23/12/2024
IMG-20240109-WA0032

ಬೆಂಗಳೂರು-09: ರಾಜ್ಯದಲ್ಲಿ ತೀವ್ರ ಬರಗಾಲವಿದ್ದು ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರ ರೈತರಿಗೆ ಪರಿಹಾರ ನೀಡದೇ ರಾಜಕೀಯ ಮಾಡುತ್ತ ಕಾಲಹರಣ ಮಾಡುತ್ತಿದೆ. ರೈತರಿಗೆ ನ್ಯಾಯ ಕೊಡದಿರುವ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರಾಜ್ಯದಲ್ಲಿ ತೀವ್ರ ಬರದ ಹಿನ್ನೆಲೆಯಲ್ಲಿ ರೈತರಿಗೆ ರಾಜ್ಯ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಬಿಜೆಪಿ ನಿಯೋಗದ ಮೂಲಕ ರಾಜ್ಯಪಾಲರನ್ನು ಭೇಟಿ ಮಾಡಿ ನಂತರ ಮಾತನಾಡಿದ ಅವರು, ಬರ, ಪ್ರವಾಹ ಬಂದರೆ ಜನ ಸಂಕಷ್ಟದಲ್ಲಿ ಇದ್ದಾಗ ಸರ್ಕಾರ ಧಾವಿಸಿ ಸಹಾಯ ಮಾಡಿದರೆ ಅದು ಜೀವಂತ ಇದ್ದಂತೆ. ಸರ್ಕಾರ ರೈತರ ಕಡೆ ನೋಡದಿದ್ದರೆ ಅದು ಸತ್ತಂತೆ.
ರಾಜ್ಯ ಸರ್ಕಾರ ಬರ ಪರಿಹಾರ ನೀಡುವಂತೆ ಕೇಂದ್ರಕ್ಕೆ 18000 ಕೋಟಿ ರೂ. ನೀಡುವಂತೆ ಮನವಿ ಮಾಡಿದೆ. ಆದರೆ, ನಿವು ಕೇವಲ 105 ಕೋಟಿ ಬಿಡುಗಡೆ ಮಾಡಿದ್ದೀರಿ, ಅದು ಕೇವಲ ಶೇಕಡಾ 1% ಕೂಡ ಆಗುವುದಿಲ್ಲ. ಬೆಳಗಾವಿ ಅಧಿವೇಶನಕ್ಕೂ ಮುಂಚೆಯೇ ಪ್ರತಿ ಹೆಕ್ಟೇರ್ ಗೆ 2000 ರೂ ಬೆಳೆ ಪರಿಹಾರ ನೀಡುವುದಾಗಿ ಹೇಳಿದ್ದರು. ಆದರೆ, ಅಧಿವೇಶನ ಮುಗಿದು ಒಂದು ತಿಂಗಳು ಕಳೆಯುತ್ತಿದ್ದರೂ, ಹಣ ಬಿಡುಗಡೆ ಮಾಡದೆ ಆಧಾರ್ ಲಿಂಕ್ ಮಾಡುವ ಕಥೆ ಹೇಳುತ್ತಾರೆ. ನಮ್ಮ ಸರ್ಕಾರದ ಅವಧಿಯಲ್ಲಿಯೇ ಫ್ರುಟ್ ಸಾಪ್ಟ್ ವೇರ್ ನಲ್ಲಿ ರೈತರ ಖಾತೆಗಳಿಗೆ ಆಧಾರ್ ಲಿಂಕ್ ಮಾಡಲಾಗಿದೆ ಎಂದರು.
ರೈತರಿಗೆ ನ್ಯಾಯ ಕೊಡದಿರುವ ಸರ್ಕಾರ ಬಹಳ ದಿನ ಉಳಿಯುವುದಿಲ್ಲ. ನಮ್ಮ ಅವಧಿಯಲ್ಲಿ ಪ್ರವಾಹ ಬಂದಾಗ ನಾವು 14 ಲಕ್ಷ ರೈತರ ಖಾತೆಗೆ ನೇರವಾಗಿ ಪರಿಹಾರದ ಹಣ ವರ್ಗಾವಣೆ ಮಾಡಿದ್ದೆವು‌ ಎಂದು ಹೇಳಿದರು
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಆರಂಭವಾಗಿಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ ಬಜೆಟ್ ನಲ್ಲಿ ಮೀಸಲಿಟ್ಟ 3000 ಕೋಟಿ ರೂ.ಗಳಲ್ಲಿ ಇದುವರೆಗೂ ಒಂದು ರೂಪಾಯಿ ಖರ್ಚಾಗಿಲ್ಲ. ಗೃಹ ಲಕ್ಷ್ಮೀ ಹಣ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಗೃಹಜ್ಯೋತಿ, ಯುವ ನಿಧಿ ಯೋಜನೆಗಳಿಂದಲೂ ಜನರಿಗೆ ಪ್ರಯೋಜನವಾಗಿಲ್ಲ. ಯಾವುದೇ ಗ್ಯಾರೆಂಟಿ ಯೋಜನೆಗಳೂ ಸಮರ್ಪಕವಾಗಿ ತಲುಪುತಿಲ್ಲ. ರಾಜ್ಯ ಸರ್ಕಾರ ತಕ್ಷಣ ಬರ ಪರಿಹಾರದ ಹಣ ಬಿಡುಗಡೆ ಮಾಡಬೇಕು. ರಾಜ್ಯಪಾಲರು ತಕ್ಷಣ ಸರ್ಕಾರಕ್ಕೆ ಹಣ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಲು ಮನವಿ ಮಾಡಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದಲೂ ಪರಿಹಾರದ ಹಣ ಬಿಡುಗಡೆಯಾಗದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರ ಮೂರು ತಿಂಗಳಿಗೊಮ್ಮೆ ಇಡೀ ದೇಶಕ್ಕೆ ಎನ್ ಡಿ ಆರ್ ಎಫ್ ಹಣ ಬಿಡುಗಡೆ ಮಾಡುತ್ತದೆ ಎಂದರು.
*ಹಣ ಎಷ್ಟಿದೆ ಬಹಿರಂಗ ಪಡಿಸಿ*
ರಾಜ್ಯ ಸರ್ಕಾರ ಎನ್ ಡಿ ಆರ್ ಎಫ್, ಎಸ್ ಡಿಆರ್ ಎಫ್, ನಿದಿಯಲ್ಲಿ ಹಾಗೂ ಜಿಲ್ಲಾಧಿಕಾರಿಗಳ ಅಕೌಂಟ್ ನಲ್ಲಿ ಎಷ್ಟು ಹಣ ಇದೆ ಎಂದು ಸರ್ಕಾರ ಬಹಿರಂಗ ಪಡೆಸಬೇಕು ಎಂದು ಆಗ್ರಹಿಸಿದರು.
ಇನ್ನು ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಬಗ್ಗೆ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಆತಂಕ ವ್ಯಕ್ತಪಡಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಸವರಾಜ ರಾಯರೆಡ್ಡಿ ಸತ್ಯ ಹೇಳಿದ್ದಾರೆ. ರಾಜ್ಯ ಸರ್ಕಾರ ಪ್ರತಿದಿನ ಹಣಕಾಸಿನ ಸಮಸ್ಯೆ ಎದುರಿಸುತ್ತಿದೆ ಎನ್ನುವುದು ಅವರಿಗೆ ಗೊತ್ತಿದೆ. ಆದರೆ, ಸಿಎಂ ಸಿದ್ದರಾಮಯ್ಯ ಅದನ್ನು ಒಪ್ಪಿಕೊಳ್ಳಲು ಸಿದ್ದರಿಲ್ಲ ಎಂದರು
ಸಿಎಂಗೆ ಅಭದ್ರತೆ ಕಾಡುತ್ತಿದೆ:
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭದ್ರತೆ ಕಾಡುತ್ತಿದೆ. ರಾಜ್ಯದಲ್ಲಿ ಅವರು ಸಂಪೂರ್ಣ ರಾಜಕಿಯದಲ್ಲಿ ತೊಡಗಿಕೊಂಡಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಹುದ್ದೆಗೆ ಹೋರಾಡುತ್ತಿದ್ದಾರೆ. ಕೆಲವರು ಡಿಸಿಎಂ ಹುದ್ದೆಗಾಗಿ ಓಡಾಡುತ್ತಿದ್ದಾರೆ. ಇವರು ರಾಜ್ಯದ ಅಭಿವೃದ್ಧಿ ಮರೆತು ಪ್ರತಿದಿನ ರಾಜಕೀಯದಲ್ಲಿ ಮುಳುಗಿದ್ದಾರೆ. ಈಗಿನ ಹಣಕಾಸು ಪರಿಸ್ಥಿತಿ ನೋಡಿದರೆ, ಲೋಕಸಭೆ ಚುನಾವಣೆಯ ನಂತರ ಗ್ಯಾರೆಂಟಿ ಗಳನ್ನು ಮುಂದುವರೆಸಲು ಮತ್ತಷ್ಟು ಕಂಡಿಷನ್ ಹಾಕುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಆರ್. ಅಶೋಕ್, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಮಾಜಿ ಡಿಸಿಎಂ ಡಾ. ಅಶ್ವತ್ಥ್ ನಾರಾಯಣ, ಮಾಜಿ ಸಚಿವ ಕೆ. ಗೋಪಾಲಯ್ಯ, ಶಾಸಕಾರದ ಎಸ್ ರಘು, ರವಿ ಸುಬ್ರಮಣ್ಯ, ಕೆ. ರಾಮಮೂರ್ತಿ ಹಾಜರಿದ್ದರು.

error: Content is protected !!