ಮಲಪ್ರಭ ಜಲಾಶಯದಿಂದ ನೀರು ಬಿಡಲು ನಿರ್ಧಾರ: ಲಕ್ಷ್ಮೀ ಹೆಬ್ಬಾಳಕರ್
ಸವದತ್ತಿ-30: ಜಲಾಶಯದ ಸುರಕ್ಷತೆ ದೃಷ್ಟಿಯಿಂದ ನೀರು ಹೊರಬಿಡಲು ನಿರ್ಧರಿಸಲಾಗಿದ್ದು, ಒಳಹರಿವಿನ ಪ್ರಮಾಣ ಆಧರಿಸಿ ತಕ್ಷಣದಿಂದಲೇ ನೀರು ಬಿಡುಗಡೆ ಮಾಡಲಾಗುವುದು ಎಂದು ಮಲಪ್ರಭಾ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರೂ ಆಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ಸವದತ್ತಿಯ ನವಿಲುತೀರ್ಥದಲ್ಲಿ ಮಂಗಳವಾರ ಮಲಪ್ರಭಾ ನೀರಾವರಿ ಸಲಹಾ ಸಮಿತಿಯ ಸಭೆಯ ನಂತರ ಸಚಿವರು ಈ ಮಾಹಿತಿ ನೀಡಿದರು.
ಕಳೆದ ವರ್ಷ ಸರಿಯಾದ ಮಳೆಯಾಗದ ಕಾರಣ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಆಗಿತ್ತು. ಆದರೆ ಈ ವರ್ಷ ಸವದತ್ತಿ ಯಲ್ಲಮ್ಮನ ಕೃಪೆಯಿಂದ ಚೆನ್ನಾಗಿ ಮಳೆಯಾಗುತ್ತಿದೆ. ಎಲ್ಲ ಜಲಾಶಯಗಳೂ ಭರ್ತಿಯಾಗುತ್ತಿವೆ. 2025ರ ಜುಲೈವರೆಗೆ ಕುಡಿಯುವ ನೀರಿನ ಸಂಗ್ರಹವಿರುವಂತೆ ನೋಡಿಕೊಳ್ಳಬೇಕು. ಸಧ್ಯದ ಮಳೆಯ ಪರಿಸ್ಥಿತಿ, ಜಲಾಶಯದ ಒಳಹರಿವಿನ ಪ್ರಮಾಣ ನೋಡಿಕೊಂಡು ನೀರು ಬಿಡಬೇಕಾಗಿದೆ ಎಂದು ಅವರು ತಿಳಿಸಿದರು.
ಪ್ರತಿ ತಿಂಗಳು ಅಗತಕ್ಕೆ ತಕ್ಕಂತೆ ಯೋಜನೆ ರೂಪಿಸಿ, ಹಳ್ಳ, ಕೆನಾಲ್ ಗಳಿಗೆ ನೀರು ಬಿಡುಗಡೆಗೆ ಅಧಿಕಾರಿಗಳ ಕ್ರಮ ವಹಿಸಬೇಕು. ನಮ್ಮ ಸರಕಾರ ರೈತರ ಪರವಾದ ಸರಕಾರ. ಏನೇ ನಿರ್ಣಯ ತೆಗೆದುಕೊಳ್ಳುವುದಿದ್ದರೂ ರೈತರ ಹಿತದೃಷ್ಟಿಯಿಂದಲೇ ತೆಗೆದುಕೊಳ್ಳಲಾಗುವುದು. ಕುಡಿಯುವ ನೀರು ಪೂರೈಕೆ ಜೊತೆಗೆ ರೈತರ ಕೃಷಿ ಚಟುವಟಿಕೆಗಳಿಗೆ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಜಲಾಶಯಗಳಲ್ಲಿ ನೀರಿನ ಮಟ್ಟ, ಒಳಹರಿವು ಸೇರಿದಂತೆ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ನೀರು ಬಿಡುಗಡೆ ಮಾಡಬೇಕು ಎಂದು ತಿಳಿಸಿದರು.
ಕಳೆದ 50 ವರ್ಷಗಳಲ್ಲಿ ರೇಣುಕಾ ಸಾಗರ ಅಣೆಕಟ್ಟು ನಿರ್ಮಾಣದ ಬಳಿಕ 5 ಬಾರಿ ಮಾತ್ರ ಸಂಪೂರ್ಣ ಭರ್ತಿಯಾಗಿದೆ. ಅದೇ ರೀತಿಯಲ್ಲಿ ಈ ಬಾರಿಯೂ ರೇಣುಕಾಸಾಗರ ಅಣೆಕಟ್ಟು ಪೂರ್ಣ ಭರ್ತಿಯಾಗುವ ಸಾಧ್ಯತೆಯಿದೆ. ಸಾಂಪ್ರದಾಯಿಕವಾಗಿ ಜಲಾಶಯಕ್ಕೆ ಬಾಗಿನ ಅರ್ಪಿಸಿ ಆ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೀರು ಬಿಡುಗಡೆಗೆ ಮಾಡಲಾಗುವುದು. ಜಲಾಶಯದ ಸುರಕ್ಷತೆ ದೃಷ್ಟಿಯಿಂದ ನೀರು ಹೊರಬಿಡಲು ನಿರ್ಧರಿಸಲಾಗಿದ್ದು, ಒಳಹರಿವಿನ ಪ್ರಮಾಣ ಆಧರಿಸಿ ಇಂದಿನಿಂದಲೇ ನೀರು ಬಿಡುಗಡೆ ಮಾಡಲಾಗುವುದು. ಕೆಳ ಭಾಗದಲ್ಲಿ ಪ್ರವಾಹ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮಲಪ್ರಭಾ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರೂ ಆಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಕಾಲುವೆಗಳ ನಿರ್ವಹಣೆ ಸರಿಯಾಗಿ ಆಗಬೇಕು. ನಮ್ಮ ಸರಕಾರ ಯಾವತ್ತೂ ರೈತರ ಪರವಾಗಿದೆ. ರೈತರ ಹಿತಾಸಕ್ತಿ ನಮಗೆ ಮುಖ್ಯ. ಅದಕ್ಕೆ ತಕ್ಕಂತೆ ಸೂಕ್ತ ಯೋಜನೆ ರೂಪಿಸಿ. ಕಾಲುವೆಗಳ ನಿರ್ವಹಣೆಗೆ ರೈತರ ಹಿತಕ್ಕೆ ಅನುಕೂಲವಾಗುವಂತೆ ಪ್ರಸ್ತಾವನೆ ಸಲ್ಲಿಸಿ. ಈ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಗಿದೆ. ಅಗತ್ಯವಿರುವ ಎಲ್ಲ ಕೆಲಸಗಳನ್ನು ಮಾಡಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ನದಿ ಪಾತ್ರಗಳಲ್ಲಿ ಬರುವ ಗ್ರಾಮ ಹಾಗೂ ಪಟ್ಟಣಗಳಲ್ಲಿ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ಈಗಾಗಲೇ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಜನ ಜಾನುವಾರುಗಳಿಗೆ ಕುಡಿಯುವ ನೀರು ಕಲ್ಪಿಸುವ ಉದ್ದೇಶದಿಂದ ಮಲಪ್ರಭಾ ಎಡದಂಡೆಯ ಕಾಲುವೆಗಳಲ್ಲಿ ನೀರು ತುಂಬಿಸಲಾಗಿದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ವಿವರಿಸಿದರು.
ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರೈತರಿಗೆ ಸಮರ್ಪಕ ನೀರು ಪೂರೈಕೆ ಆಗುತ್ತಿಲ್ಲ. ಈ ಕುರಿತು ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಕಾಟಾಚಾರದ ಉತ್ತರ ಕೇಳಿ ಬರುತ್ತಿವೆ. ಇದರಿಂದಾಗಿ ಸಾಕಷ್ಟು ರೈತರಿಗೆ ತೊಂದರೆಯಾಗುತ್ತಿದೆ. ಇಂತಹ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರೊಬ್ಬರು ಮನವಿ ಮಾಡಿಕೊಂಡರು.
ಎಡದಂಡೆ ಕಾಲುವೆಗೆ ಸಮರ್ಪಕವಾಗಿ ನೀರು ಬಿಡುಗಡೆ ಮಾಡುತ್ತಿಲ್ಲ. ಎಡದಂಡೆ ಬಲದಂಡೆ ಎರಡು ಕಾಲುವೆಗಳಲ್ಲಿ ನಿಯಮಿತವಾಗಿ ನೀರು ಬಿಡಬೇಕು. ಕೇವಲ ಬಲದಂಡೆಗೆ ಮಾತ್ರ ಹೆಚ್ಚಾಗಿ ನೀರು ಬಿಡುಗಡೆ ಮಾಡಲಾಗುತ್ತಿದೆ. ಅಂತಹ ದೊರಣೆಯನ್ನು ಬಿಟ್ಟು ರೈತರ ಜಮೀನುಗಳಿಗ ಅಗತ್ಯಕ್ಕೆ ತಕ್ಕಂತೆ ನೀರು ಬಿಡುಗಡೆಗೆ ಮಾಡುವುದರ ಮೂಲಕ ನೀರು ಪೂರೈಕೆ ಆಗಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.
ನರಗುಂದ ಶಾಸಕ ಸಿ.ಸಿ. ಪಾಟೀಲ್ ಮಾತನಾಡಿ, ಮಲಪ್ರಭಾ ಎಡದಂಡೆ ಮತ್ತು ಬಲದಂಡೆ ನೀರು ಬಿಡುಗಡೆಗೆ ಮುನ್ನ ಸಂಗ್ರಹ ಪ್ರಮಾಣ ನೋಡಿಕೊಂಡು ಬರುವ ದಿನಗಳಲ್ಲಿ ನೀರಿನ ಕೊರತೆ ಆಗದಂತೆ ಬಿಡುಗಡೆ ಮಾಡಬೇಕು. ಹಿಂದಿನ ವರ್ಷಗಳಲ್ಲಿ ಅನಗತ್ಯವಾಗಿ ನೀರು ಹರಿಬಿಟ್ಟು ನರಗುಂದ ಕ್ಷೇತ್ರದಲ್ಲಿ ತೊಂದರೆಯಾಗಿದೆ. ಹಾಗಾಗಿ ಅಗತ್ಯಕ್ಕೆ ಅನುಗುಣವಾಗಿ ನಿಯಮಿತವಾಗಿ ನೀರು ಬಿಡುಗಡೆಗೆ ಮಾಡಬೇಕು ಎಂದು ತಿಳಿಸಿದರು.
ನೀರು ಬಿಡುಗಡೆಗೆ ಮುನ್ನ ಕಾಲುವೆಗಳ ಸ್ವಚ್ಚತೆ ಕೈಗೊಳ್ಳಬೇಕು. ಇಲ್ಲಿಯವರೆಗೂ ಯಾವೊಂದು ಕಾಲುವೆಗಳ ಸ್ವಚ್ಚತೆ ಪೂರ್ಣಗೊಳಿಸಿಲ್ಲ. ಕೂಡಲೇ ಟೆಂಡರ್ ಕರೆದು ಕಾಲುವೆಗಳ ಸ್ವಚ್ಚತೆ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು. ಪ್ರತಿ ಎರಡು ತಿಂಗಳಿಗೊಮ್ಮೆ ನೀರಾವರಿ ನಿಗಮದ ಅಧಿಕಾರಿಗಳು ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೊತೆ ಸಭೆ ಆಯೋಜಿಸಬೇಕು. ಸಚಿವರ ನಿರ್ದೇಶನದಂತೆ ನೀರು ಪೂರೈಕೆ ಕುರಿತು ಯೋಜನೆ ರೂಪಿಸಬೇಕು ಎಂದು ಶಾಸಕ ಸಿ.ಸಿ ಪಾಟೀಲ ನಿರ್ದೇಶನ ನೀಡಿದರು.
ಈಗಾಗಲೇ ಜಲಾಶಯ ಭರ್ತಿಯಾಗಿದೆ ಕೇವಲ ಸ್ವಲ್ಪ ಪ್ರಮಾಣ ಮಾತ್ರ ನೀರು ಸಂಗ್ರಹಣೆಗೆ ಅವಕಾಶವಿದೆ. ಜಲಾಶಯ ಸಂಪೂರ್ಣ ಭರ್ತಿಮಾಡಿ ನೀರು ಬಿಡುಗಡೆ ಮಾಡಿದರೆ ಸುಮಾರು 13 ಗ್ರಾಮಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಹಾಗಾಗಿ ಅಂದಾಜು 5 ಸಾವಿರದಿಂದ 8 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಸೂಚಿಸಲಾಗಿದೆ ಎಂದು ಸವದತ್ತಿ ಶಾಸಕ ವಿಶ್ವಾಸ ವೈದ್ಯ ಅವರು ತಿಳಿಸಿದರು.
ನವಲಗುಂದ ಶಾಸಕ ಎನ್.ಎಚ್ ಕೋನರೆಡ್ಡಿ, ಮಂಗಳವಾರ ಅಥವಾ ಶುಕ್ರವಾರ ಜಲಾಶಯದಿಂದ ನೀರು ಬಿಡುಗಡೆ ಮಾಡುವುದು ಸಂಪ್ರದಾಯ. ಅದರಂತೆ ಸ್ವಲ್ಪಮಟ್ಟಿಗೆ ನೀರು ಬಿಡುಗಡೆ ಮಾಡಬೇಕು ಎಂದರು.
ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಮಲಪ್ರಭಾ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿಗಳು, ಸೇರಿದಂತೆ ನೀರಾವರಿ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು..