತಿ ಪಡೆದುಕೊಂಡಿದೆ. ಅಲ್ಲದೇ ಕಾರ್ಯಕ್ರಮದ ಬಗ್ಗೆ ಬೆಳಗಾವಿ ಜಿಲ್ಲೆಯ ಪ.ಪೂ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಮ್. ಎಮ್. ಕಾಂಬಳೆ ಹಾಗು ಕಚೇರಿ ಸಿಬ್ಬಂದಿಯರು ಕೂಡ ಕಾಯಕ್ರಮದ ಮಾಹಿತಿಯನ್ನು ಒದಗಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಬಡವರ್ಗದ ವಿದ್ಯಾರ್ಥಿಗಳಿಗಾಗಿ ಜಿಪಂ ಸಿಇಒ ರಾಹುಲ್ ಶಿಂಧೆ ಅವರು ರೂಪಿಸಿದ “ಸಿಇಟಿ-ಸಕ್ಷಮ್”ಕಾರ್ಯಕ್ರಮ ಎಂಬ ವಿನೂತನ ಕಾರ್ಯಕ್ರಮ ಶಿವಮೊಗ್ಗ ಜಿಲ್ಲೆಯಲ್ಲಿಯೂ ಅನುಷ್ಠಾನವಾಗಲಿದ್ದು, ಈ ನಿಟ್ಟಿನಲ್ಲಿ ಭೇಟಿ ನೀಡಿದ ಶಿವಮೊಗ್ಗ ಜಿಲ್ಲೆಯ ತಂಡ ಮಾಹಿತಿ ಕಲೆ ಹಾಕಿದೆ.