23/12/2024
IMG-20240802-WA0008

ಬೆಳಗಾವಿ-02 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶುಕ್ರವಾರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಳ್ಳಿ ಹಳ್ಳಿಗೆ ಭೇಟಿ ನೀಡಿ ಪ್ರವಾಹ ಸಂತ್ರಸ್ತರನ್ನು ಸಂತೈಸಿದರು.

ಪ್ರವಾಹದಿಂದಾಗಿ ಮನೆ ಕಳೆದುಕೊಂಡವರು, ಆಸ್ತಿ ಕಳೆದುಕೊಂಡವರನ್ನು ಭೇಟಿ ಮಾಡಿ, ಮಾಹಿತಿ ಪಡೆದ ಸಚಿವರು, ಲಕ್ಷ್ಮೀ ತಾಯಿ ಫೌಂಡೇಶನ್ ನಿಂದ ಆರ್ಥಿಕ ಸಹಾಯವನ್ನೂ ನೀಡಿದರು. ಜೊತೆಗೆ ಸರಕಾರ ನಿಮ್ಮ ಜೊತೆಗಿದೆ, ಧೈರ್ಯಗುಂದುವುದು ಬೇಡ, ಸರಕಾರದಿಂದಲೂ ಸಾಧ್ಯವಾದಷ್ಟು ಪರಿಹಾರ ನೀಡಲಾಗುವುದು ಎನ್ನುವ ಭರವಸೆ ನೀಡಿದರು.

ಮೊದಲಿಗೆ, ಕುದ್ರೆಮನಿ ಗ್ರಾಮಕ್ಕೆ ಭೇಟಿ ನೀಡಿ, ಮಳೆಯಿಂದ ಹಾನಿಗೊಳಗಾಗಿರುವ ಮನೆಗಳನ್ನು ವೀಕ್ಷಿಸಿ, ಸಂತ್ರಸ್ತರಿಗೆ ಧೈರ್ಯ ತುಂಬಿದರು. ನಂತರ, ಪ್ರವಾಹಪೀಡಿತ ತುರಮರಿ ಹಾಗೂ ಉಚಗಾಂವ್ ಗ್ರಾಮಕ್ಕೆ ಸಹ ಸಚಿವರು ಭೇಟಿ ನೀಡಿ ಆಗಿರುವ ಹಾನಿಯ ಪರಿಶೀಲನೆ ನಡೆಸಿದರು.

ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ಹಲವರಿಗೆ ಆರ್ಥಿಕ ಸಹಾಯ ಮಾಡಿ, ಅವರ ಕಷ್ಟಗಳಿಗೆ ಸಚಿವರು ಸ್ಪಂದಿಸಿದರು. ಈ ಸಮಯದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಹೆಸ್ಕಾಂ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಪಂಚಾಯತ್ ನ ಸದಸ್ಯರು, ಗ್ರಾಮದ ಜನರು ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರವಾಹ ಹಾನಿಯ ಕುರಿತು ನೈಜ ವರದಿ ಸಿದ್ಧಪಡಿಸಿ ಕೂಡಲೇ ಸಲ್ಲಿಸಬೇಕು. ಯಾರಿಗೂ ಅನ್ಯಾಯವಾಗಬಾರದು. ಸರಕಾರದಿಂದ ಎಲ್ಲ ಅರ್ಹರಿಗೂ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪ್ರವಾಹ ಸಂತ್ರಸ್ತರ ಜೊತೆ ಸದಾ ನಾವಿದ್ದೇವೆ. ಯಾರೂ ಹೆದರುವ ಅವಶ್ಯಕತೆ ಇಲ್ಲ. ಇನ್ನೂ ಕೆಲವು ದಿನ ಮಳೆಯಾಗುವ ನಿರೀಕ್ಷ ಇದ್ದು, ಜನ, ಜಾನುವಾರುಗಳ ಸುರಕ್ಷತೆಗೆ ಲಕ್ಷ್ಯವಹಿಸಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ್ ವಿನಂತಿಸಿದರು.

error: Content is protected !!