23/12/2024

ಬೆಳಗಾವಿ-06 : ಕೆ.ಎಲ್.ಇ. ಸಂಸ್ಥೆಯು ಹಿಂದಿನಿAದಲೂ ಕನ್ನಡ ಉಳಿಸಿ-ಬೆಳೆಸುವ ಕಾರ್ಯವನ್ನು ಮಾಡುತ್ತಾ ಬಂದಿರುತ್ತದೆ.  ಕನ್ನಡ ಸಂಸ್ಕೃತಿ, ಪರಂಪರೆಯನ್ನು ಇಂದಿನ ಯುವಜನತೆಗೆ ಪರಿಚಯಿಸುವ ಕಾರ್ಯವನ್ನು ಮಾಡುತ್ತಿರುವುದು ಪ್ರಶಂಸನೀಯ ಎಂದು ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ಹೇಳಿದರು.

ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ), ಮಹಾವಿದ್ಯಾಲಯದಲ್ಲಿ ಶನಿವಾರ ದಿನಾಂಕ ೦೬ ಜನೇವರಿ, ೨೦೨೪ ರಂದು “ಕನ್ನಡ ನುಡಿ ವೈಭವ” ಕರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೆಎಲ್‌ಇ ಸಂಸ್ಥೆಯು ಗಡಿಭಾಗದಲ್ಲಿ ಕನ್ನಡವನ್ನು ಕಟ್ಟುವ ಕೆಲಸವನ್ನು ಮಾಡಿದೆ. ಕರ್ನಾಟಕ ಏಕೀಕರಣಕ್ಕಾಗಿ ಅಹೋರಾತ್ರಿಯಾಗಿ ಶ್ರಮಿಸಿದೆ. ಬೆಳಗಾವಿ ಕನ್ನಡದ ಭದ್ರಕೋಟೆಯಾಗಿ ಕಾರ್ಯನಿರ್ವಹಿಸಿದೆ. ಇಂದು ಬೆಳಗಾವಿ ಕನ್ನಡ ಕಂಪು ವಾತಾವರಣ ಪಸರಿಸಿದ್ದರೆ ಕೆಎಲ್‌ಇ ಸಂಸ್ಥೆಯ ಕೊಡುಗೆ ಅನನ್ಯವೆನಿಸಿದೆ. ಶ್ರೇಷ್ಠ ಕವಿಗಳಾದ ಡಾ. ಡಿ.ಎಸ್. ಕರ್ಕಿ, ಡಾ. ಚಂದ್ರಶೇಖರ ಕಂಬಾರ ಅಧ್ಯಯನ ಮಾಡಿ ಕನ್ನಡ ಸಾಹಿತ್ಯದಲ್ಲಿ ಶ್ರೇಷ್ಠ ಸಾಹಿತಿಗಳನ್ನಾಗಿ ರೂಪಿಸಿದೆ.  ಈ ಸಾಹಿತಿಗಳಿಂದ ಅನೇಕ ಪ್ರಕಾರಗಳ ಸಾಹಿತ್ಯ ಕೃಷಿಯನ್ನು ಮಾಡುವುದರ ಮೂಲಕ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ್ದಾರೆ. ಕನ್ನಡ ಭಾಷೆಯನ್ನು ಪ್ರೀತಿಸಬೇಕು. ನಮ್ಮ ತಾಯಿಯ ಭಾಷೆಯನ್ನು ನಾವು ಪ್ರೀತಿಸದಿದ್ದರೆ ಮತ್ತಾರು ಪ್ರೀತಿಸಲು ಸಾಧ್ಯ. ಈ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪ್ರತಿವರ್ಷ ಜನಪದ ಉತ್ಸವ ಕನ್ನಡ ಹಬ್ಬಗಳನ್ನು ಆಚರಿಸುವುದರ ಮೂಲಕ ಕನ್ನಡದ ಅಸ್ಮೀತೆಯ ಸಾಕ್ಷಿಯಾಗಿ ನಿಂತಿದೆ. ಇಂತಹ ಕನ್ನಡದ ಕಾರ್ಯಕ್ರಮಗಳು ಮತ್ತೆ ಮತ್ತೆ ಜರುಗಲೇಬೇಕು. ಕನ್ನಡ ವಾತಾವರಣವನ್ನು ನಿರ್ಮಿಸುವ ಕೆಲಸ ನಿಮ್ಮಂಥ ವಿದ್ಯಾರ್ಥಿಗಳಿಂದ ಅನುದಿನವು ಜರುಗಲೆಂದು ಎಂದು ಕರೆನೀಡಿದರು.
ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆಎಲ್‌ಇ ನಿರ್ದೇಶಕರಾದ ಮಹಾಂತೇಶ ಎಂ. ಕವಟಗಿಮಠ ಅವರು ಮಾತನಾಡುತ್ತಾ, ಪ್ರತಿಯೊಬ್ಬ ಕನ್ನಡಿಗರಲ್ಲಿ ಕನ್ನಡ ಭಾಷೆಯ ಅವಿಭಾಜ್ಯ ಅಂಗವಾಗಬೇಕು.  ಪ್ರಾದೇಶಿಕ ಭಾಷೆಯನ್ನು ಪ್ರೀತಿಸುವದರೊಂದಿಗೆ ಅನ್ಯ ಭಾಷೆಗಳ ಮೇಲೆ ಪ್ರಭುತ್ವ ಸಾಧಿಸಬೇಕು.  ಗತಕಾಲದ ಕನ್ನಡದ ವೈಭವವನ್ನು ನಾವೆಲ್ಲರೂ ಇಂದು ಮುಂದುವರೆಸಿಕೊಂಡು ಇಂದಿನ ಯುವ ಜನತೆಯು ಅಳವಡಿಸಿಕೊಳ್ಳಬೇಕು. ಕರ್ನಾಟಕ ನಾಮಕರಣವಾಗಿ ಐವತ್ತು ವರ್ಷಾಗಳಾಯಿತು. ಕನ್ನಡ ಧ್ವನಿ ಗಡಿಭಾಗದಲ್ಲೇ ಪ್ರತಿಧ್ವನಿಸುತ್ತದೆ. ಇಂತಹ ಮಹಾವಿದ್ಯಾಲಯದಲ್ಲಿ ಕನ್ನಡಪರ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವದರ ಮೂಲಕ ಕನ್ನಡ ಭಾಷೆಯು ಬೆಳೆಸಿ-ಉಳಿಸಿಕೊಳ್ಳಲು ಕಂಕಣ ಬದ್ದರಾಗಬೇಕೆಂದು ನುಡಿದರು.
ಈ ಕಾರ್ಯಕ್ರಮಕ್ಕೆ ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ್ದ ಹಾವೇರಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಡಾ.(ಶ್ರೀಮತಿ.) ವಿಜಯಲಕ್ಷ್ಮಿ ತಿರ್ಲಾಪೂರ ಅವರು ಮಾತನಾಡುತ್ತಾ ಜನಪದ ಭಾಷೆಯು ಶ್ರೀಮಂತವಾದುದು.  ಕನ್ನಡ ಸಂಸ್ಕೃತಿಯು ಗ್ರಾಮೀಣರ ಉಡುಗೆ-ತೊಡುಗೆ, ನಡೆ-ನುಡಿಗಳಲ್ಲಿ, ಆಚಾರ-ವಿಚಾರಗಳಲ್ಲಿ ಕಂಡು ಬರುತ್ತದೆ.  ಕನ್ನಡ ಸಾಹಿತ್ಯ ಪರಂಪರೆಯ ಮಹತ್ವವನ್ನು ತಿಳಿಸಿದರು.  ಜಾನಪದ ಆಚರಣೆಗಳನ್ನು ಆಚರಿಸುವದರ ಮೂಲಕ ಆರೋಗ್ಯ ಸುಧಾರಣೆಯಾಗಲು ಸಾಧ್ಯವಿದೆ.  ಜಾನಪದರ ಹಾಡುಗಳನ್ನು ಜೀವಂತವಾಗಿಡಲು ಇಂದಿನ ವಿದ್ಯಾರ್ಥಿಗಳು ಜನಪದ ಹಾಡುಗಳನ್ನು ಅನುಸರಿಸಿಕೊಳ್ಳಬೇಕೆಂದು ನುಡಿದರು.
ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಲಿಂಗೌಡ ವ್ಹಿ. ದೇಸಾಯಿ ಅವರು ಮಾತನಾಡುತ್ತಾ, ವಿಜ್ಞಾನ ಮಹಾವಿದ್ಯಾಲಯದಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಬೇಕು.  ವಿಜ್ಞಾನ ವಿದ್ಯಾರ್ಥಿಗಳು ಇಂತಹ ಉತ್ಸವ ಮತ್ತು ಹಬ್ಬಗಳಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ನುಡಿದರು.  ವೇದಿಕೆಯ ಮೇಲೆ ಮಹಿಳಾ ರಾಣಿ ಚನ್ನಮ್ಮಾ ಬ್ಯಾಂಕಿನ ಅಧ್ಯಕ್ಷೆ ಆಶಾ ಪ್ರಭಾಕರ  ಕೋರೆ, ಪಪೂ ಪ್ರಾ. ವ್ಹಿ.ಸಿ. ಕಾಮಗೋಳ ಉಪಸ್ಥಿತರಿದ್ದರು  
ಸಮಾರಂಭದಲ್ಲಿ ಪ್ರಾಚಾರ್ಯರಾದ ಡಾ.ಜ್ಯೋತಿ  ಕವಳೇಕರ ಸರ್ವರನ್ನು ಸ್ವಾಗತಿಸಿದರು.  ಮಹಾದೇವಿ ಸಿ. ಹುಣಶೀಬೀಜ ವಂದಿಸಿದರು.  ಕೆ.ಎಲ್.ಇ. ಸಂಗೀತಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಎಸ್.ಬಿ. ಬನ್ನಿಮಟ್ಟಿ ಮತ್ತು ಶಿಲ್ಪಾ ರುದ್ರನ್ನವರ ಕಾರ್ಯಕ್ರಮ ನಿರೂಪಿಸಿದರು.  
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ತದನಂತರದಲ್ಲಿ ಸಂಗೀತ, ನೃತ್ಯ, ಚಿಂತನೆ ಮೊದಲಾದ ಕನ್ನಡ ಕುರಿತು ಸಮಾರಂಭಗಳು ಜರುಗಿದವು. ಇದಕ್ಕಿಂತಲೂ ಪೂರ್ವದಲ್ಲಿ ನಾಡದೇವಿ ಭುವನೇಶ್ವರ ಭವ್ಯ ಮೆರವಣಿಗೆಗೆ ಡಾ ಪ್ರಭಾಕರ ಕೋರೆಯವರು ಚಾಲನೆ ನೀಡಿದರು. ಕನ್ನಡ ಹಬ್ಬದಲ್ಲಿ ಅನೇಕ ಮಳಿಗೆಗೆಳನ್ನು ತೆರೆಯಲಾಗಿತ್ತು.

error: Content is protected !!