23/12/2024
IMG-20241003-WA0000

ಕೌಜಲಗಿ-೦೩: ರಾಜ್ಯದ ಅತೀ ದೊಡ್ಡ ಜಿಲ್ಲೆಯಾದ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಜಿಲ್ಲೆಯನ್ನಾಗಿಸುವ ಸಂದರ್ಭದಲ್ಲಿ ಗೋಕಾಕ ತಾಲೂಕಿನ ಅತೀ ದೊಡ್ಡ ಪಟ್ಟಣವಾದ ಮತ್ತು ಹೋಬಳಿ ಕೇಂದ್ರವಾದ ಕೌಜಲಗಿ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ನಿಯೋಜಿತ ಕೌಜಲಗಿ ತಾಲೂಕು ಹೋರಾಟ ಚಾಲನಾ ಸಮಿತಿಯ ಅಧ್ಯಕ್ಷ ಎಮ್.ಆರ್.ಭೋವಿ ಸರ್ಕಾರವನ್ನು ಆಗ್ರಹಪಡಿಸಿದ್ದಾರೆ.

ಪತ್ರಿಕಾ ಪ್ರಕಟನೆಯ ಮೂಲಕ ಮಂಗಳವಾರದಂದು ಈ ವಿಷಯ ತಿಳಿಸಿದ ಚಾಲನಾ ಸಮಿತಿಯ ಅಧ್ಯಕ್ಷರು, 1973 ರಿಂದಲೂ ಕೌಜಲಗಿ ತಾಲೂಕಿಗಾಗಿ ಹೋರಾಡುತ್ತ ಬಂದಿದೆ. ತಾಲೂಕು ಪುನರ್‌ವಿಂಗಡಣಾ ಸಮಿತಿಗಳಾದ ಹುಂಡೇಕಾರ, ಗದ್ದಿಗೌಡರ, ವಾಸುದೇವ ಸಮಿತಿಗಳು ಕೌಜಲಗಿಯನ್ನು ತಾಲೂಕು ಕೇಂದ್ರವನ್ನಾಗಿಸಬೇಕೆಂದು ಶಿಫಾರಸ್ಸು ಮಾಡಿವೆ. ಅಗಷ್ಟ 26 ರಂದು ಕೌಜಲಗಿ ಪಟ್ಟಣಕ್ಕೆ ಆಗಮಿಸಿದ್ದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರಿಗೆ, ಬೆಳಗಾವಿ ಜಿಲ್ಲೆ ಉಸ್ತುವಾರಿ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿಯವರಿಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಗೆ ಕೌಜಲಗಿ ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿದ್ದೇವೆ.
ಗೋಕಾಕ ತಾಲೂಕನ್ನು ವಿಭಜಿಸಿ ಕೌಜಲಗಿ ಹೋಬಳಿಯ ಕೌಜಲಗಿ, ರಡ್ಡೇರಟ್ಟಿ, ಕಳ್ಳಿಗುದ್ದಿ, ಹೊಸಳ್ಳಿ, ಮನ್ನಿಕೇರಿ, ಬಗರನಾಳ, ಗೋಸಬಾಳ, ಬಿಲಕುಂದಿ, ಬೆಟಗೇರಿ, ಕೆಮ್ಮನಕೋಲ, ತಪಶಿ, ಉದಗಟ್ಟಿ, ರಾಮದುರ್ಗ ತಾಲೂಕಿನ ಚಂದರಗಿ ಹೋಬಳಿಯ -ಹುಲಕುಂದ, ಬಾಗೋಜಿಕೊಪ್ಪ, ಚಿಕ್ಕೊಪ್ಪ, ಹಿರೇಕೊಪ್ಪ, ಮುರಕಟ್ನಾಳ, ಹೊಸೂರು, ಕಾಮನಕೊಪ್ಪ, ಹೊಸಳ್ಳಿ, ಬಿಜಗುಪ್ಪಿ, ಚಿಪ್ಪಲಕಟ್ಟಿ, ಕುನ್ನಾಳ, ತೊಂಡಿಕಟ್ಟಿ, ಬುದ್ನಿಖುರ್ದ, ಕಮಕೇರಿ, ಹೊಸಕೋಟಿ, ಗುತ್ತಿಗೋಳಿ, ಕುಳ್ಳೂರು ಹಾಗೂ ಸವದತ್ತಿ ತಾಲೂಕಿನ ಯರಗಟ್ಟಿ ಹೋಬಳಿಯ–ಮೆಳ್ಳಿಕೇರಿ, ದಾಸನಾಳ, ಮುಗಳಿಹಾಳ, ಅಕ್ಕಿಸಾಗರ, ಕೊಡ್ಲಿವಾಡ, ಇಟ್ನಾಳ, ಕೊರಕೊಪ್ಪ, ಸತ್ತಿಗೇರಿ, ಕುರುಬಗಟ್ಟಿ, ತಾವಲಗೇರಿ, ಮರಡಿ ಶಿವಾಪೂರ, ಗೋವನಕೊಪ್ಪ ಮುಂತಾದ ಗ್ರಾಮಗಳನ್ನೊಳಗೊಂಡು ಕೌಜಲಗಿಯನ್ನು ತಾಲೂಕು ಕೇಂದ್ರವಾಗಿಸಬೇಕೆಂದು ಹೋರಾಟ ಸಮಿತಿ ಮನವಿ ಮಾಡಿಕೊಂಡಿದೆ.
ಬರುವ ಸಚಿವ ಸಂಪುಟದಲ್ಲಿ ಕೌಜಲಗಿಯನ್ನು ತಾಲೂಕು ಕೇಂದ್ರವೆಂದು ಅನುಮೋದಿಸಿ, ಮುಂಬರುವ ಬಜೆಟ್ ಅಧಿವೇಶನದಲ್ಲಿ ನೂತನ ಕೌಜಲಗಿ ತಾಲೂಕಿಗೆ ಬಜೆಟ್‌ನ್ನು ಮೀಸಲಿಡುವುದರ ಮೂಲಕ ಕೌಜಲಗಿ ತಾಲೂಕನ್ನಾಗಿ ಮತ್ತು ಗೋಕಾಕನ್ನು ಜಿಲ್ಲೆಯನ್ನಾಗಿ ಅಸ್ಥಿತ್ವಕ್ಕೆ ತರಬೇಕೆಂಬುದು ಕೌಜಲಗಿ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದು, ಶೀಘ್ರದಲ್ಲಿಯೇ ಸರ್ಕಾರ ಬೆಳಗಾವಿ ಜಿಲ್ಲೆ ವಿಭಜಿಸುವ ಸಂದರ್ಭದಲ್ಲಿ ಕೌಜಲಗಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಭೋವಿ ತಿಳಿಸಿದರು.

error: Content is protected !!