ಕೌಜಲಗಿ-31: ವೈವಿಧ್ಯಮಯವಾದ ಸಾವಯವ ಆಹಾರ ಬೆಳೆಗಳನ್ನು ಬೆಳೆಸುವುದರ ಮೂಲಕ ಸದೃಢ ಕೃಷಿ ಸಂಸ್ಕೃತಿಯ ಭಾರತ ಕಟ್ಟುವ ಕೆಲಸ ಮಾಡಬೇಕೆಂದು ಕೊಲ್ಲಾಪುರ ಕನ್ನೆರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ಬನಶಂಕರಿ ಗೋ ಸಂವರ್ಧನೆ, ಸಾವಯವ ಕೃಷಿ ಮತ್ತು ತರಬೇತಿ ಕೇಂದ್ರ ಕೌಜಲಗಿ, ಸಾವಯವ ಕೃಷಿ ಪ್ರಶಿಕ್ಷಣ ಕೇಂದ್ರ, ಕೇಶವ ಸ್ಮೃತಿ ಟ್ರಸ್ಟ್ ಇವರುಗಳು ಸಹಯೋಗದೊಂದಿಗೆ ಕೇಂದ್ರದ ಪ್ರಾಂಗಣದಲ್ಲಿ ಮಂಗಳವಾರ ದಂದು ನಮ್ಮೂರ ಕಾಯಿಪಲ್ಲೆ; ಬೆಳೆಸು ಬಳಸು ಬಾಳಿಸು ಅವಲೋಕನ ವಿಸ್ತರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಕನ್ನೆರಿ ಶ್ರೀಗಳು, ಪ್ರಾದೇಶಿಕತೆಯ ಗುಣಲಕ್ಷಣದಿಂದಾಗಿ ಬೇರೆ ಬೇರೆ ಬೆಳೆಗಳನ್ನು ಬೆಳೆಯಲಾಗುತ್ತದೆ.ಹೀಗೆ ವಿವಿಧ ಬೆಳೆಗಳನ್ನು ಪಡೆದು ಜೀವನಕ್ರಮವನ್ನು ಸಶಕ್ತವನ್ನಾಗಿಸಿಕೊಳ್ಳಬೇಕಾಗಿದೆ. ಸಾವಯವ ಬೆಳೆಗೆ ಬಾಡದ ಸಾಮರ್ಥ್ಯವಿದೆ. ಪ್ರತಿ ಕುಟುಂಬದವರು ರಾಸಾಯನಿಕ ಯುಕ್ತ ರಸಗೊಬ್ಬರ ಸಿಂಪಡಿಸುವುದಕ್ಕಿಂತ ಸಾವಯವ ತಿಪ್ಪೆ ಗೊಬ್ಬರವನ್ನು ಭೂಮಿಗೆ ಊಣ ಬಡಿಸಿ ರೋಗನಿರೋಧಕ ಬೆಳೆಯನ್ನು ಬೆಳೆಯಬೇಕು ಎಂದ ಶ್ರೀಗಳು ಮುಂದುವರೆದು, ರೈತರು ಒಣ ಹರಟೆ ಹೊಡೆಯುವುದಕ್ಕಿಂತ ಕೃಷಿ ಹರಟೆ ಹೊಡೆದು ನಿತ್ಯವೂ ಸಾವಯವ ಕೃಷಿಯ ಕುರಿತು ಚಿಂತನ ಮಂಥನ ಮಾಡುವುದರ ಮೂಲಕ ನಮ್ಮ ನಮ್ಮ ಕುಟುಂಬದ ಉಳಿವಿಗೆ ಮುಂದಾಗಬೇಕಾಗಿದ್ದು, ವಿಶೇಷವಾಗಿ ತಾಯಂದಿರು ತಮ್ಮ ಕುಟುಂಬಗಳ ಉಳಿವಿಗೆ ಸಾವಯವ ಆಹಾರ ಪದಾರ್ಥಗಳನ್ನು ಬೆಳೆದು ಪ್ರತಿದಿನವೂ ವೈವಿಧ್ಯಮಯವಾದ ಅಡುಗೆ ತಯಾರಿಸಿ ಕುಟುಂಬ ಉಳಿಸುವ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಪಿ ಎನ್ ಪಾಟೀಲ ಮಾತನಾಡಿ, ರೈತರು ವಿಷಯುಕ್ತ ಆಹಾರ ಪದಾರ್ಥಗಳನ್ನು ಬೆಳೆಯುವುದಕ್ಕಿಂತ, ಸಾವಯವ ಆಹಾರ ಪದಾರ್ಥಗಳನ್ನು ಬೆಳೆದು ರೋಗನಿರೋಧಕ ಶಕ್ತಿಯನ್ನು ವೃದ್ಧಿಸಬೇಕು. ತುರುಕರುಗಳಿಲ್ಲದ ಊರು ಊರಲ್ಲ : ಮನೆ ಮನೆಯಲ್ಲ ಎನ್ನುವಂತೆ, ಪ್ರತಿಯೊಂದು ರೈತ ಕುಟುಂಬದಲ್ಲಿ ಜವಾರಿ ಹಸುವನ್ನು ಸಾಕಿ ಅವರಿಂದ ಸಾವಯವ ಗೊಬ್ಬರ ನಿರ್ಮಿಸಿಕೊಳ್ಳಬೇಕು. ಬೆಳೆ ತೆಗೆದು ಉಳಿಕೆಯಾದ ತ್ಯಾಜ್ಯ ದಲ್ಲಿಯೂ ಶೇಕಡ 50ರಷ್ಟು ಪೋಷಕಾಂಶವಿರುತ್ತದೆ. ಅದನ್ನು ನಾಶ ಮಾಡದೆ ಸಂರಕ್ಷಿಸಿಕೊಳ್ಳಬೇಕು. ಸೂಕ್ಷ್ಮಾಣು ಜೀವಿಗಳು ರೈತನ ಮಿತ್ರ ಆಗಿರುವುದರಿಂದ ಅನುಜೀವಿ ಗೊಬ್ಬರವನ್ನು ರೈತರು ತಯಾರಿಸಿ ಬಳಸಿಕೊಳ್ಳಬೇಕು. ವಿಷಮಯವಾದ ಆಹಾರ ಬೆಳೆಯುತ್ತಿರುವುದರಿಂದ ರೈತನ ಕುಟುಂಬದಲ್ಲಿ ವಿಶೇಷವಾಗಿ ರೋಗಯುಕ್ತ ಮಕ್ಕಳು ಜನ್ಮ ತಲೆದು ಜೀವನ ಪರ್ಯಂತ ನರಳುವಂತಾಗಿದೆ ಇದರಿಂದ ರೈತರು ಮುಕ್ತರಾಗಿ ಸಾವಯವ ಆಹಾರ ಪದಾರ್ಥಗಳನ್ನು ಬೆಳೆಯಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ವರ್ಷದುದ್ದಕ್ಕೂ ಸಾವಯವ ಆಹಾರ ಪದಾರ್ಥಗಳನ್ನು ಬೆಳೆದ ಸುಮಾರು 15 ಹೆಚ್ಚು ಕೃಷಿ ದಂಪತಿಗಳನ್ನು ಗೌರವಿಸಲಾಯಿತು.
ವೇದಿಕೆ ಮೇಲೆ ಸುಣಧೋಳಿಯ ಜಡಿಸಿದ್ದೇಶ್ವರ ಮಠದ ಶಿವಾನಂದ ಮಹಾಸ್ವಾಮಿಗಳು, ಮನ್ನಿಕೇರಿ ಮಹಾಂತಲಿಂಗೇಶ್ವರ ಮಠದ ವಿಜಯಸಿದ್ದೇಶ್ವರ ಸ್ವಾಮೀಜಿ, ಸವಿತಾನಂದ ಮಹಾಸ್ವಾಮಿಗಳು ಕೌಜಲಗಿ ಬನಶಂಕರಿ ಗೋ- ಸಂವರ್ಧನೆ ಕೇಂದ್ರದ ವ್ಯವಸ್ಥಾಪಕ ಆನಂದ, ಅಮಿತ ಕುಲಕರ್ಣಿ, ಅಜ್ಜಪ್ಪ ಕುಲಗೋಡ, ರಮೇಶ ಕೌಜಲಗಿ ಇತರರು ಹಾಜರಿದ್ದರು.