ಬೆಳಗಾವಿ-೧೯: ” ಧರ್ಮವು ಭಕ್ತಿಯ ತಳಹದಿ ಮೇಲೆ ನಿಂತಿದೆ, ಭಯದ ವಾತಾವರಣ ಸೃಷ್ಟಿಸಿ ಧರ್ಮ ಹಾಗೂ ಹರಕೆಯ ಹೆಸರಿನಲ್ಲಿ ದೇವಿಗೆ ಪ್ರಾಣಿ ಬಲಿ ಕೊಡುವುದು ಅಕ್ಷಮ್ಯ ಅಪರಾಧವಾಗಿದೆ. ಇದೇ ತಿಂಗಳು ವಡಗಾಂವಿ ಶ್ರೀ ಮಂಗಾಯಿ ದೇವಿ ಜಾತ್ರೆ ನಡೆಯಲಿದೆ, ಇಲ್ಲಿ ಪ್ರಾಣಿ ಬಲಿ ನಿಲ್ಲದಿದ್ದರೆ ಕಾನೂನು ಹೋರಾಟ ಮಾಡಲಾಗುವುದು” ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷ ದಯಾನಂದ ಸ್ವಾಮೀಜಿ ತಿಳಿಸಿದರು.
ನಗರದ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಮ್ಮ ಹೋರಾಟ ಜಯ ಸಿಕ್ಕಿದೆ. ತಾಲೂಕಿನ ಐತಿಹಾಸಿಕ ಪ್ರಸಿದ್ಧ ಉಚ್ಚಗಾಂವ ಮಳೆ ಕರಣಿ ದೇವಾಲಯದಲ್ಲಿ ಶ್ವಾಶತ ಪ್ರಾಣಿ ಬಲಿ ನಿಲ್ಲಿಸಿರುವುದು ಇಲ್ಲಿನ ಜನತೆಗೆ ಅಭಿನಂದನೆ ಸಲ್ಲಿಸುತ್ತೆನೆ. ಜಿಲ್ಲೆಯ ಎಲ್ಲಾ ಗ್ರಾಮ ವ್ಯಾಪ್ತಿಯಲ್ಲಿ ಪ್ರಾಣಿ ಬಲಿ ನಿಲ್ಲಿಸಬೇಕು ಎಂದು ಕಾನೂನು ಮತ್ತು ಹೈಕೋರ್ಟ್ ಆದೇಶಗಳಡಿಯಲ್ಲಿ ಜಿಲ್ಲಾಡಳಿತಕ್ಕೆ- ಪೊಲೀಸ್ ಇಲಾಖೆ ಮನವಿ ಸಲ್ಲಿಸಲಾಗಿದೆ ಎಂದರು.
ಪ್ರಾಣಿಗಳಿಗೆ ನೀಡುತ್ತಿರುವ ಹಿಂಸೆ ಬಗ್ಗೆ ಜನರಲ್ಲಿ, ಭಕ್ತ ಸಮೂಹಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಮ್ಮ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ವತಿಯಿಂದ ಯಾತ್ರೆ ಪ್ರಾರಂಭಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಇದೇ ತಿಂಗಳೂ 27 ರಿಂದ ಮೂರು ದಿನಗಳವರೆಗೆ ವಡಗಾಂವಿಯಲ್ಲಿ ಶ್ರೀ ಮಂಗಾಯಿ ದೇವಿ ಜಾತ್ರೆಯಲ್ಲಿ ಆಯೋಜಿಸಲಾಗಿದ್ದು, ಈ ದೇವಸ್ಥಾನದಲ್ಲಿ ಪ್ರಾಣಿ ಬಲಿ ನಡೆಯಲಿವೆ ದೇವಸ್ಥಾನ ಸರ್ಕಾರದ ವ್ಯಾಪ್ತಿಯಲ್ಲಿದ್ದು ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಾಣಿ ಬಲಿ ಮಾಡಬಾರದು ಎಂದು ನ್ಯಾಯಾಲಯದ ಆದೇಶ ಕೂಡ ಇದೆ. ಕಾರಣ ಭಕ್ತರು ಪ್ರಾಣಿ ಬಲಿ ಮಾಡುವುದು ಸಂಪೂರ್ಣ ನಿಲ್ಲಿಸಬೇಕು ದೇವಿಗೆ ಭಕ್ತಿಯಿಂದ ಪೂಜೆ ಮಾಡುವುದರ ಮೂಲಕ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದವರು. ಪ್ರಾಣಿಬಲಿ ತಡೆಯಲು ಜಿಲ್ಲಾಡಳಿತ , ಪೊಲೀಸ್ ಇಲಾಖೆ, ಅಧಿಕಾರಿ ವರ್ಗದವರು ಇನ್ನಷ್ಟು ಕಟ್ಟುನಿಟ್ಟಿನ ಆದೇಶ ಜಾರಿಗೊಳಿಸಿ ಪ್ರಾಣಿ ಹಿಂಸೆ ತಡೆಯಬೇಕು ಎಂದು ದಯಾನಂದ ಸ್ವಾಮೀಜಿ ಒತ್ತಾಯಿಸಿದರು.
‘ಧರ್ಮದ ಹೆಸರಿನಲ್ಲಿ, ದೇವರ ನೆಪದಲ್ಲಿ ಕೋಳಿ, ಕುರಿ, ಆಡು, ಕೋಣ ಬಲಿ ನೀಡುವುದು ಅಪರಾಧ. ಕರ್ನಾಟಕ ಪ್ರಾಣಿ ಬಲಿ ಪ್ರತಿಬಂಧಕ ಅಧಿನಿಯಮ 1959, 1963, ತಿದ್ದುಪಡಿ ಕಾಯ್ದೆ 1975ರ ಪ್ರಕಾರ ಶಿಕ್ಷೆ ಇದೆ.
‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ–2020’ರ ಪ್ರಕಾರ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಮಾಡಲಾಗಿದೆ. ಇದರ ಅನ್ವಯ ಯಾವುದೇ ವಯಸ್ಸಿನ ಹಸು, ಹೋರಿ ಅಥವಾ ಕರುವನ್ನು ಹತ್ಯೆ ಮಾಡುವುದು ಶಿಕ್ಷಾರ್ಹ ಅಪರಾಧ. 13 ವರ್ಷ ಮೇಲ್ಪಟ್ಟ ಎಮ್ಮೆ, ಕೋಣಗಳನ್ನೂ ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಇಲ್ಲದೇ ಹತ್ಯೆ ಮಾಡುವಂತಿಲ್ಲ.
ಕಾನೂನು ಉಲ್ಲಂಘಿಸಿದರೆ 3ರಿಂದ 7 ವರ್ಷಗಳವರೆಗೆ ಶಿಕ್ಷೆ ಹಾಗೂ ₹50 ಸಾವಿರದಿಂದ ₹10 ಲಕ್ಷದವರೆಗೆ ದಂಡ ವಿಧಿಸಲು ಅವಕಾಶವಿದೆ. ಆದ್ದರಿಂದ ಪ್ರಾಣಿ ಬಲಿ ತಡೆಗೆ ಸಾರ್ವಜನಿಕರು ಕೈ ಜೋಡಿಸಬೇಕು’ ಎಂದೂ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.