23/12/2024
IMG-20240501-WA0031

ಬೆಳಗಾವಿ-೦೧: ಲೋಕಸಭೆ ಚುನಾವಣೆ-2024 ಅಂಗವಾಗಿ ಮೇ 7, 2024ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೇ 6 ಹಾಗೂ 7 ರಂದು ಅಭ್ಯರ್ಥಿಗಳು/ಸಂಸ್ಥೆಗಳು ಅಥವಾ ಯಾವುದೇ ವ್ಯಕ್ತಿಯು ದಿನಪತ್ರಿಕೆಗಳಲ್ಲಿ ಯಾವುದೇ ರೀತಿಯ ಚುನಾವಣಾ ಜಾಹೀರಾತು ಪ್ರಕಟಿಸಬೇಕಾದರೆ ಸದರಿ ಜಾಹೀರಾತಿಗೆ ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿಯ(ಎಂಸಿಎಂಸಿ) ಕಡೆಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ಚುನಾವಣಾ ಜಾಹೀರಾತು ಪ್ರಕಟಿಸಲು ಬಯಸುವ ಅಭ್ಯರ್ಥಿಗಳು ಮೇ 6 ಹಾಗೂ 7 ರಂದು ಮುದ್ರಣ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸಬೇಕಾದರೆ ಸದರಿ ಜಾಹೀರಾತಿನ ಎರಡು ಸ್ವಯಂ ದೃಢೀಕೃತ ಪ್ರತಿಗಳೊಂದಿಗೆ ನಿಗದಿತ ಅರ್ಜಿ ನಮೂನೆಯಲ್ಲಿ ಮೇ 4 ರೊಳಗೆ ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ(ಎಂಸಿಎಂಸಿ)ಗೆ ಅರ್ಜಿ ಸಲ್ಲಿಸಬೇಕು.

ಪೂರ್ವಾನುಮತಿಗೆ ಅರ್ಜಿ ಲಭ್ಯ:

ಮೇ 6 ಹಾಗೂ 7 ರಂದು ಮುದ್ರಣ ಮಾಧ್ಯಮದಲ್ಲಿ ಪ್ರಕಟಿಸಲು ಅಗತ್ಯವಿರುವ ನಿಗದಿತ ನಮೂನೆಯ ಅರ್ಜಿ ನಮೂನೆಗಳು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ‘ವಾರ್ತಾಭವನ’ ನ್ಯಾಯಾಲಯ ಆವರಣ, ಬೆಳಗಾವಿ- ಈ ಕಚೇರಿಯಿಂದ ಪಡೆಯಬಹುದು.

ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಜಾಹೀರಾತುಗಳನ್ನು ಪ್ರಕಟಿಸಲು ಜಿಲ್ಲಾಮಟ್ಟದ ಎಂಸಿಎಂಸಿ ಕಡೆಯಿಂದ ಪೂರ್ವಾನುಮತಿ ಪಡೆಯದ ಅಭ್ಯರ್ಥಿಗಳ ಜಾಹೀರಾತುಗಳನ್ನು ಸ್ಥಳೀಯ, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ದಿನಪತ್ರಿಕೆಗಳು ಪ್ರಕಟಿಸಬಾರದು ಎಂದು ಚುನಾವಣಾ ಆಯೋಗ ತಿಳಿಸಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

error: Content is protected !!