ಬಡಾಲ ಅಂಕಲಗಿ (ಬೆಳಗಾವಿ)-೦೩: ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಯಲ್ಲಪ್ಪ ಭೀಮಪ್ಪ ರಾಮಣ್ಣವರ್ ಎಂಬುವರ ಗುಡಿಸಿಲಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಸಂಪೂರ್ಣ ಭಸ್ಮವಾಗಿದೆ. ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್, ಅಪಾರ ನಷ್ಟದಿಂದ ತತ್ತರಿಸಿದ ಕುಟುಂಬಕ್ಕೆ ಸಾಂತ್ವನ ಹೇಳಿದರು. ಜೊತೆಗೆ ವೈಯಕ್ತಿಕ 50 ಸಾವಿರ ನೆರವು ನೀಡಿದರು.
ಬಡಾಲ ಅಂಕಲಗಿ ಗ್ರಾಮದಲ್ಲಿ ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಯಲ್ಲಪ್ಪ ಭೀಮಪ್ಪ ರಾಮಣ್ಣವರ ಮನೆ ಆಕಸ್ಮಿಕ ಬೆಂಕಿ ಅನಾಹುತದಿಂದ ಸುಟ್ಟು ಕರಕಲಾಗಿದೆ. ಅನಾಹುತದಿಂದಾಗಿ ಶೆಡ್ ನಲ್ಲಿದ್ದ ಚಿನ್ನ, ಬೆಳ್ಳಿ, 2.50 ಲಕ್ಷ ರೂಪಾಯಿ ಹಣ, ಮನೆಯಲ್ಲಿನ ದಿನ ಬಳಕೆಯ ವಸ್ತುಗಳು ಸುಟ್ಟು ನಾಶವಾಗಿವೆ.
ಯಲ್ಲಪ್ಪ ಭೀಮಪ್ಪ ರಾಮಣ್ಣವರ್ ಹೊಸ ಮನೆ ನಿರ್ಮಾಣ ಮಾಡುತ್ತಿದ್ದು, ಹೀಗಾಗಿ ಇಡೀ ಕುಟುಂಬ ಗುಡಿಸಿಲಿಗೆ ಸ್ಥಳಾಂತರಗೊಂಡಿತ್ತು. ಹಣ, ಒಡವೆ ಎಲ್ಲವೂ ಮನೆಯಲ್ಲಿದ್ದವು. ಆದರೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕುಟುಂಬ ಎಲ್ಲವನ್ನೂ ಕಳೆದುಕೊಂಡಿದೆ. ಕುಟುಂಬದ ರೋಧನ ಮುಗಿಲುಮುಟ್ಟಿತ್ತು.
ಚುನಾವಣೆ ಪ್ರಚಾರದಲ್ಲಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದರು. ಕುಟುಂಬಕ್ಕೆ ವೈಯಕ್ತಿಕವಾಗಿ 50 ಸಾವಿರ ರೂಪಾಯಿ ನೆರವು ನೀಡಿದ ಸಚಿವರು, ‘ಇಂಥ ಕಷ್ಟದ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಿ, ನಿಮ್ಮ ಜೊತೆಗೆ ನಾನಿದ್ದೇನೆ’ ಎಂದು ಸಚಿವರು ಭರವಸೆ ನೀಡಿದರು.
ಈ ವೇಳೆ ಬಡಾಲ ಅಂಕಲಗಿ ಗ್ರಾಮಸ್ಥರು, ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.