ಬೆಳಗಾವಿ-೦೩:ದುರ್ಗಾಮಾತಾ ದೌಡಗೆ ಗುರುವಾರ ಪ್ರಾರಂಭವಾಯಿತು.ದೇವ, ದೇಶ ಮತ್ತು ಧರ್ಮ ರಕ್ಷಣೆಯ ಜಾಗೃತಿ ಮೂಡಿಸಲು ನವರಾತ್ರಿಯ ಮೊದಲ ದಿನ ಶ್ರೀ ಶೈಲಪುತ್ರಿಯ ಆರಾಧನೆಯೊಂದಿಗೆ ಬೆಳಗಾವಿಯಲ್ಲಿ ಶ್ರೀ ದುರ್ಗಾಮಾತಾ ದೌಡ್ ನಡೆಸಲಾಯಿತು.
ಐತಿಹಾಸಿಕ ಬೆಳಗಾವಿ ನಗರಿಯಲ್ಲಿ ಪ್ರತಿಯೊಂದು ಹಬ್ಬಗಳಿಗೆ ಒಂದೊಂದು ವಿಶೇಷತೆಯಿದೆ. ಗಣೇಶೋತ್ಸವದ ಬಳಿಕ 10 ದಿನಗಳ ಕಾಲ ನಡೆಯುವ ನವರಾತ್ರಿಯಲ್ಲಿ ಬೆಳಿಗ್ಗೆ ಶ್ರೀ ದುರ್ಗಾಮಾತಾ ದೌಡ್ ನಡೆದರೇ ರಾತ್ರಿ ದಾಂಡಿಯಾ ಕಾರ್ಯಕ್ರಮ ನಡೆಯುತ್ತದೆ.
ಕಳೆದ 26 ವರ್ಷಗಳಿಂದ ಶ್ರೀ ಶಿವಪ್ರತಿಷ್ಠಾನ ಹಿಂದೂಸ್ಥಾನನ ವತಿಯಿಂದ ಬೆಳಗಾವಿ ನಗರದಲ್ಲಿ ನವರಾತ್ರಿಯ ವೇಳೆ ಶ್ರೀ ದುರ್ಗಾಮಾತಾ ದೌಡನ್ನು ನಡೆಸಲಾಗುತ್ತಿದೆ. ಈ ಬಾರಿಯೂ ಸಡಗರ ಸಂಭ್ರಮದಿಂದ ಶ್ರೀ ದುರ್ಗಾಮಾತಾ ದೌಡ್ ಆರಂಭಗೊಂಡಿತು. ನಗರದ ಎಸ್.ಪಿ.ಎಂ. ರಸ್ತೆಯಲ್ಲಿರುವ ಛತ್ರಪತಿ ಶಿವಾಜೀ ಉದ್ಯಾನದಲ್ಲಿ ಮೊದಲಿಗೆ ಛತ್ರಪತಿ ಶಿವಾಜೀ ಮಹಾರಾಜರ ಮೂರ್ತಿಗೆ ಪೂಜೆ ಸಲ್ಲಿಸಿ, ಪ್ರೇರಣಾ ಮಂತ್ರದೊಂದಿಗೆ ಛತ್ರೆ ಗುರುಜೀಗಳ ಹಸ್ತದಿಂದ ಭಗವಾ ಧ್ವಜಾರೋಹಣವನ್ನು ಮಾಡಲಾಯಿತು.
ಕಳೆದ ರಾತ್ರಿಯಿಂದಲೇ ಶ್ರೀ ದುರ್ಗಾ ಮಾತಾ ದೌಡ್ ಸ್ವಾಗತಕ್ಕಾಗಿ ಮಹಿಳಾಮಣಿಗಳು ಮತ್ತು ಉತ್ಸಾಹಿ ಕಾರ್ಯಕರ್ತರು ದೌಡನ ಮಾರ್ಗವಾಗಿ ಆಕರ್ಷಕವಾಗಿ ಶೃಂಗರಿಸಿದ್ದರು, ರಸ್ತೆಗಳ ಮೇಲೆ ಬಣ್ಣಬಣ್ಣದ ರಂಗೋಲಿಗಳು, ತಳಿರು ತೋರಣ, ಭಗವಾ ಪತಾಕೆಗಳಿಂದ ದೌಡನ ಮಾರ್ಗವನ್ನು ಶೃಂಗರಿಸಲಾಗಿತ್ತು. ಭಗವಾ ಪೇಠಾ- ಶ್ವೇತವಸ್ತ್ರ ತೊಟ್ಟ ಧಾರಕಾರಿಗಳು ನೂರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಅವರು ನೀಡುವ ಉದ್ಯೋಷಗಳು ಮೈ ನವಿರೇಳುವಂತೆ ಮಾಡುತ್ತಿದ್ದವು.
ಪ್ರತಿಗಲ್ಲಿಗಳಲ್ಲಿಯೂ ದೌಡನ್ನು ಸುಹಾಸಿನಿಯರು ಆರತಿ ಬೆಳಗಿ ಸ್ವಾಗತಿಸುತ್ತಿದ್ದರು. ಬಾಲಶಿವಾಜೀ ಸೇರಿದಂತೆ ಹಿಂದೂತ್ವದ ಸಂದೇಶವನ್ನು ನೀಡುವ ಸಜೀವ ರೂಪಕಗಳು ಎಲ್ಲರ ಗಮನ ಸೆಳೆದವು. ಮೊದಲ ದಿನದ ದೌಡ ಛತ್ರಪತಿ ಶಿವಾಜೀ ಮಹಾರಾಜ್ ಉದ್ಯಾನದಿಂದ ಆರಂಭಗೊಂಡು ದಕ್ಷಿಣ ಕಾಶಿ ಶ್ರೀ ಕ್ಷೇತ್ರ ಕಪಿಲೇಶ್ವರ ದೇವಸ್ಥಾನಕ್ಕೆ ತಲುಪಿ ಕೊನೆಗೊಂಡಿತು. ಧೈಯ ಮಂತ್ರದೊಂದಿಗೆ ಧ್ವಜಾವರೋಹಣವನ್ನು ಆಚರಿಸಲಾಯಿತು.