ಬೆಳಗಾವಿ-09: ಸಂಚಾರ ದಟ್ಟಣೆ ಕಡಿಮೆ ಮಾಡುವುದರ ಜತೆಗೆ ಸುಗಮ ಸಂಚಾರದ ದೃಷ್ಟಿಯಿಂದ ನಗರದಲ್ಲಿ ಫ್ಲೈಓವರ್ ನಿರ್ಮಿಸಲು ಉದ್ಧೇಶಿಸಲಾಗಿದೆ ಎಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಆಸಿಫ್(ರಾಜು) ಸೇಠ್ ಹೇಳಿದರು.
ಬೆಳಗಾವಿ ನಗರದಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿಯಿಂದ ಕಿತ್ತೂರು ಚೆನ್ನಮ್ಮ ವೃತ್ತದವರೆಗಿನ 4.50 ಕಿ.ಮೀ. ಉದ್ದದ ಫ್ಲೈಓವರ್ ಮಾರ್ಗದಲ್ಲಿ ಪ್ರಮುಖ ವೃತ್ತಗಳು ಹಾಗೂ ಕೂಡು ರಸ್ತೆಗಳಿವೆ. ಇವುಗಳನ್ನು ಗಮನದಲ್ಲಿಟ್ಟುಕೊಂಡು ಸಮರ್ಪಕ ಯೋಜನೆ ರೂಪಿಸಬೇಕು.
ಮುಂಬರುವ ದಿನಗಳಲ್ಲಿ ಹೆಚ್ಚಾಗುವ ಸಂಚಾರ ದಟ್ಟಣೆಯ ಸಮರ್ಪಕ ನಿರ್ವಹಣೆಗೆ ಇದು ಸಹಕಾರಿಯಾಗಲಿದೆ ಎಂದು ಹೇಳಿದರು.
ಸಂಕೇಶ್ವರ ಕಡೆಯಿಂದ ಆಗಮಿಸುವ ವಾಹನಗಳು ಫ್ಲೈಓವರ್ ಮೂಲಕ ಮಾತ್ರವಲ್ಲದೇ ಈಗಿರುವ ಸರ್ವೀಸ್ ರಸ್ತೆಗಳ ಮೂಲಕವೂ ನಗರ ಪ್ರವೇಶಿಸಲು ಅವಕಾಶ ಕಲ್ಪಿಸಬೇಕು; ಬೃಹತ್ ವಾಹನಗಳ ಸಂಚಾರ, ಪಾದಚಾರಿಗಳು ಸೇರಿದಂತೆ ಪ್ರತಿಯೊಂದು ಸಂಗತಿಯನ್ನು ಪರಿಗಣಿಸಿ ಅತ್ಯುತ್ತಮ ಯೋಜನೆ ಜಾರಿಗೊಳಿಸಬೇಕು ಎಂದು ಶಾಸಕ ಆಸೀಫ್ ಸೇಠ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಯೋಜನೆಯ ಅನುಷ್ಠಾನ ಹಾಗೂ ಪೂರ್ವಭಾವಿಯಾಗಿ ಮಾಡಿಕೊಳ್ಳಬೇಕಿರುವ ಸಿದ್ಧತೆಗಳನ್ನು ವಿವರಿಸಿದರು.
ಬಿ.ಎಸ್.ಎನ್.ಎಲ್., ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿ, ಕೆಎಸ್ಆರ್ ಟಿಸಿ, ಕುಡಿಯುವ ನೀರು ಸರಬರಾಜು ಮತ್ತಿತರ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಶ್ರಮಿಸಬೇಕು ಎಂದರು.
ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಕುರಿತು ಚರ್ಚೆ:
ಜಿಲ್ಲಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ವಿವಿಧ ಇಲಾಖೆಗಳನ್ನು ಒಳಗೊಂಡ ನೂತನ ಸಂಕೀರ್ಣದ ನೀಲನಕ್ಷೆಯನ್ನು ಶಾಸಕ ಆಸಿಫ್ ಸೇಠ್ ಪರಿಶೀಲಿಸಿದರು.
ಈಗಾಗಲೇ ಇರುವ ಕಚೇರಿಗಳ ದೈನಂದಿನ ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ ಅಗತ್ಯ ಸ್ಥಳಾವಕಾಶ ಒದಗಿಸಬೇಕು. ವಿಶಾಲವಾದ ಪಾರ್ಕಿಂಗ್ ಕಲ್ಪಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಹಾಗೂ ಸುತ್ತಮುತ್ತಲಿರುವ ವಿವಿಧ ಇಲಾಖೆಗಳ ಬೇಡಿಕೆ ಅನುಸಾರ ನೀಲನಕ್ಷೆ ಸಿದ್ಧಪಡಿಸಲಾಗಿದ್ದು, ಇನ್ನೊಂದು ಸುತ್ತಿನ ಸಭೆಯನ್ನು ನಡೆಸಿದ ಬಳಿಕ ನೀಲನಕ್ಷೆಯನ್ನು ಅಂತಿಮಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಡಿಸಿಪಿ ಸ್ನೇಹಾ, ಮಹಾನಗರ ಪಾಲಿಕೆಯ ಆಯುಕ್ತರಾದ ಅಶೋಕ ದುಡಗುಂಟಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ರಾಜೇಂದ್ರ ಉಪಸ್ಥಿತರಿದ್ದರು.
ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್.ಸೊಬರದ ಅವರು, ಫ್ಲೈಓವರ್ ಮತ್ತು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಯೋಜನೆಯ ಕುರಿತು ವಿವರಿಸಿದರು.